ಕೆ.ಎನ್.ಪಿ.ವಾರ್ತೆ,ನವದೆಹಲಿ,ನ.05;

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಡಿಯೋ ಪ್ರಕರಣ ಅನರ್ಹ ಶಾಸಕರಿಗೆ ಸಂಕಷ್ಟ ತಂದಿದೆ. ಆಡಿಯೋ ಟೇಪ್ ವಿಚಾರಣೆಗೆ ಜೆಡಿಎಸ್, ಕಾಂಗ್ರೆಸ್ ಮನವಿ ಮಾಡಿದ್ದು, ಅನರ್ಹ ಶಾಸಕರ ತೀರ್ಪು ವಿಳಂಬವಾಗಲಿದೆ.

ಸೋಮವಾರ ಸುಪ್ರೀಂಕೋರ್ಟ್ ಕದ ತಟ್ಟಿದ್ದ ಕಾಂಗ್ರೆಸ್, ಸಿಎಂ ಯಡಿಯೂರಪ್ಪರ ಆಡಿಯೋವನ್ನು ಪರಿಗಣಿಸಿ ಮತ್ತೆ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು.

ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎಸ್. ವಿ. ರಮಣ ನೇತೃತ್ವದ ಪೀಠದಲ್ಲಿ ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಚಾರಣೆ ನಡೆಯಿತು. 17 ಅನರ್ಹ ಶಾಸಕರ ಅರ್ಜಿಯನ್ನು ಸಹ ಇದೇ ಪೀಠ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.

ಡಿಸೆಂಬರ್ 5ರಂದು 15 ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಆದ್ದರಿಂದ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ರಾಜ್ಯದ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ವಾರದಲ್ಲಿ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.

ಸುಪ್ರೀಂಕೋರ್ಟ್ ಹೇಳಿದ್ದೇನು?

ನ್ಯಾಯಮೂರ್ತಿ ಎಸ್. ವಿ. ರಮಣ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸುತ್ತೇವೆ ಎಂದು ಹೇಳಿದರು. ನ್ಯಾಯಮೂರ್ತಿ ಖನ್ನಾ ಆಡಿಯೋವನ್ನು ಗಂಭೀರವಾಗಿ ಪರಿಗಣಿಸಿದರೆ ನೋಟಿಸ್ ನೀಡಬೇಕಾಗುತ್ತದೆ. ಆಗ ತೀರ್ಪು ವಿಳಂಬವಾಗಬಹುದು ಎಂದರು. ಆಡಿಯೋ ಬಗ್ಗೆ ವಿಚಾರಣೆ ನಡೆಸೋಣ ಆದರೆ, ಶಾಸಕರ ಅರ್ಜಿಯ ತೀರ್ಪು ಪ್ರಕಟಿಸಲು ಅವಕಾಶ ನೀಡಿ ಎಂದು ನ್ಯಾಯಾಲಯ ವಕೀಲರಿಗೆ ಸೂಚಿಸಿತು.

ನಮ್ಮ ಕಾನೂನಾತ್ಮಕ ಹೋರಾಟಕ್ಕೆ ಜಯ ಸಿಕ್ಕಿದೆ. ಶಾಸಕರು ರಾಜೀನಾಮೆ ನೀಡಲು ಯಾರು ಕಾರಣ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ವಿವರಿಸಿರುವ ಆಡಿಯೊ/ವಿಡಿಯೋವನ್ನು ತೀರ್ಪು ನೀಡುವ ಸಂದರ್ಭ ಸಾಕ್ಷಿಯಾಗಿ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಕಾಂಗ್ರೆಸ್‌ ನಾಯಕ ಪ್ರಕಾಶ್‌ ರಾಥೋಡ್‌ ತಿಳಿಸಿದ್ದಾರೆ.

ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ಸೋರಿಕೆಯಾಗಿರುವ ಬಿಎಸ್‌ ಯಡಿಯೂರಪ್ಪ ಅವರ ಆಡಿಯೊ ಇರುವ ಸಿಡಿಯನ್ನು ಸ್ವೀಕರಿಸಿರುವುದಾಗಿ ಹೇಳಿದ್ದು, ಅನರ್ಹ ಶಾಸಕರ ಭವಿಷ್ಯ ಮತ್ತಷ್ಟು ಬಿಗಡಾಯಿಸಿದೆ. 

ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರು ಮತ್ತೆ ತೊಂದರೆಯಲ್ಲಿ ಸಿಲುಕಿದಂತಾಗಿದ್ದು, ಸಿಎಂ ಯಡಿಯೂರಪ್ಪ ಅವರ ಆಡಿಯೋ ಸಂಕಷ್ಟ ತರುವ ಆತಂಕದಲ್ಲಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.