ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಸೆ.16;

ಸಾಲಾಗಿ ಕುಳಿತಿರುವ ವಿಕಲಚೇತನರ ಮೊಗದಲ್ಲಿ ನಾಡಿನ ಮುಖ್ಯಮಂತ್ರಿ ಸ್ವತಃ ತಮ್ಮ ಬಳಿ ಬಂದು ಅಹವಾಲು ಆಲಿಸಿಯಾರೇ ಎಂಬ ಪ್ರಶ್ನಾರ್ಥಕ ಭಾವ, ಕುಮಾರಣ್ಣನನ್ನು ಕಾಣುವ ನಿರೀಕ್ಷೆ ಹುಸಿಯಾಗಲಿಲ್ಲ.

ನಿನ್ನೆ ಸುವರ್ಣ ವಿಧಾನಸೌಧದ ದಕ್ಷಿಣ ದ್ವಾರದ ಬಳಿಯ ನೆಲಮಹಡಿಯಲ್ಲಿ ಗಂಟೆಗಟ್ಟಲೆ ಕಾದು ಕುಳಿತಿದ್ದ ವಿಕಲಚೇತನರ ಬಳಿ ತೆರಳಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅತ್ಯಂತ ತಾಳ್ಮೆಯಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ನಿನ್ನೆ ಬೆಳಗಾವಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಜನತಾದರ್ಶನ ನಡೆಸಿ, ಜನರ ಅಹವಾಲುಗಳನ್ನು ಆಲಿಸಿದರು.

ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಮನೆಯ ಯಜಮಾನನಂತೆ ಸಮಾಧಾನದಿಂದಲೇ ಪ್ರತಿಯೊಬ್ಬರ ಬಳಿ ತೆರಳಿ ಅಹವಾಲು ಕೇಳಿದರು. ಹಿರಿಯರು, ಕಿರಿಯರು ಸೇರಿದಂತೆ ಎಲ್ಲರೊಂದಿಗೆ ಶಾಂತಚಿತ್ತರಾಗಿಯೇ ಮಾತನಾಡಿದ ಮುಖ್ಯಮಂತ್ರಿಗಳು, ಜನತಾದರ್ಶನದ ಮೊದಲ ಹಂತದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಅಹವಾಲು ಆಲಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಕರ್ನಾಟಕ ಲಾ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು, ಬಳಿಕ ಕನ್ನಡ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕುಮಾರಸ್ವಾಮಿ ಬಡಾವಣೆಗೆ ತೆರಳಿ ಅಲ್ಲಿನ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿದರು.

ಬಳಿಕ ಅಲ್ಲಿಂದ ನೇರವಾಗಿ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದರು. ಜನರ ಅಹವಾಲು ಆಲಿಸುತ್ತ ಮುಂದೆ ಸಾಗಿದ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಹೆಚ್.ಡಿ.ಕುಮಾರಸ್ವಾಮಿ ಜನತಾದರ್ಶನದ ಮೊದಲ ಹಂತದಲ್ಲಿ ವಿಕಲಚೇತನರ ಅಹವಾಲುಗಳನ್ನು ಆಲಿಸಿದರು. ಇದಾದ ನಂತರ ಸಂಜೆ 7 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಜನತಾದರ್ಶನ ಮುಂದುವರಿಸಿದರು. ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು 1,271ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಇಷ್ಟು‌ ಜನರನ್ನು ನೇರವಾಗಿ ಮಾತನಾಡಿಸಿ ಅಹವಾಲು ಹೇಗೆ ಸ್ವೀಕರಿಸುತ್ತಾರೆ? ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳ ತಾಳ್ಮೆಯು ಉತ್ತರವಾಗಿತ್ತು.

ಮುಖ್ಯಮಂತ್ರಿಗಳು ಒಂದು ಚೂರು ಬೇಸರ ಮಾಡಿಕೊಳ್ಳದೇ ಜನತಾ ದರ್ಶನಕ್ಕೆ ಬಂದಿದ್ದ ಪ್ರತಿಯೊಬ್ಬರ ಸಮಸ್ಯೆ ಆಲಿಸಿದರು. ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ ಮುಖ್ಯಮಂತ್ರಿಗಳು ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿದರು.

ಕೆಲವು ಮನವಿಪತ್ರಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ವಹಿಸುವಂತೆ ಷರಾ ಬರೆದರು. ಮುಖ್ಯಮಂತ್ರಿಯೇ ಸ್ವತಃ ಐದಾರು ಗಂಟೆಗಳ ಕಾಲ‌ನಿರಂತರವಾಗಿ ಅಹವಾಲು ಆಲಿಸುವುದನ್ನು ಕಂಡ ಜನರು ತಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ, ಮನವಿಪತ್ರ ಅವರ ಕೈಗಿಟ್ಟು ಇಂದಲ್ಲ ನಾಳೆಯಾದರೂ ತಮ್ಮ ಸಮಸ್ಯೆ ಇತ್ಯರ್ಥವಾಗಲಿದೆ ಎಂಬ ನೆಮ್ಮದಿಯ ನಿಟ್ಟುಸಿರಿನಿಂದ ಮನೆಯತ್ತ ಹೆಜ್ಜೆ ಹಾಕಿದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.