ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಮಾ.24;

ಜಗಳೂರು ಪಟ್ಟಣದ ನವಚೇತನ ಶಾಲಾ ಆವರಣದಲ್ಲಿ ಪ್ರೇರಣ ಸಮಾಜ ಸೇವಾ ಸಂಸ್ಥೆ ಹಾಗೂ ಬಾಪೂಜಿ ದಂತ ಕಾಲೇಜು ಸಂಯುಕ್ತಾಶ್ರಯದಲ್ಲಿ ಉಚಿತ ದಂತ ತಪಾಸಣಾ ಶಿಬಿರವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ. ಮುರುಳಿಧರ್ ಗಿಡಕ್ಕೆ ನೀರೆರೆಯುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗುಟ್ಕಾ ತಿನ್ನುವವರಿಗೆ ಅತಿ ಹೆಚ್ಚು ಹಲ್ಲು ನೋವು ಕಂಡು ಬರುತ್ತದೆ ಮತ್ತು ಕ್ಯಾನ್ಸರ್ ರೋಗವು ಬರುತ್ತದೆ.

ಕೆಲವರು ಹಲ್ಲುನೋವು ಬಂದರೆ ತಂಬಾಕು ಇಡುತ್ತಾರೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಹಲ್ಲು ನೋವು ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು. ಪ್ರತಿ ದಿನ 2 ಬಾರಿ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಹಲ್ಲುಗಳು ಹಾಳಾಗದಂತೆ ತಡೆಯಬಹುದು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಪಿ.ಎಸ್.ಅರವಿಂದ್, ದಂತ ವೈದ್ಯರಾದ ವೀರೇಶ್, ಪ್ರೇರಣ ಸಮಾಜ ಚರ್ಚ್ ಫಾದರ್ ವಿಲಿಯಂ ಮೀರಾಂದ, ಅಲ್ ಫಾತೀಮಾ ಸಂಸ್ಥೆ ಕಾರ್ಯದರ್ಶಿ ಶಾಹಿನಾ ಬೇಗಂ, ಮುಖ್ಯ ಶಿಕ್ಷಕಿ ಆರ್. ಪಿನ್ ಟೋ, ಸಹ ಶಿಕ್ಷಕಿ ಲತಾ ಕುಮಾರಿ ಸೇರಿದಂತೆ ಇತರರು ಹಾಜರಿದ್ದರು.

ವರದಿ : ಮಹಮ್ಮದ್ ಅಬ್ದುಲ್ ರಖೀಬ್