ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.24;
ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡವು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ.
ಗಣೇಶ್ ವಿಸ್ಕಿನ್ ಮತ್ತು ಅಮಿತ್ ರಾಮಚಂದ್ರ ಬದ್ದಿ ಎನ್ನುವವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿರುವ ಎಸ್‌ಐಟಿ ಅವರನ್ನು ನಿನ್ನೆ ನಗರದ 3ನೇ ಎಎಂಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಈ ಇಬ್ಬರು ಆರೋಪಿಗಳು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರು ಎನ್ನಲಾಗಿದ್ದು, ಗೌರಿ ಹತ್ಯೆಗೆ ಅಕ್ರಮ ಶಸ್ತ್ರಾಸ್ತ್ರವನ್ನು ಇವರೇ ನೀಡಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ, ಬಂಧನದ ವೇಳೆ ಈ ಇಬ್ಬರ ಬಳಿಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ವಿಚಾರಣೆ ವೇಳೆ ಎಸ್‌ಐಟಿ ಪರ ವಕೀಲರು ವಾದ ಮಂಡಿಸಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸಿದ ಗನ್ ಹಾಗೂ ಬೈಕ್ ಬಗ್ಗೆ ಮಾಹಿತಿ ಇದೆ. ಗೋವಾ, ಮಹಾರಾಷ್ಟ್ರ, ಮಂಗಳೂರು, ಬೆಳಗಾವಿ, ಸೇರಿದಂತೆ ಹಲವು ಕಡೆ ಇವರನ್ನು ಕರೆದುಕೊಂಡು ಹೋಗಬೇಕಿದೆ. ಇದೇ ಆರೋಪಿಗಳು ಗನ್ ಹಾಗೂ ಬೈಕನ್ನು ಬಚ್ಚಿಟ್ಟಿದ್ದಾರೆ. ಈ ವಿಚಾರವನ್ನು ಅವರಿಂದಲೇ ಬಾಯಿ ಬಿಡಿಸಿ ಬೈಕನ್ನು ವಶಕ್ಕೆ ಪಡೆಯಬೇಕಿದೆ. ಹೀಗಾಗಿ 15 ದಿನಗಳ ಕಾಲ ಆರೋಪಿಗಳನ್ನು ಎಸ್‌ಐಟಿ ವಶಕ್ಕೆ ನೀಡುವಂತೆ ಮನವಿ ಮಾಡಿದರು.
ಇನ್ನು ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ಎಸ್ಐಟಿ ಅಧಿಕಾರಿಗಳು ಶನಿವಾರ ಬಂಧಿಸಿ ಭಾನುವಾರ ವಶಕ್ಕೆ ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿದಾಗ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ತನಿಖೆ ವೇಳೆ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ತನಿಖಾ ಪ್ರಕ್ರಿಯೆಯ ದಾಖಲೆ ನೀಡುವಂತೆ ಮನವಿ ಮಾಡಿದರು.
ಹತ್ಯೆ ದಿನ ಪರಶುರಾಮ್ ವಾಗ್ಮೋರೆಗೆ ಬೈಕ್ ರೈಡ್ ಮಾಡಿದ್ದ ಆರೋಪಿ ಗಣೇಶ್ ಮಿಸ್ಕಿ..?
ಗೌರಿ ಲಂಕೇಶ್ ಹತ್ಯೆ ದಿನದಂದು ಗಣೇಶ್ ಮಿಸ್ಕಿಮ್, ಪರಶುರಾಮ್ ವಾಗ್ಮೋರೆಗೆ ಬೈಕ್ ರೈಡ್ ಮಾಡಿದ್ದ. ಇನ್ನು ಗಣೇಶ್ ಮಿಸ್ಕಿ ಹಾಗೂ ಇತರೆ ಆರೋಪಿಗಳಿಗೆ ಅಮಿತ್ ರಾಮಚಂದ್ರ ಬದ್ದಿ ಸಹಾಯ ಮಾಡಿದ್ದ ಅನ್ನೋ ಆರೋಪ ಕೇಳಿಬಂದಿದೆ.
14 ದಿನಗಳ ಕಾಲ ಆರೋಪಿಗಳು ಎಸ್ಐಟಿ ವಶಕ್ಕೆ
14 ದಿನಗಳ ಕಾಲ ಆರೋಪಿಗಳನ್ನು ನ್ಯಾಯಾಲಯ ಎಸ್ಐಟಿ ವಶಕ್ಕೆ ನೀಡಿದೆ. ಜುಲೈ.20 ರಂದು ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಸಂಪಾಜೆ ನಿವಾಸಿ ಮೋಹನ್ ನಾಯಕ್ ಎಂಬುವರನ್ನು ಬಂಧಿಸಿದ್ದರು. ಆತನೇ ವಾಗ್ಮೋರೆಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆಯಲ್ಲಿ ಬಾಡಿಗೆಗೆ ಒಂದು ಮನೆಯನ್ನೂ ಕೊಡಿಸಿದ್ದಲ್ಲದೆ, ಹತ್ಯೆ ಮಾಡಲು ವಿವಿಧ ಹಂತಗಳಲ್ಲಿ ಸಹಾಯ ಮಾಡಿದ್ದ ಎಂದು ಆರೋಪಿಸಲಾಗಿದೆ.
2017, ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಭೀಕರವಾಗಿ ಹಣೆಗೆ ಗುಂಡಿಟ್ಟು ಹತ್ಯೆಗೈಯಲ್ಲಾಗಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‍ಐಟಿಗೆ ವಹಿಸಿದ ಮೇಲೆ ಮೊದಲು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಟಿ.ನವೀನ್‍ಕುಮಾರ್ ಎಂಬಾತನನ್ನು ಬಂಧಿಸಲಾಯಿತು. ಆತ ನೀಡಿದ ಸುಳಿವಿನ ಮೇರೆಗೆ ಪರಶುರಾಮ್ ವಾಗ್ಮೋರೆ ಸೇರಿದಂತೆ ಈವರೆಗೂ ಪೊಲೀಸರು 9 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.