ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ.30;

ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆ ಮೇರೆಗೆ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದಲ್ಲಿ ವಿದ್ಯುತ್ ದರವನ್ನು ಹೆಚ್ಚಳ ಮಾಡಿದ್ದು, ಇಂಧನಗಳ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೆಇಆರ್‌ಸಿ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.

ಪ್ರತಿ ಯೂನಿಟ್‍ಗೆ 33 ಪೈಸೆಯಂತೆ ಶೇ.4.80 ರಷ್ಟು ವಿದ್ಯುತ್ ದರ ಹೆಚ್ಚಿಸಲಾಗಿದ್ದು, ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.

ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೆಇಆರ್‌ಸಿ ಅಧ್ಯಕ್ಷ ಶಂಭುದಯಾಳ್ ಮೀನ ಅವರು 2019-20 ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆಯನ್ನು ಪ್ರಕಟಿಸಿದರು.

ರಾಜ್ಯದಲ್ಲಿರುವ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜಸ್ಕಾಂ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 100 ರಿಂದ 167 ಪೈಸೆಗಳಷ್ಟು ವಿಭಿನ್ನ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಬೆಸ್ಕಾಂ ಶೇ. 14.14, ಮೆಸ್ಕಾಂ 20.49, ಚೆಸ್ಕಾಂ 15.02, ಹೆಸ್ಕಾಂ 24.67 ಹಾಗೂ ಜಸ್ಕಾಂ 18.89 ರಷ್ಟು ಏರಿಕೆ ಹೆಚ್ಚಿಸುವಂತೆ ಒಟ್ಟಾರೆ ಶೇ.17.37 ರಷ್ಟು ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಗೆ ಮನವಿ ಮಾಡಿದ್ದವು.

ಇದೀಗ 2019-20 ನೇ ಸಾಲಿಗೆ ಕುರಿತಂತೆ ವಿದ್ಯುತ್ ದರ ಪರಿಷ್ಕರಣೆ ಕುರಿತು ಪ್ರಕಟನೆ ಹೊರಡಿಸಲಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆಯಾಗಿದೆ. ಬೆಸ್ಕಾಂ ಪ್ರತಿ ಯೂನಿಟ್ ಗೆ 1.01 ರೂ. ಏರಿಕೆಗೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು‌. ಆದರೆ ಕೆಇಆರ್‌ಸಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೆಸ್ಕಾಂ 33 ಪೈಸೆ : 

ಮೆಸ್ಕಾಂ ಒಂದು ಯೂನಿಟ್ ವಿದ್ಯುತ್ ಗೆ 1.38 ಪೈಸೆ ಏರಿಕೆ ಕೋರಿತ್ತು. ಕೆಇಆರ್ ಸಿ ಸರಾಸರಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ.

ಚೆಸ್ಕಾಂ 33 ಪೈಸೆ :

ಚೆಸ್ಕಾಂ ಯೂನಿಟ್ ಗೆ ಸರಾಸರಿ 1 ರೂ. ಏರಿಕೆ ಕೋರಿತ್ತು. ಕೆಇಆರ್ ಸಿ ಸರಾಸರಿ 33 ಪೈಸೆ ಏರಿಕೆಗೆ ಸಮ್ಮತಿ ಸೂಚಿಸಿದೆ

ಹೆಸ್ಕಾಂ 33 ಪೈಸೆ :

ಹೆಸ್ಕಾಂ 1.63 ರೂ ಏರಿಕೆ ಕೋರಿತ್ತು. ಪ್ರತಿ ಯೂನಿಟ್ ಗೆ ಸರಾಸರಿ 33 ಪೈಸೆ ಏರಿಕೆಗೆ ಕೆಇಆರ್ ಸಿ ಸಮ್ಮತಿ ನೀಡಿದೆ.

ಜೆಸ್ಕಾಂ 33 ಪೈಸೆ :

ಜೆಸ್ಕಾಂ 1.27 ಪೈಸೆ ಏರಿಕೆಗೆ ಕೋರಿತ್ತು. ಕೆಇಆರ್‌ಸಿ ಸರಾಸರಿ ಪ್ರತಿ ಯೂನಿಟ್ ವಿದ್ಯುತ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ.

ಒಟ್ಟಾರೆ 5 ವಿದ್ಯುತ್ ಸರಬರಾಜು ಕಂಪನಿಯಲ್ಲಿ ಸರಾಸರಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆಯಾಗಿದೆ.

ಎಲ್ಲಿ, ಎಷ್ಟು ಏರಿಕೆ?

  • ಗೃಹ ಬಳಕೆ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಗೃಹ ಬಳಕೆ ವಿದ್ಯುತ್‌ ಅನ್ನು ಪ್ರತಿ ಯೂನಿಟ್‌ಗೆ 25 ಪೈಸೆ ಹೆಚ್ಚಳ ಮಾಡಲು ಒಪ್ಪಿಗೆ ನೀಡಿದೆ.

* 30 ಯೂನಿಟ್ ತನಕ 3.75 ರೂ.

* 100 ಯೂನಿಟ್ ತನಕ 5.20 ರೂ.

* 200 ಯೂನಿಟ್ ತನಕ 6.25 ರೂ.

* 300 ಯೂನಿಟ್ ಮೇಲ್ಪಟ್ಟು 7.80 ರೂ.

  • ಕೈಗಾರಿಕೆಗೆ ಎಷ್ಟು ಹೆಚ್ಚಳ?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕೈಗಾರಿಕೆಗೆ ಬಳಸುವ ವಿದ್ಯುತ್‌ಗೆ 15 ರಿಂದ 20 ಪೈಸೆ ಹೆಚ್ಚಳ ಮಾಡಲು ಅನುಮತಿ ನೀಡಿದೆ.

* ಪ್ರತಿ 500 ಯೂನಿಟ್‌ಗೆ 5.65 ರೂ., 1000 ಯೂನಿಟ್ ಬಳಿಕ 6.95 ರೂ.

* ಬೆಸ್ಕಾಂ ಹೊರತುಪಡಿಸಿ ಇತರ ಪ್ರದೇಶಗಳಲ್ಲಿ 500 ಯೂನಿಟ್‌ಗೆ 5.35 ರೂ., 1000 ಯೂನಿಟ್‌ ತನಕ 6.30 ರೂ., 1000 ರೂ. ಮೇಲ್ಪಟ್ಟು 6.60 ರೂ.

  • ವಾಣಿಜ್ಯ ಬಳಕೆಗೆ ಎಷ್ಟು?

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ನಗರ ಪ್ರದೇಶದಲ್ಲಿ ವಾಣಿಜ್ಯ ಬಳಕೆ ವಿದ್ಯುತ್‌ಗೆ 25 ಪೈಸೆ ದರ ಹೆಚ್ಚಳ ಮಾಡಲು ಒಪ್ಪಿಗೆ ಕೊಟ್ಟಿದೆ. 50 ಯೂನಿಟ್‌ಗೆ 8 ರೂ. 50ಕ್ಕಿಂತ ಹೆಚ್ಚು ಯೂನಿಟ್‌ಗೆ 9 ರೂ. ದರ ಹೆಚ್ಚಳ

ಗ್ರಾಮೀಣ ಪ್ರದೇಶದಲ್ಲಿ 50 ಯೂನಿಟ್ ತನಕ 7.50 ರೂ. ಮೇಲ್ಪಟ್ಟರೆ 8.50 ರೂ.

  • ಗ್ರಾಮೀಣ ಪ್ರದೇಶದಲ್ಲಿ ಎಷ್ಟು?

* 30 ಯೂನಿಟ್‌ ತನಕ 3.65 ರೂ.

* 100 ಯೂನಿಟ್‌ ತನಕ 4.90 ರೂ.

* 200 ಯೂನಿಟ್ ವರೆಗೆ 6.45 ರೂ.

* 300 ರೂ. ಮೇಲ್ಪಟ್ಟು 7.30 ರೂ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.