ಕೆ.ಎನ್.ಪಿ.ವಾರ್ತೆ,ನವದೆಹಲಿ,ಡಿ.22;

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶದ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತರಲಾಗಿದೆ. ಇದರಿಂದ ಸಮಾಜದ ದೀನದಲಿತರು,ಬಡವರ್ಗದವರು ಮತ್ತು ಶೋಷಣೆಗೊಳಗಾದವರ ಉದ್ಧಾರವಾಗಲಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಇದರ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಜನತಾ ಪಕ್ಷ ಏರ್ಪಡಿಸಿರುವ ಬೃಹತ್ ವಿಶಾಲ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ, ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದರು.

ಕಳೆದ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದಿಸಲಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಯಾಗಿ ಕಾಯ್ದೆಯಾಗಿ ಜಾರಿಗೆ ಬಂದಿದೆ. ಜನರ ತೀರ್ಪನ್ನು ಮತ್ತು ಸಂಸತ್ತನ್ನು ಎಲ್ಲರೂ ಗೌರವಿಸಬೇಕು. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ, ಕಾಯ್ದೆಯನ್ನು ವಿರೋಧಿಸುವ ಭರದಲ್ಲಿ ಜನರನ್ನು ಪ್ರಚೋದಿಸಲಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಕಲಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ವಾಗ್ದಾಳಿ ನಡೆಸಿದರು.

ಕೆಲವು ರಾಜಕೀಯ ಪಕ್ಷಗಳು ಕಾಯ್ದೆಯ ಕುರಿತಾಗಿ ವದಂತಿಗಳನ್ನು ಹರಡುತ್ತಿವೆ. ಈ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಪ್ರತಿಪಕ್ಷಗಳು ದೇಶದಲ್ಲಿ ಭಯ ಹಾಗೂ ಅವ್ಯವಸ್ಥೆಯ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ವಿದೇಶದಲ್ಲೂ ಭಾರತದ ಹೆಸರನ್ನು ಕೆಡಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವಾಗ ಮತ್ತು ಸೌಲಭ್ಯವನ್ನು ಹಂಚುವಾಗ ಜನರಲ್ಲಿ ಜಾತಿ, ಧರ್ಮ ಕೇಳಿದ್ದೇವೆಯೇ? ಎಲ್ಲರನ್ನೊಳಗೊಂಡ ಎಲ್ಲರ ವಿಕಾಸ ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟವರು ನಾವು. ಪ್ರಧಾನಿಯಾದ ನಂತರ ನಾನು ಮಾಡಿರುವ ಕೆಲಸಗಳನ್ನು ಪರೀಕ್ಷಿಸಿ ಎಂದು ಪ್ರತಿಪಕ್ಷದವರಿಗೆ ನಾನು ಸವಾಲು ಹಾಕುತ್ತೇನೆ.

ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಬಡವರಿಗೆ ಸಹಾಯವಾಯಿತು, ಆ ಯೋಜನೆ ನೀಡುವಾಗ ನೀವು ಯಾವ ಜಾತಿ, ಯಾವ ಧರ್ಮ ಎಂದು ಕೇಳಲಿಲ್ಲ, ಹೀಗಿರುವಾಗ ನೀವು ನಮ್ಮನ್ನು ಇಷ್ಟೊಂದು ಏಕೆ ದ್ವೇಷಿಸುತ್ತಿದ್ದೀರಿ?

ಕೆಲವು ರಾಜಕೀಯ ಪಕ್ಷಗಳು ಸುಮ್ಮನೆ ವದಂತಿ ಹಬ್ಬಿಸುತ್ತಿದೆ. ಜನರಲ್ಲಿ ಪ್ರಚೋದನೆ ಹುಟ್ಟಿಸಿ ತಪ್ಪುದಾರಿಗೆಳೆಯುತ್ತಿದ್ದಾರೆ. ದೆಹಲಿಯಲ್ಲಿ ಅನಧಿಕೃತ ಕಾಲೊನಿಗಳನ್ನು ಅಧಿಕೃತಗೊಳಿಸುವಾಗ ಅವರಲ್ಲಿ ಜಾತಿ, ಧರ್ಮ ಕೇಳಿದ್ದೇವೆಯೇ, ನೀವು ಯಾವ ಪಕ್ಷವನ್ನು ಬೆಂಬಲಿಸುತ್ತೀರಿ ಎಂದು ಕೇಳಿದ್ದೇವೆಯೇ, 1970, 1980ರ ಅವರ ದಾಖಲೆಗಳನ್ನು ಕೇಳಿದ್ದೇವೆಯೇ ಎಂದು ರ್ಯಾಲಿಯಲ್ಲಿ ಪ್ರತಿಪಕ್ಷಗಳನ್ನು ಪ್ರಧಾನಿ ತರಾಟೆಗೆ ತೆಗೆದುಕೊಂಡರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.