ಕೆ.ಎನ್.ಪಿ.ವಾರ್ತೆ,ಔರಾದ್, ಮೇ.03;

ಔರಾದ್ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.  ಎಲ್ಲರನ್ನು ಒಳಗೊಳ್ಳದ ನಿಮ್ಮ ಆರ್.ಎಸ್.ಎಸ್. ಸಿದ್ದಾಂತದ ಅಡಿಯಲ್ಲಿ ನಿಂತು, ದೇಶವನ್ನು ಮುನ್ನೆಡೆಸೋ ನಿಮ್ಮಿಂದ, ದೇಶದ ಜನತೆಯನ್ನು ಒಡೆಯುವ ಮಾತನ್ನು ಬಿಟ್ಟು, ಬೇರೆ ಏನನ್ನು ನಿರೀಕ್ಷೆ ಮಾಡಲು ಸಾಧ್ಯ.  ಇದು ಬಸವಣ್ಣನ ನಾಡು ಇಲ್ಲಿ ಎಲ್ಲರೊಳಗೊಂದಾಗುವುವವರು ಬೇಕು. ಅದಕ್ಕೆ ರಾಜ್ಯದ ಜನತೆ ಈ ಬಾರಿಯೂ ಕೂಡ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ರಾಜ್ಯದ ರೈತರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳದ ನೀವು, ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಪ್ರವಾಸ ಮಾಡುತ್ತಾ, ವೇದಿಕೆ ಏರಿ, ನಮ್ಮದು ರೈತಪರ ಸರ್ಕಾರ ಎಂದು ಕೇವಲ ಹಸಿರು ಶಾಲುಗಳನ್ನ ಹಾಕಿಕೊಂಡು ಭಾಷಣಗಳನ್ನ ಮಾಡಿದರೆ ಸಾಕಾಗದು. ರೈತಪರ ಕಾಳಜಿ ಬೇಕು. ಶೆಡ್ಯುಲ್ಡ್ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಬಡ ರೈತರ ಸಾಲವನ್ನು ಮನ್ನಾ ಮಾಡದೇ, 15 ಶ್ರೀಮಂತ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿ, ದೇಶಕ್ಕೆ ಅನ್ನಕೊಡುವ ಬಡ ರೈತರನ್ನು ನೀವು ಅವಮಾನಿಸಿದ್ದೀರಾ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿಯರವನ್ನು ಟೀಕಿಸಿದರು.

ಜೈಲು-ಬೇಲುಗಳೊಂದಿಗೆ ನಿಮ್ಮ ರಾಜ್ಯ ಮಟ್ಟದ ನಾಯಕರುಗಳನ್ನು ಜೊತೆಗಿಟ್ಟುಕೊಂಡು ಚುನಾವಣೆಗೆ ಬಂದವರು ನೀವು. ರಾಜ್ಯದ ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುವಿರಿ ಎಂದರು. ಅಲ್ಲದೇ ಬಸವಣ್ಣನ ನಾಡಲ್ಲಿ ನುಡಿದಂತೆ ನಡೆಯುವಿರಾ ಎಂದು ನೇರವಾಗಿ ಪ್ರಧಾನಿ ಮೋದಿಯವರನ್ನು ರಾಹುಲ್ ಗಾಂಧಿ ಪ್ರಶ್ನಿಸಿದರು.

ಮೋದಿ ಬಿಜೆಪಿಯವರ ಅಥವಾ ಆರ್.ಎಸ್.ಎಸ್.ನ ಪ್ರಧಾನಿ ಅಲ್ಲ, ದೇಶದ ಪ್ರಧಾನಿ. ನನಗೂ ಪ್ರಧಾನಿ, ಅವರನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಪ್ರಶ್ನೆ ಕೇಳಿದವರನ್ನು ವ್ಯಯಕ್ತಿಕವಾಗಿ ಟೀಕಿಸುವ ಸಂಸ್ಕೃತಿ ನಮ್ಮದಲ್ಲ. ಹಾಗಾಗಿ ನಾನು ಅವರ ಬಗ್ಗೆ ವೈಯಕ್ತಿಕವಾಗಿ ಟೀಕಿಸುವುದಿಲ್ಲ, ಬದಲಾಗಿ ಕೆಲವು ಪ್ರಶ್ನೆಗಳನ್ನ ಕೇಳುತ್ತೇನೆ.

  • ನೀವು ನೀರವ್ ಮೋದಿ ಬಗ್ಗೆ ಏಕೆ ಒಂದೂ ಮಾತು ಆಡುವುದಿಲ್ಲ?
  • ನೀರವ್ ಮೋದಿ ಸಾವಿರಾರು ಕೋಟಿ ತಗೋಂಡು ಓಡಿ ಹೋದ್ರು ನೀವು ಮಾತಾಡಲಿಲ್ಲ ಯಾಕೆ?
  • ಅಮಿತ್ ಶಾ ಮಗ ಮೋಸ ಮಾಡಿದ್ದಾರೆ ನೀವು ಒಂದೂ ಮಾತು ಹೇಳಲಿಲ್ಲ?

ಇವು ದೇಶದ ಕೋಟ್ಯಾನುಕೋಟಿ ಬಡ ಜನತೆಯ ಪ್ರಶ್ನೆಗಳು ಸಾಧ್ಯವಾದರೆ ಉತ್ತರಕೊಡಿ ಎಂದು ಕುಟುಕಿದರು.

ರಾಜ್ಯದ ಬರಗಾಲ ಸ್ಥಿತಿಯಲ್ಲಿನ ರೈತರ ಸಂಕಷ್ಟಗಳನ್ನು ಅರ್ಥಮಾಡಿಕೊಂಡ ಸಿದ್ದರಾಮಯ್ಯ ಸಾವಿರಾರು ರೈತರ 8 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ನೀವು 15 ಉದ್ಯಮಿಗಳ ಸಾಲಮನ್ನಾ ಮಾಡಿ. ನಿಮ್ಮದು ಶ್ರೀಮಂತ ಉದ್ಯಮಿಗಳ ಪರ ಸರ್ಕಾರ ಎನ್ನುವುದನ್ನು ಕರ್ನಾಟಕದ ಮಹಾಜನತೆಗೆ ಈಗಾಗಲೇ ನೀವೆ ತೋರಿಸಿಕೊಟ್ಟಿದ್ದೀರಾ ಎಂದು ರಾಹುಲ್ ವ್ಯಂಗ್ಯವಾಡಿದರು.