ಕೆ.ಎನ್.ಪಿ.ವಾರ್ತೆ,ಉಡುಪಿ,ಡಿ.29;

ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಹಳ್ಳಿ. ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಬಹಳ ಜನಕ್ಕೆ ಹೆಸರು ಕೇಳಿಯೇ ಗೊತ್ತಿಲ್ಲ. ಅಂಥ ಅಜ್ಞಾತವಾದೊಂದು ಕುಗ್ರಾಮ.

ಇಂಥ ಹಳ್ಳಿಯಲ್ಲಿ 1931ಎಪ್ರಿಲ್ 27 ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದರು.

ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡುಮಗುವಿಗೆ ‘ವೆಂಕಟರಮಣ’ ಎಂದು ಹೆಸರಿಟ್ಟರು. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಜನನ.

ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ. ವೇದಮಾತೆ ವಟುವಿನ ತುಟಿಯಲ್ಲಿ ನಲಿದಳು.

ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ – ತಾಯಿ ಮಗನನ್ನು ಉಡುಪಿಗೆ ಕರೆ ತಂದರು.

ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ: ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೆ?

ತಂದೆ – ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ.

ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು.

‘ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?’

ವೆಂಕಟರಮಣನಿಂದ ಬಂದ ಉತ್ತರ ಒಂದೇ “ಹ್ಞೂ, ಆಗುತ್ತೇನೆ…”

ಪರ್ಯಾಯದ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ವ್ಯಾಸತೀರ್ಥರ ತಪೋಭೂಮಿಯಾದ ಹಂಪೆಯನ್ನು ತಲುಪಿದ ಆಗಿನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರ ನಿರ್ಧಾರ ಗಟ್ಟಿಗೊಂಡಿತು.

ವಿಳಂಬ ಮಾಡದೆ ವೆಂಕಟರಮಣನನ್ನು ಕರೆಸಿಕೊಂಡರು. ಹಿರಿಯರ ಜತೆ ಹಂಪೆಗೆ ತೆರಳಿದ ಆಗಷ್ಟೇ ಉಪನೀತನಾಗಿದ್ದ ವಟು ವೆಂಕಟರಮಣರಿಗೆ 1938ರ ಡಿಸೆಂಬರ್ 3 ರಂದು ಹಂಪಿಯ ಚಕ್ರತೀರ್ಥದಲ್ಲಿ ಸನ್ಯಾಸ ದೀಕ್ಷೆ ನೀಡಿ ವಿಶ್ವೇಶ ತೀರ್ಥರೆಂದು ನಾಮಾಂಕಿತವನ್ನಿತ್ತರು. ವಿಶ್ವೇಶ ತೀರ್ಥರಿಗೆ ಆಗಿನ್ನೂ 8 ವರ್ಷ!. ಅಲ್ಲಿಂದ ಮುಂದೆ ನಡೆದಿದ್ದೆಲ್ಲವೂ ಇತಿಹಾಸವೇ…

ವಿದ್ಯಾಮಾನ್ಯರು ವಿದ್ವತ್ ಸಭೆಯೊಂದನ್ನು ನಡೆಸುತ್ತಿದ್ದರು. ಬಾಲ ಯತಿಯಾಗಿದ್ದ ಪೇಜಾವರ ಶ್ರೀಗಳನ್ನು ಒಮ್ಮೆ ಸಭೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಹಿರಿಯ ವಿದ್ವಾಂಸರು ಹಾಜರಿದ್ದ ಸಭೆಯಲ್ಲಿ, ಬಾಲಯತಿಗಳಾಗಿದ್ದ ವಿಶ್ವೇಶ ತೀರ್ಥರು, ಶಾರ್ದೂಲ ವಿಕ್ರೀಡಿತದಲ್ಲಿ ರಚಿಸಿದ ಪದ್ಯ ಇಡೀ ಸಭೆಯನ್ನು ಬೆರಗುಗೊಳಿಸಿತು.

ನಂತರ ಗುರು ವಿದ್ಯಾಮಾನ್ಯರಲ್ಲಿ ಅಧ್ಯಯನ ಆರಂಭಿಸಿದ ಶ್ರೀಗಳು, 8 ವರ್ಷಗಳ ಕಾಲ ಸತತವಾಗಿ ಧಾರ್ಮಿಕ ಗ್ರಂಥಗಳ ಅಧ್ಯಯನ ನಡೆಸಿದರು. 1951 ರಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನದಲ್ಲಿ 20 ವರ್ಷದ ತರುಣ ಯತಿಗಳಾಗಿದ್ದ ವಿಶ್ವೇಶ ತೀರ್ಥರ ಪಾಂಡಿತ್ಯ ಕಂಡು ತಲೆದೂಗಿದ್ದ ಜಯಚಾಮರಾಜೇಂದ್ರ ಒಡೆಯರು ಶ್ರೀಗಳನ್ನು ಅರಮನೆಗೆ ಕರೆಸಿ, ಅವರಿಂದ ಪೂಜೆ ಮಾಡಿಸಿದ್ದರು.

ಸಕಲರನ್ನೂ ಆಕರ್ಷಿಸುವ ವಿದ್ವತ್ತು, ಸೌಜನ್ಯ, ದೀನ ದಲಿತರ ಏಳ್ಗೆಗೆ ಕಾಳಜಿಗಳು ಶ್ರೀಗಳ ವ್ಯಕ್ತಿತ್ವಕ್ಕೆ ಮುಕುಟಪ್ರಾಯ. ಮಾನವತೆಯೇ ದೇಹಧರಿಸಿದಂತಿದ್ದ ಪೇಜಾವರ ಶ್ರೀಗಳನ್ನು ಕಂಡು ಆಕರ್ಷಿತರಾಗದವರಾರು? ಅಂತಹ ಯತಿಗಳ ಸಾಧನೆಯ ಹಾದಿಯ ನೋಟ ಇಲ್ಲಿದೆ.

*1951 ಜನವರಿ 18 ರಂದು, ಮೊದಲ ಪರ್ಯಾಯ ಪೀಠಾರೋಹಣ, ಅನ್ನದಾನ – ಜ್ಞಾನದಾನಗಳಲ್ಲಿ ಸಾಟಿಯಿಲ್ಲದ ಪರ್ಯಾಯ

ಪರ್ಯಾಯದ ಅವಧಿಯಲ್ಲೇ ಮಾಧ್ವರೆಲ್ಲರ ಸಂಘಟನೆಗೆ ನಾಂದಿ ಹಾಡಿದ ಮಾಧ್ವ ತತ್ವಜ್ಞಾನ ಸಮ್ಮೇಳನ, 1956 ಜುಲೈ 28, ಟೀಕಾಚಾರ್ಯರ ಪುಣ್ಯದಿನದಂದು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪನೆ.

12 ವರ್ಷಗಳ ಕಾಲ ನಿರಂತರ ಶಾಸ್ತ್ರಾಧ್ಯಯನ ನಡೆಸುವ ಗುರುಕುಲದ ಮಾದರಿಯ ನಾಡಿನ ಹೆಮ್ಮೆಯ ಆಧ್ಯಾತ್ಮ ವಿದ್ಯಾಕೇಂದ್ರ. ಈ 56 ವರ್ಷಗಳ ಹರೆಯದಲ್ಲಿ ಈ ಸಂಸ್ಥೆಯಲ್ಲಿ ಕಲಿತು ಹೊರಬಂದ ಖ್ಯಾತ ವಿದ್ವಾಂಸರು ನೂರಾರು ಮಂದಿ. ಇವೆಲ್ಲಾ ತರುಣ ಶ್ರೀಪಾದರ ಉತ್ತುಂಗ ಸಾಧನೆಯ ಕಿರೀಟಕ್ಕೊಂದು ಗರಿ. ಚಿನ್ನದಲ್ಲಿ ಕಂಪು ಸೇರಿದಂತೆ ಆಯ್ತು.

*1967 ರಲ್ಲಿ ಬಿಹಾರದ ಬರಗಾಲದ ಸಂದರ್ಭದಲ್ಲಿ ನೊಂದ ಜನರ ಸಹಾಯಕ್ಕಾಗಿ ಪಾದಯಾತ್ರೆ ನಡೆಸಿ, ಗಯಾ ಜಿಲ್ಲೆಯ ಹಳ್ಳಿಗಳಲ್ಲಿ ಸಂತ್ರಸ್ತರಿಗೆ ಔಷಧೋಪಚಾರ
*1978ರಲ್ಲಿ ಆಂಧ್ರದ ಹಂಸಲದಿವಿ ಗ್ರಾಮ ಸಮುದ್ರ ಪಾಲಾದಾಗ, ಒಂದು ಗ್ರಾವವನ್ನು ದತ್ತು ಪಡೆದು, 150 ಮನೆಗಳ ನಿರ್ಮಾಣ ಹಾಗೂ 1955ರಲ್ಲಿ ಗೋವಿಂದಪುರ ಗ್ರಾಮ ಭೂಕಂಪಕ್ಕೆ ತುತ್ತಾದಾಗ ಸಂತ್ರಸ್ತರಿಗೆ 60 ಮನೆಗಳ ನಿರ್ಮಾಣ
*1984ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಬದರಿಕ್ಷೇತ್ರದಲ್ಲಿ ಅನಂತ ಮಠದ ಸ್ಥಾಪನೆ
*1986ರಲ್ಲಿ ಮಧ್ವಾಚಾರ್ಯರ 750ನೇ ಜಯಂತಿಯನ್ನು ಪಾಜಕದಲ್ಲಿ ವೈಭವವಾಗಿ ನಡೆಸಿ, ನಂತರ ದೇಶದಾದ್ಯಂತ ಭಕ್ತಿರಥ ಯಾತ್ರ
*1990ರಲ್ಲಿ ಮಧ್ವಾಚಾರ್ಯರ ಜನ್ಮಭೂಮಿ ಪಾಜಕದಲ್ಲಿ ವಾಸುದೇವ ಗುರುಕುಲ ಸ್ಥಾಪನೆ
*ತಿರುಪತಿಯಲ್ಲಿ ಉಡುಪಿ ಮಠ, ಹರಿದ್ವಾರದಲ್ಲಿ ಮಧ್ವಮಂದಿರ, ವಿದ್ಯಾಪೀಠದ ಕೃಷ್ಣಮಂದಿರ ಸ್ಥಾಪನೆ
*1966 ನವೆಂಬರ್ 19ರಂದು ಗೋಹತ್ಯಾನಿಷೇಧಕ್ಕಾಗಿ ಎರಡು ದಿನ ಉಪವಾಸ.
*1994ರ ಸೆಪ್ಟಂಬರ್ 26ರಂದು ಆಂಧ್ರದ ರುದ್ರಾರಂ (ಹೈದರಾಬಾದ್) ಕಸಾಯಿ ಖಾನೆಯ ವಿರುದ್ಧ ಪಶುರಕ್ಷಾಯಜ್ಞ ಚಳುವಳಿಗಾಗಿ ಉಪವಾಸ, 12ಕಿ.ಮೀ. ನಡಿಗೆ
*1962ರಲ್ಲಿ ಬೆಂಗಳೂರಿನಲ್ಲಿ ಶ್ರೀಕೃಷ್ಣಸೇವಾಶ್ರಮ ಆಸ್ಪತ್ರೆ. ಈಗ ಇದು ಜಯನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಉಡುಪಿಯಲ್ಲಿ ಶ್ರೀಕೃಷ್ಣಸೇವಾಧಾಮ ಅನಾಥ ಮಕ್ಕಳ ಕೇಂದ್ರ. 1968ರ ಜೂನ್ 18ರಂದು ಉಡುಪಿಯಲ್ಲಿ ಶ್ರೀಕೃಷ್ಣಚಿಕಿತ್ಸಾಲಯ
*ಬೆಂಗಳೂರಿನಲ್ಲಿ ಅರುಣಚೇತನ ಅಂಗವಿಕಲ ಮಕ್ಕಳ ಶಾಲೆ

ಪೇಜಾವರ ಶ್ರೀಗಳ ದಿಟ್ಟ ಹೆಜ್ಜೆಗಳು…

1. 1970ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಈಜುಕೊಳ ಬಡಾವಣೆಯ ಹಿಂದುಳಿದವರ ವಸತಿ ನಿವಾಸಕ್ಕೆ ಭೇಟಿ.
2. ಬಳ್ಳಾರಿ ಜಿಲ್ಲೆಯ ಸಂಗನಕಲ್ಲಿನಲ್ಲಿ ಸವರ್ಣೀಯರಿಂದ ದಲಿತರ ಮೇಲೆ ಧಾಳಿ ಯಾದಾಗ ನಿರಾಶ್ರಿತರಾದವರಿಗೆ ಆಶ್ರಯದಾನ.
3. ತುರ್ತುಪರಿಸ್ಥಿತಿಯಲ್ಲಿ ಪ್ರತಿಭಟನೆ.
4. 1981 ರಲ್ಲಿ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ದಲಿತರು ಬಲಾತ್ಕಾರವಾಗಿ ಅಮಿಷಕ್ಕೊಳಗಾಗಿ ಮತಾಂತರಗೊಂಡಾಗ ಅಲ್ಲಿಗೆ ಭೇಟಿ ನೀಡಿ ಪರಿಹಾರೋಪಾಯ.
5. ಪಂಜಾಬಿನಲ್ಲಿ ಶಾಂತಿಯಾತ್ರೆ- ಲೂಯಾನ, ತರನ್ ಶರನ್, ಅಮೃತಸರ ಗಳಲ್ಲಿ ಅನೇಕ ಸಿಖ್ ನಾಯಕರೊಂದಿಗೆ ಮಾತುಕತೆ.
6. 1984 ರಲ್ಲಿ ಶ್ರೀಕೃಷ್ಣಮಠದ ಸಭಾಭವನದಲ್ಲಿ ಈದ್‌ಮಿಲನ್ ಸೌಹಾರ್ದ ಕೂಟ- ಮುಸ್ಲಿಂ ಸಮ್ಮೇಳನ. ಮುಸ್ಲಿಂ ನಾಯಕರಾದ ಆಲಿಯಾನ್ ಮೌಲಾನಾ ಮಹಿದುದ್ದೀನ್ ಖಾನ್ ಮೊದಲಾದವರೊಂದಿಗೆ ಸೌಹಾರ್ದ ಸಮಾಲೋಚನೆ.
7. ಉತ್ತರ ಭಾರತದ ಉಮಾಭಾರತಿಗೆ ಸನ್ಯಾಸ ದೀಕ್ಷೆ.

1965 ರಲ್ಲಿ ಕೊಚ್ಚಿಯ ಮಹಾರಾಜರ ಭೇಟಿ. ಮಹಾರಾಜರು ದೊಡ್ಡ ಸಂಸ್ಕೃತ ವಿದ್ವಾಂಸರು. ನ್ಯಾಯ ಶಾಸ್ತ್ರದಲ್ಲಿ ವಿಶೇಷ ಪರಿಣತರು. ಅವರು ಪೇಜಾವರ ಶ್ರೀಪಾದರನ್ನು ವಾಕ್ಛಾತುರ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಮೊದಲು ನ್ಯಾಯ ಶಾಸ್ತ್ರದಲ್ಲಿ ಚರ್ಚೆ. ಅನಂತರ ದ್ವೈತಾದ್ವೈತ ವಿಮರ್ಶೆ. ಶ್ರೀಪಾದರ ಸಮರ್ಥನೆಗೆ ಮಹಾರಾಜರು ಮನಸೋತರು. ಅರಮನೆಯಲ್ಲಿ ಶೀಪಾದರನ್ನು ವೈಭವದಿಂದ ಸನ್ಮಾನಿಸಿ ಕಳಿಸಿಕೊಟ್ಟರು.

1966 ರಲ್ಲಿ ಕಾಶಿಯಲ್ಲೊಂದು ವಿದ್ವತ್ ಸಭೆ. ಕಾಶಿ ತರ್ಕಪಂಡಿತರ ತವರೂರು. ಇಡಿಯ ದೇಶದಲ್ಲಿ ಖ್ಯಾತರಾದ ಮಹಾನ್ ಅದ್ವೈತ ವಿದ್ವಾಂಸ ಅನಂತಕೃಷ್ಣ ಶಾಸ್ತ್ರಿಗಳು, ಅಖಿಲ ಭಾರತ ಖ್ಯಾತಿಯ ಮಹಾ ತರ್ಕ ಪಂಡಿತ ರಾಜರಾಜೇಶ್ವರ ಶಾಸ್ತ್ರಿ ದ್ರಾವಿಡ ಮುಂತಾದ ದಿಗ್ಗಜರೊಡನೆ ಶಾಸ್ತ್ರಾರ್ಥ ಚರ್ಚೆ. ಸೋಲರಿಯದ ಪಂಡಿತರು, ವಯಸ್ಸಿನಲ್ಲಿ ಹಿರಿಯರು. ಅವರ ಮುಂದೆ ಉಡುಪಿಯಿಂದ ಬಂದ 35ರ ತರುಣ ಯತಿ.

ಲೆಕ್ಕಾಚಾರ ತಲೆ ಕೆಳಗಾಯಿತು. ತಮ್ಮ ಭದ್ರಕೋಟೆಯಲ್ಲಿದ್ದ ದಿಗ್ಗಜಗಳೆಲ್ಲ ಈ ತರುಣ ಯತಿ ಸಿಂಹದ ಮುಂದೆ ಮಾತು ಮೂಕವಾಗಿ ತಲೆ ಬಾಗಿಸಿದರು. ಇದು ಒಂದೆರಡು ಉದಾಹರಣೆಯಷ್ಟೇ. ಇತರ ಮತದ ವಿದ್ವಾಂಸರು, ಯತಿಗಳು ಕೂಡಾ ಪೇಜಾವರ ಶ್ರೀಪಾದರ ಪಾಂಡಿತ್ಯಕ್ಕೆ ಮೆಚ್ಚಿಅವರ ಕೊರಳಿಗೆ ವಿಜಯಮಾಲೆ ತೊಡಿಸಿ ಸತ್ಕರಿಸಿದರು. ಪುಣೆ – ಪ್ರಯಾಗ ಮುಂತಾದ ಎಲ್ಲ ಕಡೆಯೂ, ಎಲ್ಲಾ ವಿದ್ವತ್ ಸಭೆಗಳಲ್ಲೂ ಶ್ರೀಪಾದರಿಗೇ ಜಯಭೇರಿ ಸಿಕ್ಕಿತ್ತು.

ಬಡತನಕ್ಕೊಂದು ವರದಾನ. ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನ. ಈ ಅವಧಿಯಲ್ಲೇ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ನಡೆಯಿತು. ಜನಸಾಗರವವೇ ಉಡುಪಿಯತ್ತ ಹರಿದುಬಂತು. ‘ಹಿಂದೂಗಳೆಲ್ಲ ಒಂದಾಗಿ ಬಂಧುಭಾವದಿಂದ ಬದುಕಬೇಕು’ ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದರು.

ಶ್ರೀಪಾದರನ್ನು ಬಾಲ್ಯದಿಂದ ಕಾಡುತ್ತಿದ್ದ ಸಮಸ್ಯೆ ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಲೇ ಇತ್ತು.

ಈ ಸಂದರ್ಭದಲ್ಲಿಯೇ ಗಾಂಧೀಜಿಯ ವಿಚಾರಧಾರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ಅಂದಿನಿಂದ, ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು.

ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು. ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾವೂ ಉಂಡರು. ವೈಭವದ ಉತ್ತುಂಗ ಸ್ಥಿತಿಯಲ್ಲಿ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು.

ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕರ್ನಾಟಕ ಕಂಡ ಸಂತ ಶ್ರೇಷ್ಠರಲ್ಲಿ ಒಬ್ಬರು. ಹಲವು ಸ್ಥಾಪಿತ ಸೂತ್ರಗಳನ್ನು ಮೀರಿ ಕಲ್ಮಶವಿಲ್ಲದ ನಗುವಿನೊಂದಿಗೆ ಎಲ್ಲರನ್ನೂ ಜೊತೆಗೆಯಾಗಿ ಕೊಂಡೊಯ್ಯಬಲ್ಲ ಧಾರ್ಮಿಕ ನಾಯಕರಾಗಿದ್ದವರು. ಧರ್ಮ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಮಾದರಿಯಾದ ಯತಿಗಳುರು ವಾದಿರಾಜರ ನಂತರ ಉಡುಪಿ ಮಠದಲ್ಲಿ 5 ನೆಯ ಬಾರಿ ಪರ್ಯಾಯ ಅಲಂಕರಿಸಿದ ಖ್ಯಾತಿ ವಿಶ್ವೇಶ ತೀರ್ಥ ಸ್ವಾಮಿಗಳದ್ದು.

ಪೇಜಾವರ ಶ್ರೀ ನಿಧನ : ರಾಜ್ಯಾದ್ಯಂತ 3 ದಿನ ಶೋಕಾಚರಣೆ

ಪೇಜಾವರ ಶ್ರೀಗಳು ಇನ್ನಿಲ್ಲ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.