ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಆ.11;

ತುಂಗಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ ಶನಿವಾರ ಸಂಜೆ ಅಣೆಕಟ್ಟೆನಿಂದ ನದಿಗೆ 25 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ತುಂಗಭದ್ರಾ ಮಂಡಳಿ ಕಾರ್ಯದರ್ಶಿ ನಾಗಮೋಹನ್ ಅವರು ಡ್ಯಾಂಗೆ ಪೂಜೆ ಸಲ್ಲಿಸಿ, ನದಿಗೆ ಬಿಡುವುಕ್ಕೆ ಚಾಲನೆ ನೀಡಿದರು. ಜಲಾಶಯದ 10 ಕ್ರಸ್ಟ್ ಗೇಟ್‍ಗಳನ್ನು 1.5 ಅಡಿ ಎತ್ತರದಲ್ಲಿ ತೆರೆದು ಮೊದಲ ಹಂತದಲ್ಲಿ 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ನಾಗಮೋಹನ್ ಅವರು, ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಂದೇ ಬಾರಿಗೆ ಅಧಿಕ ನೀರನ್ನು ಬಿಟ್ಟರೆ ಪ್ರಾಣ, ಆಸ್ತಿ ಹಾನಿಯಾಗುವ ಸಂಭವವಿದೆ. ಹೀಗಾಗಿ ಪ್ರವಾಹ ಹಾಗೂ ಜನ-ಜಾನುವಾರುಗಳ ಸಮಸ್ಯೆಗಳ ಬಗ್ಗೆ ಗಮನದಲ್ಲಿಟ್ಟುಕೊಂಡು ಹಂತಹಂತವಾಗಿ ಅಧಿಕ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಮೊದಲಿಗೆ 25 ಸಾವಿರ ಕ್ಯೂಸೆಕ್ ಬಿಡಲಾಗುತ್ತಿದೆ ಎಂದು ತಿಳಿಸಿದರು.

ಪ್ರವಾಹ ಮನ್ಸೂಚನೆ:

ತುಂಗಭದ್ರಾ ಜಲಾಶಯದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಜಲಾಶಯದ ಮಟ್ಟ 1626.08 ಅಡಿಗಳಷ್ಟು, ಸಾಮರ್ಥ್ಯ 76.377 ಟಿಎಂಸಿ, ಒಳಹರಿವು 1,84,012 ಕ್ಯೂಸೆಕ್ ಹಾಗೂ ಹೊರಹರಿವು 2,522 ಕ್ಯೂಸೆಕ್ ಇತ್ತು. ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಹೀಗಾಗಿ ಕೇಂದ್ರ ಜಲ ಆಯೋಗ ನೀಡಿರುವ ಒಳಹರಿವಿನ ಗೇಜ್‍ನ ಪ್ರಮಾಣದಂತೆ ಹರಳಹಳ್ಳಿ ಗೇಜ್‍ನಿಂದ 1,69,512 ಕ್ಯೂಸೆಕ್ ಮತ್ತು ಮರೋಳು ಗೇಜ್‍ನಿಂದ 56,504 ಕ್ಯೂಸೆಕ್ ಸೇರಿದಂತೆ ಒಟ್ಟಾರೆ 2,26,016 ಕ್ಯೂಸೆಕ್ ಒಳಹರಿವು ಇದೆ ಎಂದು ಮಾಹಿತಿ ನೀಡಿದರು.

ತುಂಗಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಹೊರಹರಿವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ತುಂಗಭದ್ರಾ ನದಿ ಪಾತ್ರದ ಗ್ರಾಮ, ಪಟ್ಟಣ ಹಾಗೂ ನಗರಗಳ ಜನರು ಅಗತ್ಯ ವಸ್ತು ಹಾಗೂ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.