ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಏ.02;

ಇಂದು ಮತ್ತು ನಾಳೆ ನಿಗಧಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಕಾರ್ಯಕ್ರಮ ರದ್ದಾಗಿದ್ದು, ಏ.12 ಮತ್ತು 13ಕ್ಕೆ ಮುಂದೂಡಲಾಗಿದೆ.

ನಗರದ ಬಿಜೆಪಿ ಗ್ರಾಮೀಣ ಘಟಕದ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಬಿಜೆಪಿ ವಿಭಾಗೀಯ ಪ್ರಭಾರಿ ಈರಣ್ಣ ಕಡಾದಿ, ಇಂದು ಮತ್ತು ನಾಳೆ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ನಿಗದಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಕಾರ್ಯಕ್ರಮ ಸದ್ಯಕ್ಕೆ ರದ್ದಾಗಿದ್ದು, ಅಮಿತ್ ಶಾ ಅವರು ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಕಾರ್ಯಕ್ರಮವನ್ನು ಏ.12 ಮತ್ತು 13ಕ್ಕೆ ಮುಂದೂಡಲಾಗಿದೆ.

ಏ.12 ಮತ್ತು 13 ರಂದು ರಾಜ್ಯಕ್ಕೆ ಬರಲಿರುವ ಅಮಿತ್ ಶಾ, ಬೆಳಗಾವಿಯ ಚಿಕ್ಕೋಡಿ, ನಿಪ್ಪಾಣಿ, ಗೋಕಾಕ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಬೆಳಗಾವಿಯ ಕೆಎಲ್ಇ ಕಾಲೇಜಿನಲ್ಲಿ ಸಂವಾದ, ನಿಪ್ಪಾಣಿಯಲ್ಲಿ ಜೈನ ಸಮುದಾಯದ ಜತೆ ಚರ್ಚೆ, ಮಹಿಳಾ ಕಾರ್ಮಿಕರ ಜತೆ ಸಂವಾದ, ಗೋಕಾಕ್ ದಲ್ಲಿ ರೋಡ್ ಶೋ ನಡೆಸಲಿದ್ದಾರೆ. ನಂತರ ಬಾಗಲಕೋಟೆಗೆ ತೆರಳಿ ಮುಷ್ಟಿ ಧಾನ್ಯ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.