ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.28;
ರಾಷ್ಟ್ರ ಸುರಕ್ಷಿತವಾಗಿದ್ದಾಗ ಮಾತ್ರ ನಾವೆಲ್ಲ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಹೇಳಿದರು.
ಜಿಲ್ಲಾಡಳಿತ ಕಚೇರಿ ಬಳಿಯಿರುವ ಕಾರ್ಗಿಲ್ ಸ್ತೂಪದ ಬಳಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ 19ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ನಿನ್ನೆ ಮಾತನಾಡಿದರು.
ಧೈರ್ಯ, ಶೌರ್ಯದಿಂದ ರಾಷ್ಟ್ರವನ್ನು ರಕ್ಷಿಸುವ ಯೋಧ ಪ್ರತಿಯೊಬ್ಬರ ಮನೆಯಲ್ಲಿ ಹುಟ್ಟಲಿ. ನಮ್ಮ ಸೈನಿಕರು ಧೈರ್ಯದಿಂದ ಹೋರಾಡಿ ಗಡಿ ಕಾಯುತ್ತಾರೆ. ಮತ್ತು ಜೀವ ಭಯಬಿಟ್ಟು ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿ, ದೇಶ ರಕ್ಷಿಸುತ್ತಾರೆ.
ಕಾರ್ಗಿಲ್ ಯುದ್ಧದಲ್ಲಿ ಮಡಿದ ಅನೇಕ ಯೋಧರು ಕರ್ನಾಟಕ ರಾಜ್ಯದವರು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಸೇರಿದವರು ಎಂಬುವುದು ಹೆಮ್ಮೆಯ ಸಂಗತಿ. ದೇಶದ ಬಾಹ್ಯ ರಕ್ಷಣೆಗೆ ಸೈನಿಕರು ಮತ್ತು ದೇಶದ ಆಂತರಿಕ ಭದ್ರತೆ, ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಶ್ರಮಿಸುತ್ತದೆ. ಆದ್ದರಿಂದ ರಾಷ್ಟ್ರ ಹೆಮ್ಮೆಪಡುವಂತಹ ಸೈನಿಕರು ಪ್ರತಿಯೊಬ್ಬರ ಮನೆಯಲ್ಲಿ ಹುಟ್ಟಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ ಸಿಇಓ ಆರ್. ಸ್ನೇಹಲ್ ಮಾತನಾಡಿ, ಸೈನಿಕರ ಸೇವೆ ಅವಿಸ್ಮರಣೀಯ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬದವರಿಗೆ ಸರ್ಕಾರದ ಎಲ್ಲ ನೆರವನ್ನು ನೀಡುವದರೊಂದಿಗೆ ಸದಾ ಅವರೊಂದಿಗೆ ನಾವೆಲ್ಲ ಇರುತ್ತೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷ ಚೈತ್ರಾ ಶಿರೂರ ಮಾತನಾಡಿ, ಸೈನಿಕರ ತ್ಯಾಗ ಶ್ರೇಷ್ಠವಾದದ್ದು. ಕಾರ್ಗಿಲ್ ವಿಜಯೋತ್ಸವ ನಮಗೆಲ್ಲಾ ಹೆಮ್ಮೆಯ ವಿಷಯ. ಭಾರತದ ಪ್ರತಿಯೊಬ್ಬ ಪ್ರಜೆಯು ಸೈನಿಕರೊಂದಿಗೆ ಇರುತ್ತಾರೆಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಕಾರ್ಗಿಲ್ ಯುದ್ಧದ ಸಂದರ್ಭವನ್ನು ವಿವರಿಸಿ, ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಉತ್ತಮ ರಾಷ್ಟ್ರ ಕಟ್ಟುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಕಾರ್ಗಿಲ್ ಸ್ತೂಪಕ್ಕೆ ಅಧಿಕಾರಿಗಳು, ನಿವೃತ್ತ ಸೈನಿಕರು ಮತ್ತು ವಿದ್ಯಾರ್ಥಿಗಳು ಪುಷ್ಪ ಸಮರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಿದರು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಯೋಧರ ಕುಟುಂಬದ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು. ಆಕಾಶವಾಣಿ ಕಲಾವಿದೆ ಮಾಯಾ ರಾಮನ್ ದೇಶ ಭಕ್ತಿಗೀತೆ ಹಾಡಿದರು.
ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಗಿಲ್ ಯೋಧರಿಗೆ ಗೌರವ ವಂದನೆ ಸಲ್ಲಿಸಿದರು. ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ. ರಾಜೇಶ್ವರಿ ಮಹೇಶ್ವರಯ್ಯ, ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಮೀನಗಡ, ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಇದ್ದರು.
ವರದಿ : ಚಂದ್ರು ಹಿರೇಮಠ ಧಾರವಾಡ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.