ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಜೂ.05;

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿಯುವ ಮೂಲಕ ಉತ್ತಮ ಪರಿಸರ ಹಾಳು ಮಾಡುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಈಗಾಗಲೇ ಅಲ್ಲಲಿ ಸಂಭವಿಸುತ್ತಿರವ ಭೀಕರ ಬರಗಾಲ, ಪ್ರಕೃತಿಯ ವಿಕೋಪದ ಜತೆಗೆ ಮತ್ತಷ್ಟು ಘೋರ ವಿಕೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಗ್ರೀನ್ ಆರ್ಮಿ ತಂಡದ ಸದಸ್ಯ ಸಂಗಮೇಶ ಬಾಗೂರ ಹೇಳಿದರು.

ಪಟ್ಟಣದ ಚಾಣಕ್ಯ ನವೋದಯ ತರಬೇತಿ ಕೇಂದ್ರದಲ್ಲಿ ಗ್ರೀನ್ ಆರ್ಮಿ ತಂಡದ ಸಹಯೋಗದಲ್ಲಿ ಆಚರಿಸಲಾದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪ್ರಕೃತಿಯ ಮಡಿಲಿನಲ್ಲಿ ಬದುಕುತ್ತಿರುವ ನಾವು, ಪ್ರಕೃತಿಯ ಒಡಲಿಗೆ ಕೈ ಹಾಕುತ್ತಿದ್ದೇವೆ. ಇದರಿಂದ ಈಗಾಗಲೇ ಅಂರ್ತಜಲ ಬತ್ತುತ್ತಿದ್ದರೆ, ಭೀಕರ ಬರಗಾಲದಿಂದ ಜನರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗಜೇಂದ್ರಗಡದಲ್ಲಿ ತಿಂಗಳಿಗೊಮ್ಮೆ ಬರುವ ನೀರು. ಮುಂದೊಂದು ದಿನ ವರ್ಷಕ್ಕೊಮ್ಮೆ ಬರುವ ಪರಿಸ್ಥಿತಿಯು ಬರಬಹುದು. ಸ್ನಾನ ಮಾಡದೇ ಬದುಕುವ ಕಾಲ ದೂರವಿಲ್ಲ ಇದು ಮುನ್ನೆಚ್ಚರಿಕೆಯಷ್ಟೆ, ಪಾಠ ಕಲಿಯದಿದ್ದರೆ ಬರಗಾಲ, ವಿಕೋಪ ಮತ್ತಷ್ಟು ಘೋರವಾಗುತ್ತದೆ. ಪ್ರಕೃತಿ ನಮ್ಮಿಂದ ಏನನ್ನೂ ಬಯಸುವುದಿಲ್ಲ, ನಾವು ಪ್ರಕೃತಿಗೆ ಮಾಡುವ ಸಹಾಯವೆಂದರೆ ಅದನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು. ಇಂದು ಎಲ್ಲರೂ ಈ ಬಗ್ಗೆ ಯೋಚಿಸುತ್ತಲೇ ಇದ್ದಾರೆ. ಆದರೆ ಸ್ವಯಂ ಜಾಗೃತಿ ಹೆಚ್ಚಾಗಬೇಕಿದೆ. ಅದೇ ನಾವು ಪ್ರಕೃತಿಗೆ ನೀಡುವ ಗೌರವವಾಗಿದೆ ಎಂದರು.

ಶಿಕ್ಷಕ ಬಸವರಾಜ ಮಾಣೋಟಗಿ ಮಾತನಾಡಿ, ಮುಂದಿನ ಪೀಳಿಗೆಗೆ ಒಳ್ಳೆಯ ಬದುಕು ನೀಡುವ ನಿಟ್ಟಿನಲ್ಲಿ ಉತ್ತಮ ಪರಿಸರವನ್ನು ನೀಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು, 30-40 ವರ್ಷಗಳ ಹಿಂದೆ ಬಾವಿ ತೋಡಿದರೆ ನೀರು ಬರುತ್ತಿತ್ತು, ಈಗ 1500 ಅಡಿ ಬೋರ್ ಕೊರೆದು ನೀರು ಬಂದರೆ ಇಡೀ ಊರಿಗೆ ಹೇಳಿಕೊಂಡು ಬರುವವಂಥ ಸ್ಥಿತಿ ಇದೆ.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅತಿ ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಪ್ರಕೃತಿ ಆಗಿಂದಾಗ್ಗೆ ಕೋಪಗೊಳ್ಳುತ್ತಿರುವುದನ್ನು ಇತ್ತೀಚಿನ ಕೆಲ ಘಟನೆಗಳಿಂದ ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಪರಿಸರಕ್ಕಿಂತ ಮನುಷ್ಯ ಜಾಣನಲ್ಲ ಎಂಬುದು ಈಗಾಗಲೇ ಹಲವಾರು ಬಾರಿ ರುಜುವಾತಾಗಿದ್ದರೂ ಮನುಷ್ಯ ಮಾತ್ರ ತಾನೇ ಬುದ್ದಿವಂತ, ಶಕ್ತಿವಂತ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ಪರಿಸರವನ್ನು ಮತ್ತಷ್ಟು ಹಾಳು ಮಾಡುತ್ತಿದ್ದಾನೆ ಎಂದು ವಿಷಾದಿಸಿದರು.

ಗ್ರೀನ್ ಆರ್ಮಿ ತಂಡದ ಸದಸ್ಯರಾದ ಸಂಗಮೇಶ ವಸ್ತ್ರದ, ಮಹಾಂತೇಶ ಅಂಗಡಿ, ವಿನಾಯಕ ಅಚಲಕರ, ತರಬೇತಿ ಕೇಂದ್ರದ ಪ್ರಭು ಲಮಾಣಿ, ಮಹಾದೇವಪ್ಪ ಮಾಣೋಟಗಿ, ಶಿವರಾಜ ಬೆನಕನವಾರಿ, ಬಸವರಾಜ ಲಮಾಣಿ, ವನಿತಾ ಈಳಗೇರ ಇದ್ದರು.

ವರದಿ : ಚಂದ್ರು ರಾಥೋಡ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.