ಕೆ.ಎನ್.ಪಿ.ವಾರ್ತೆ,ಜೋಧಪುರ,ಏ.07;
ಸಲ್ಮಾನ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮತ್ತು ಸಲ್ಮಾನ್ ಪರ ವಕೀಲರ ವಾದ ಮಂಡನೆ ಪೂರ್ಣಗೊಂಡಿದ್ದು, ಇಂದು ಮಧ್ಯಾಹ್ನ ತೀರ್ಪು ಪ್ರಕಟಗೊಳ್ಳಲಿದೆ.
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ತೀರ್ಪು ಇಂದು ಮಧ್ಯಾಹ್ನ ಪ್ರಕಟಗೊಳ್ಳಲಿದೆ.
ಇಂದು ಬೆಳಿಗ್ಗೆ 10.30ರ ಸುಮಾರಿಗೆ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಆರಂಭಿಸಿದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ, ತೀರ್ಪನ್ನು ಮಧ್ಯಾಹ್ನದ ಊಟದ ಬಳಿಕ ಪ್ರಕಟಿಸುವುದಾಗಿ ತಿಳಿಸಿದರು.
1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ, ರಾಜಸ್ಥಾನದ ಜೋಧಪುರ ಸಮೀಪದ ಮಥಾನಿಯಾದಲ್ಲಿರುವ ಭವಾದ್ ನಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ದೋಷಿ ಎಂದು ನ್ಯಾಯಾಲಯ ಹೇಳಿತ್ತು.
ಅಲ್ಲದೆ, ವನ್ಯಮೃಗ ಸಂರಕ್ಷಣೆ ಕಾಯ್ದೆಯ 9/51ನೇ ಸೆಕ್ಷನ್ ಅಡಿಯಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ಜೋಧಪುರ ಜೆಎಂಸಿ ನ್ಯಾಯಾಲಯ ಸಲ್ಮಾನ್ ಖಾನ್‌ಗೆ ಗುರುವಾರ ಶಿಕ್ಷೆ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಸಲ್ಮಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ನಿನ್ನೆ ಅರ್ಜಿ ವಿಚಾರಣೆ ನಡೆಸಿದ ಜೋಧಪುರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.