ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಆ.24;

ವಲಯ ಮಟ್ಟದ ಕ್ರೀಡಾಕೂಟ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿ ಬಳಿ ಇದ್ದ ಕಟ್ಟಡವೊಂದರ ಸಜ್ಜ ಕುಸಿದು ಇಬ್ಬರು ಮೃತಪಟ್ಟಿದ್ದು, ಹಲವಾರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ ಘಟನೆ ಬಳ್ಳಾರಿಯ ಸಿರಗುಪ್ಪದಲ್ಲಿ ನಡೆದಿದೆ.

ಇಂದು ಕ್ರೀಡಾಕೂಟ ನಡೆಯುತ್ತಿದ್ದ ವೇಳೆ ವೀಕ್ಷಣಾ ಗ್ಯಾಲರಿಯ ತಡೆಗೋಡೆ ಹಾಗೂ ಸಜ್ಜಾ ಕುಸಿದು ಇಬ್ಬರು ಮೃತ ಪಟ್ಟಿದ್ದಾರೆ. ಅಂತೆಯೇ ಘಟನೆಯಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಬಳ್ಳಾರಿಯ ಸಿರಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ಹಚ್ಚೊಳ್ಳಿ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ನಗರದ ನಿವಾಸಿ ಶಿವಕುಮಾರ್‌ (35 ವರ್ಷ) ಸ್ಥಳೀಯ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಕೆ.ಬೆಳಗಲ್ಲು ಗ್ರಾಮದ ರಾಮು (18 ವರ್ಷ) ಮೃತಪಟ್ಟಿದ್ದಾರೆ. ಕ್ರೀಡಾಕೂಟದ ಅಂಗವಾಗಿ ವಾಲಿಬಾಲ್‌ ಪಂದ್ಯಾವಳಿ ನಡೆಯುತ್ತಿದ್ದಾಗ ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ಆರಂಭಗೊಂಡಿತು. ಆಗ ನೂರಾರು ವಿದ್ಯಾರ್ಥಿಗಳು ಸ್ಟೇಡಿಯಂನ ವೀಕ್ಷಣಾ ಗ್ಯಾಲರಿಯ ಮೇಲ್ಭಾಗದಲ್ಲಿ ಜಮಾಯಿಸಿ, ಪರಸ್ಪರ ವಾಗ್ವಾದದಲ್ಲಿ ತೊಡಗಿದರು.

ಈ ವೇಳೆ ಭಾರ ಹೆಚ್ಚಿದ್ದರಿಂದ ತಡೆಗೋಡೆ ಮತ್ತು ಸಜ್ಜಾ ಕುಸಿದು ಬಿದ್ದು, ವಿದ್ಯಾರ್ಥಿಗಳು ಕೆಳಗೆ ಬಿದ್ದರು. ಸ್ಟೇಡಿಯಂನ ಹಿಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಕುಳಿತಿದ್ದ ಶಿವಕುಮಾರ್‌ ಮೇಲೆಯೇ ಸಜ್ಜಾ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ವಿದ್ಯಾರ್ಥಿ ರಾಮುಲುವನ್ನು ಬಳ್ಳಾರಿ ವಿಮ್ಸ್‌ ಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ನಿತೀಶ್, ಎಸ್ಪಿ ಸಿ.ಕೆ. ಬಾಬಾ, ಶಾಸಕ ಸೋಮಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 1997ರಲ್ಲಿ ಈ ಕಟ್ಟಡ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.