ಕೆ.ಎನ್.ಪಿ.ವಾರ್ತೆ,ಧಾರವಾಡ,ಜೂ.29;

ವಿವಿಧ ವಸತಿ ಯೋಜನೆ ಅವಧಿ ವಿಸ್ತರಿಸಲು ಸೂಚನೆ ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಸಂಸದ ಪ್ರಹ್ಲಾದ ಜೋಷಿ ಸೂಚಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಜನರ ಬೇಡಿಕೆ ಸಮೀಕ್ಷೆ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಸಮೀಕ್ಷೆ ಕಾರ್ಯದ ಬಗೆಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡಲು ವ್ಯಾಪಕ ಪ್ರಚಾರದ ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ಕಾರ್ಯದ ಅವಧಿಯನ್ನು ಜುಲೈ 15 ರವರೆಗೆ ವಿಸ್ತರಿಸಲು ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಸಂಸದ ಪ್ರಹ್ಲಾದ ಜೋಷಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಹ್ಲಾದ ಜೋಷಿ

ಇಲ್ಲಿನ ಜಿ.ಪಂ.ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆ ನಡೆಸಿದ ಅವರು, ವಿವಿಧ ಇಲಾಖೆಗಳಡಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಕಳೆದ ನಾಲ್ಕು ವರ್ಷಗಳ ಪ್ರಗತಿ ವರದಿಯನ್ನು ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಲೋಕಸಭಾ ಸದಸ್ಯರ ಕಚೇರಿಗೆ ತ್ವರಿತವಾಗಿ ತಲುಪಿಸಬೇಕು. ಪ್ರತಿ ತಿಂಗಳೂ ಸಹ ನಿಯಮಿತವಾಗಿ ಪ್ರಗತಿ ವರದಿಗಳನ್ನು ಕಳಿಸಬೇಕು ಎಂದರು.

2022 ರೊಳಗಾಗಿ ಎಲ್ಲರಿಗೂ ಸೂರು ಒದಗಿಸುವ ಕನಸು ಭಾರತ ಸರಕಾರದ್ದಾಗಿದೆ. ವಿವಿಧ ವಸತಿ ಯೋಜನೆಗಳಡಿ ಅಕ್ರಮಗಳು ನಡೆದಾಗ ತಕ್ಷಣ ಶಿಸ್ತು ಕ್ರಮ ಜರುಗಿಸಬೇಕು. ಆಗ ಮಾತ್ರ ಡುಪ್ಲಿಕೇಷನ್‍ಗಳನ್ನು ತಡೆಯಬಹುದು. ಡಾಟಾ ಎಂಟ್ರಿ ಆಪರೇಟರ್‍ಗಳನ್ನು ಅದೇ ತಾಲ್ಲೂಕಿನವರನ್ನು ಹಾಕಬೇಡಿ , ನೆರೆಯ ತಾಲ್ಲೂಕಿನ ಆಪರೇಟರ್‍ಗಳೊಂದಿಗೆ ಸ್ಥಳ ಬದಲಾವಣೆ ಮಾಡಿಕೊಳ್ಳಬೇಕು.

ಪ್ರಭಾವಿಗಳಿಗೆ ಪದೇ ಪದೇ ಮನೆಗಳನ್ನು ಹಂಚಿಕೆಯಾಗದಂತೆ ತಡೆದಾಗ ಮಾತ್ರ, ಉಳಿದ ಎಲ್ಲ ಅರ್ಹರಿಗೂ ಸೂರು ಸಿಗಲು ಸಾಧ್ಯವಾಗುತ್ತದೆ. ಬೇಡಿಕೆ ಸಮೀಕ್ಷೆಯಲ್ಲಿ ಎಷ್ಟು ಮನೆಗಳು ಅಗತ್ಯವಿದೆ ಎಂಬುದನ್ನು ಗುರುತಿಸಿ, ಎಲ್ಲರಿಗೂ ಮನೆಗಳನ್ನು ಮಂಜೂರು ಮಾಡುವ ಉದ್ದೇಶವಿದೆ.

ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಗ್ರಾ.ಪಂ.ಗಳ ಮೂಲಕ ಬೇಡಿಕೆ ಸಮೀಕ್ಷೆ ಕಾರ್ಯ ಚುರುಕುಗೊಳಿಸಬೇಕು. ಎಲ್ಲ ಗ್ರಾ.ಪಂ.ಗಳ ಎದುರು ಬ್ಯಾನರುಗಳನ್ನು ಅಳವಡಿಸಿ ಜನರಿಗೆ ಈ ಕುರಿತು ಮಾಹಿತಿ ಒದಗಿಸಬೇಕು. ಬರುವ ವಿಧಾನಸಭಾ ಅಧಿವೇಶನದ ಬಳಿಕ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿಯೇ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲನಾ ಸಭೆಗಳನ್ನು ನಡೆಸಲಾಗುವದು.

ಜಿಲ್ಲಾ ಮಟ್ಟದಲ್ಲಿ ನಡೆಯುವ ಪರಿಶೀಲನಾ ಸಭೆಗಳ ಅನುಪಾಲನಾ ವರದಿಗಳನ್ನು ಸಭೆಯ ಬಳಿಕ 15 ದಿನಗಳ ಒಳಗಾಗಿ ಕಳಿಸಿಕೊಡಬೇಕು ಎಂದು ಸಂಸದ ಪ್ರಹ್ಲಾದ ಜೋಷಿ ಸೂಚಿಸಿದರು.

ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ್ ಮಾತನಾಡಿ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 2017-18 ರಲ್ಲಿ ಮಂಜೂರಾದ 52 ಲಕ್ಷ ರೂ.ವೆಚ್ಚದ ಕಾಮಗಾರಿಗಳು ಇದುವರೆಗೆ ಆರಂಭವಾಗಿಲ್ಲ. ಕಲಘಟಗಿ ತಹಸೀಲ್ದಾರ ಕಚೇರಿಯ ಸಮಗ್ರ ಸುಧಾರಣೆಗೆ ಒತ್ತು ನೀಡಬೇಕು. ಅಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಚಿತ್ವ ಕಾಪಾಡಬೇಕು.

ವೈದ್ಯಾಧಿಕಾರಿಗಳನ್ನು ನೇಮಿಸಬೇಕು ಎಂದು ಹೇಳಿದಾಗ , ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉತ್ತರ ನೀಡಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಒಟ್ಟು 32 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅವುಗಳಲ್ಲಿ 26 ಕಾಮಗಾರಿಗಳ ಅಂದಾಜು ವೆಚ್ಚದ ಪಟ್ಟಿ ಅನುಮೋದನೆಗೆ ಸಲ್ಲಿಕೆಯಾಗಿದೆ. ಅಳ್ನಾವರ ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿದ್ಯುತ್ ನಿಲುಗಡೆಯಾದಾಗ ಜನರೇಟರ್ ಸೌಲಭ್ಯ ಇಲ್ಲದೇ ರೋಗಿಗಳು ಪರದಾಡುವ ಸ್ಥಿತಿ ಇದೆ. ಶುಚಿತ್ವ ನಿರ್ವಹಣೆಗೆ ಒತ್ತು ನೀಡಬೇಕು ಎಂದರು.

ಆಗ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ಎಂ.ದೊಡ್ಡಮನಿ, ಎಲ್ಲ ಆಸ್ಪತ್ರೆಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಸಮಯದಲ್ಲಿ ಬಳಸಲು ಇನ್ವರ್ಟರ್‍ಗಳನ್ನು ಅಳವಡಿಸಲಾಗಿದೆ. ಸಭೆಯ ಸೂಚನೆಯಂತೆ ಜನರೇಟರ್ ಅಥವಾ ಸೌರಶಕ್ತಿ ಆಧಾರಿತ ಪರ್ಯಾಯ ವಿದ್ಯುತ್ ಸೌಕರ್ಯ ಕಲ್ಪಿಸಲಾಗುವದು ಎಂದರು.

ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ 2016 ರ ಮುಂಗಾರು ಹಂಗಾಮಿಗೆ ಜಿಲ್ಲೆಯ 89983 ರೈತರಿಗೆ 172 ಕೋಟಿ ರೂ.ಬೆಳೆವಿಮೆ ಬರಬೇಕಾಗಿದೆ. 115 ಕೋಟಿ ರೂ.ಗಳು ಬಂದಿದ್ದು ಒಂದು ವಾರದೊಳಗಾಗಿ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹಾಜರಿದ್ದ ಕೆಲವು ರೈತ ಸಂಘಟನೆಗಳ ಮುಖಂಡರು ಬೆಳೆವಿಮೆ ಹಣವನ್ನು ರೈತರ ಸಾಲದ ಖಾತೆಗಳಿಗೆ ಹೊಂದಿಕೆ ಮಾಡಬಾರದು ಎಂದು ಒತ್ತಾಯಿಸಿದರು. ಈ ವಿಷಯ ಉನ್ನತ ಮಟ್ಟದಲ್ಲಿ ತೀರ್ಮಾನವಾಗಬೇಕಾಗುವದರಿಂದ ಅಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವದು ಎಂದು ಸಂಸದ ಪ್ರಹ್ಲಾದ ಜೋಷಿ ಹೇಳಿದರು.

ಧಾರವಾಡ

ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಗೆ ಸ್ಥಳ ಗುರುತಿಸಿ ;

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಸೌಲಭ್ಯವುಳ್ಳ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ಕೋರಿ, ರಾಜ್ಯ ಸರಕಾರದಿಂದ ಸೂಕ್ತ ನಿವೇಶನ ಒದಗಿಸುವ ಭರವಸೆಯೊಂದಿಗೆ, ಪ್ರಸ್ತಾವನೆ ಸಲ್ಲಿಕೆಯಾದರೆ ಕೇಂದ್ರ ಸರಕಾರದಿಂದ ಆಸ್ಪತ್ರೆ ಮಂಜೂರು ಮಾಡಿಸಲಾಗುವದು.

ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು, ಅಧಿಕಾರಿಗಳು ರಾಜ್ಯ ಸರಕಾರದ ಮೂಲಕ ಸೂಕ್ತ ಪ್ರಸ್ತಾವನೆ ಕಳಿಸಲು ಕಾಳಜಿ ವಹಿಸಬೇಕು ಎಂದು ಸಂಸದ ಪ್ರಹ್ಲಾದ ಜೋಷಿ ಸಭೆಯಲ್ಲಿ ಹೇಳಿದರು. ಆಗ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಕ್ತ ನಿವೇಶನ ಗುರುತಿಸಿ, ಮಾಹಿತಿ ನೀಡುತ್ತೇನೆ ಎಂದರು.

ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಸ್ವಚ್ಛ ಭಾರತ ಮಿಷನ್ ಅಡಿ ಜಿಲ್ಲೆಯ 100 ಗ್ರಾಮ ಪಂಚಾಯತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸುಸ್ಥಿರ ಅಭಿವೃದ್ಧಿ ದೃಷ್ಟಿಕೋನದಿಂದ ನಿರ್ಮಿಸಲಾಗುವದು ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 24 ಲಕ್ಷ 59 ಸಾವಿರ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ. ಜುಲೈ 15 ರೊಳಗಾಗಿ ಎಲ್ಲ ಗ್ರಾ.ಪಂ.ಗಳಿಂದ ಕ್ರಿಯಾ ಯೋಜನೆ ಕ್ರೋಢೀಕರಿಸಿ ಅನುಮೋದನೆ ಪಡೆದು ಕಾರ್ಯ ಆರಂಭಿಸಲಾಗುವದು ಎಂದು ಜಿ.ಪಂ.ಉಪಕಾರ್ಯದರ್ಶಿ ಎಸ್.ಜಿ.ಕೊರವರ್ ಸಭೆಗೆ ಮಾಹಿತಿ ಒದಗಿಸಿದರು.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ, 77 ಕೊಠಡಿಗಳ ನಿರ್ಮಾಣಕ್ಕೆ ಹಣ ದೊರೆತಿದೆ. 58 ಕಾಮಗಾರಿಗಳು ಆರಂಭವಾಗಿವೆ. 14 ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ. 5 ಕಡೆಗಳಲ್ಲಿ ನಿವೇಶನಗಳ ಕೊರತೆ ಇದೆ ಎಂದು ಡಿಡಿಪಿಐ ಎನ್.ಹೆಚ್.ನಾಗೂರ ಸಭೆಗೆ ತಿಳಿಸಿದರು.

ವರದಿ : ಚಂದ್ರು ಹಿರೇಮಠ ಧಾರವಾಡ

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.