ಕೆ.ಎನ್.ಪಿ.ವಾರ್ತೆ,ಗಂಗಾವತಿ,ಏ.17;
ತಾಲೂಕಿನ ಬಸವೇಶ್ವರ ಜಯಂತ್ಯೋತ್ಸವ ಆಚರಣೆ ಸಮಿತಿಯಿಂದ ಮಹಾ ಮಾನವತಾವಾದಿ ಲಿಂಗಾಯತ ಧರ್ಮ ಸಂಸ್ಥಾಪಕ ವಿಶ್ವಗುರು ಬಸವಣ್ಣನವರ 885ನೇ ಜಯಂತಿಯನ್ನು ನಾಳೆ ಆಯೋಜಿಸಲಾಗಿದೆ.
ನಗರದ ಬಸವೇಶ್ವರ ವೃತ್ತದಲ್ಲಿ ನಾಳೆ ಬೆಳಿಗ್ಗೆ 8ಗಂಟೆಗೆ ವಿಶ್ವಗುರು ಬಸವಣ್ಣನವರ 885ನೇ ಜಯಂತಿ ಪ್ರಯುಕ್ತ, ಶರಣ ಹೆಚ್.ಬಸವಲಿಂಗಪ್ಪ ಅವರಿಂದ ಷಟಸ್ಥಲ ದ್ವಜಾರೋಹಣ ನೆರವೇರಲಿದ್ದು, ಇದೇ ವೇಳೆ ಗುರು ಬಸವ ಪೂಜೆ ಹಾಗೂ ವಚನ ಮಂಗಲ ನೆರವೇರಲಿದೆ.
ಧರ್ಮಗುರು ಬಸವಣ್ಣನವರ ಭಾವಚಿತ್ರದ ಮೆರವಣಿಗೆ :
ಧರ್ಮಗುರು ಬಸವಣ್ಣನವರ ಭಾವಚಿತ್ರದ ಮೆರವಣಿಗೆಯು ಸಂಜೆ 4ಗಂಟೆಗೆ ಬಸವೇಶ್ವರ ವೃತ್ತದಿಂದ ಹೊರಟು ಶ್ರೀ ಕೃಷ್ಣದೇವರಾಯ ವೃತ್ತ, ನೀಲಕಂಠೇಶ್ವರ ವೃತ್ತ, ಭಗೀರಥ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್, ವಾಸವಿ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮುಖಾಂತರ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾರೋಪಗೊಳ್ಳಲಿದೆ.
ಸಂಜೆ 6ಗಂಟೆಯಿಂದ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ವೇದಿಕೆ ಕಾರ್ಯಕ್ರಮಗಳು ನಡೆಯಲಿದ್ದು, ವಾಣಿಜ್ಯೋದ್ಯಮಿಗಳಾದ ಶರಣ ಸುರೇಶ ಸಿಂಗನಾಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೊಟ್ಟೂರು ಬಸವೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಾದ ಶರಣ ಶೇಖರಪ್ಪ ಅರಳಿ ವಿಶೇಷ ಆಹ್ವಾನಿತರು.
ಶರಣ ಸಾಹಿತ್ಯ ಪರಿಷತ್ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಗಂಗಾವತಿ ಬಸವೇಶ್ವರ ಜಯಂತ್ಯೋತ್ಸವ ಆಚರಣೆ ಸಮಿತಿಯ ಸಂಚಾಲಕರಾದ ಡಾ.ಶಿವಕುಮಾರ ಮಾಲಿಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಗಂಗಾವತಿಯ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಶರಣ ಪಂಪಣ್ಣ ಕಿನ್ನಾಳ, ಬಸವಕೇಂದ್ರದ ಅಧ್ಯಕ್ಷರಾದ ಶರಣ ಕೆ.ಬಸವರಾಜ, ವೀರಶೈವ ಲಿಂಗಾಯತ ಯುವ ವೇದಿಕೆಯ ಮುಖಂಡರಾದ ಆನಂದ ಅಕ್ಕಿ, ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಸಿ.ಮಹಾಲಕ್ಷ್ಮಿ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ತಾಲೂಕಿನ ಬಸವಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಎ.ಕೆ.ಮಹೇಶಕುಮಾರ್ ಸಭಾ ನಿರ್ವಹಣೆ ಮಾಡಲಿದ್ದು, ರಾಷ್ಟ್ರೀಯ ಬಸವದಳದ ದಿಲೀಪಕುಮಾರ ಶರಣು ಸಮರ್ಪಣೆಯನ್ನು ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಚಂದ್ರಶೇಖರ ನೂಲ್ವಿ ಅವರ ಸ್ಮರಣೆಯೊಂದಿಗೆ ಗಂಗಾವತಿಯ ಶರಣ ಕಲಾ ಬಳಗ ಕಾಂತ್ರಿಗೀತೆಗಳನ್ನು ಹಾಡಲಿದ್ದಾರೆ. ರಾತ್ರಿ 8ಗಂಟೆಗೆ ದಾಸೋಹ ನಡೆಯಲಿದ್ದು, ಬಳಿಕ ಸ್ಥಳಿಯ ಕಲಾವಿದರಿಂದ “ವೀರಗಣಾಚಾರಿ ಮಡಿವಾಳ ಮಾಚಿದೇವ” ನಾಟಕ ಪ್ರದರ್ಶನ ನೆರವೇರಲಿದೆ.