ಕೆ.ಎನ್.ಪಿ.ಲೇಖನ;

ಶ್ರಾವಣ ತಿಂಗಳು ಬಂತೆಂದರೆ ಇನ್ನಿಲ್ಲದ ಸಂಭ್ರಮ. ಪ್ರತಿಯೊಂದು ಮನೆಯಲ್ಲೂ ಹಬ್ಬದ ವಾತಾವರಣ ಮನೆ ಮಾಡಿರುವುದು. ಯಾಕೆಂದರೆ ಆಷಾಢ ಮಾಸ ಕಳೆದ ಬಳಿಕ ಬರುವಂತಹ ಶ್ರಾವಣ ಮಾಸದಲ್ಲಿ ಹಲವಾರು ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಇದರಿಂದ ಶ್ರಾವಣ ತಿಂಗಳು ಎಂದರೆ ಹಿಂದೂಗಳಿಗೆ ಅಚ್ಚುಮೆಚ್ಚು ಮಾತ್ರವಲ್ಲದೆ ಇದು ಪವಿತ್ರ ತಿಂಗಳು ಕೂಡ.

ನಾಡಿಗೇ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ಕರ್ನಾಟಕದಾದ್ಯಂತ ಆಗಸ್ಟ್ 05 ರಂದು ಭಕ್ತಿ-ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ(ಪಂಚಮಿ) ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.

ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ.

ಶ್ರಾವಣ ಮಾಸದಲ್ಲಿ ಬರುವಂತಹ ಮೊದಲ ಹಬ್ಬವೇ ನಾಗರ ಪಂಚಮಿ. ಶುಕ್ಲ ಪಕ್ಷದ ಶ್ರಾವಣ ತಿಂಗಳಲ್ಲಿ ಬರುವಂತಹ ನಾಗರ ಪಂಚಮಿಯು ಹರಿಯಾಲಿ ತೀಜ್ ನ ಎರಡು ದಿನಗಳ ಬಳಿಕ ಬರುವುದು. ಜಾರ್ಜಿಯನ್ ಕ್ಯಾಲೆಂಡರ್ ಪ್ರಕಾರ ನಾಗರ ಪಂಚಮಿಯು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬರುವುದು.

ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಸ್ತುತಿಸಲಾಗುತ್ತದೆ.

ನಾಗರ ಪಂಚಮಿ : ನೀವು ತಿಳಿಯಲೇ ಬೇಕಾದ ಮಹತ್ವದ ಸಂಗತಿಗಳು..

ಮಹಿಳೆಯರು ನಾಗ ದೇವರನ್ನು ಪೂಜಿಸುವರು ಮತ್ತು ನಾಗನ ಕಲ್ಲಿಗೆ ಹಾಲೆರೆಯುವರು. ಮಹಿಳೆಯರು ತಮ್ಮ ಕುಟುಂಬದವರು ಹಾಗೂ ಸೋದರರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವರು. ನಾಗ ದೇವರು ಎಂದು ನಂಬಿರುವಂತಹ ನಾಗರಾಜನನ್ನು ನಾಗರ ಪಂಚಮಿ ದಿನದಂದು ಭಾರತದೆಲ್ಲೆಡೆ ಹಿಂದೂಗಳು ಪೂಜೆ ಮಾಡುವರು. ಹಿಂದೂ ಧರ್ಮದಲ್ಲಿ ಕೆಲವೊಂದು ದೇವರುಗಳನ್ನು ಆರಾಧನೆ ಮಾಡಲು ವಿಶೇಷವಾದ ದಿನಗಳು ಹಾಗೂ ತಿಥಿಗಳು ಇವೆ. ಇದರಲ್ಲಿ ಮುಖ್ಯವಾಗಿ ಶ್ರಾವಣ ತಿಂಗಳಲ್ಲಿ ಬರುವಂತಹ ಪಂಚಮಿ ತಿಥಿಯು ನಾಗ ದೇವರ ಆರಾಧನೆ ಅತೀ ಶುಭವೆಂದು ಪರಿಗಣಿಸಲಾಗಿದೆ. ಶ್ರಾವಣ ತಿಂಗಳಲ್ಲಿ ಬರುವಂತಹ ಶುಕ್ಲ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ಸರ್ಪದ ಆರಾಧನೆ ಮಾಡಿದರೂ ಅದು ನಾಗದೇವರಿಗೆ ಸಲ್ಲುವುದು ಎಂದು ನಂಬಲಾಗಿದೆ. ಇದರಿಂದಾಗಿ ಈ ದಿನದಂದು ಸರ್ಪಗಳನ್ನು ಹೆಚ್ಚಾಗಿ ಪೂಜಿಸುವರು. 

ನಾಗರ ಪಂಚಮಿ: ಆಗಸ್ಟ್ 5, 2019, ಸೋಮವಾರ

ನಾಗರ ಪಂಚಮಿ ಪೂಜಾ ಮುಹೂರ್ತ: ಬೆಳಗ್ಗೆ 6.09 ರಿಂದ 8.40ರ ತನಕ

ಸುಮಾರು 12 ನಾಗ ದೇವತೆಗಳು ಇದ್ದಾರೆ ಮತ್ತು ಇವರನ್ನು ನಾಗರ ಪಂಚಮಿ ದಿನದಂದು ಪೂಜಿಸಲಾಗುತ್ತದೆ.

 • ಅನಂತ
 • ವಾಸುಕಿ
 • ಶೇಷ
 • ಪದ್ಮ
 • ಕಂಬಬಾಲ
 • ಕಾರ್ಕೋಟಕ
 • ಅಶ್ವತಾರ
 • ದೃತರಾಷ್ಟ್ರ
 • ಶಂಕಪಾಲ
 • ಕಾಲಿಯಾ
 • ತಕ್ಷಕ
 • ಪಿಂಗಾಲ

ಪುರಾಣ ಕತೆಯೊಂದರ ಪ್ರಕಾರ ಹಾವು ಕಚ್ಚಿ ಮಡಿದ ತನ್ನ ಸಹೋದರನನ್ನು ಸಹೋದರಿಯೊಬ್ಬಳು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಾಗಿತ್ತು. ಹಾವನ್ನು ಭಕ್ತಿಭಾವದಿಂದ ಪೂಜಿಸಿ ತನ್ನ ಅಣ್ಣನನ್ನು ತಂಗಿ ಬದುಕಿಸಿಕೊಂಡ ದಿನವಾಗಿದ್ದರಿಂದ ಈ ದಿನವನ್ನು ಭ್ರಾತೃತ್ವದ ಸಂಕೇತವಾಗಿಯೂ ಕೆಲವೆಡೆ ಆಚರಿಸಲಾಗುತ್ತದೆ.

ಜನಮೇಜಯ ಎಂಬ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಹಾವು ಕಾರಣ ಎಂದು ತಿಳಿದು ಭೂಲೋಕದಲ್ಲಿರುವ ಸರ್ಪಸಂಕುಲವನ್ನೆಲ್ಲ ನಾಶ ಮಾಡುವ ಶಪಥ ಮಾಡಿ, ಸರ್ಪಯಜ್ಞ ಮಾಡಲು ಹೊರಡುತ್ತಾನೆ. ಆದರೆ ಪ್ರಾಣಿ ಹಿಂಸೆ ಮಹಾಪಾಪ ಎಂಬುದನ್ನು ಸಂತರೊಬ್ಬರ ಹಿತವಚನದಿಂದ ಅರಿತ ಜನಮೇಜಯ ಸರ್ಪಯಜ್ಞವನ್ನು ಹಿಂತೆಗೆದುಕೊಳ್ಳುತ್ತಾನೆ. ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಆದ್ದರಿಂದ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಎಂಬ ಪ್ರತೀತಿಯೂ ಇದೆ.

ನಾಗರ ಪಂಚಮಿಯ ವಿಶಿಷ್ಟತೆ :

ನಾಗರ ಪಂಚಮಿಯ ದಿನ ನಾಗರ ಕಲ್ಲು ಅಥವಾ ನಾಗರ ಹಾವನ್ನು ಆರಾಧಿಸುವುದರಿಂದ ಬಡತನವು ದೂರವಾಗುವುದು ಎಂದು ಹೇಳಲಾಗುವುದು. ಅವಿವಾಹಿತ ಮಹಿಳೆಯರು ನಾಗರ ಕಲ್ಲಿಗೆ ಹಾಲೆರೆಯುವುದು ಅಥವಾ ಪೂಜೆ ಗೈಯುವುದರಿಂದ ಮನದಿಂಗಿತದಂತಹ ಹುಡುಗನನ್ನು ಪಡೆದುಕೊಳ್ಳುವರು. ದೇವರ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಈ ಹಬ್ಬದ ದಿನ ಭಕ್ತರು ನಾಗರ ಪೂಜೆ ಹಾಗೂ ನಾಗದೇವರ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಪೂರೈಸುತ್ತವೆ ಎಂದು ಹೇಳಲಾಗುವುದು. ಈ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುವುದು.

ಮಳೆಗಾಲದಲ್ಲಿ ಹಾವಿನ ಭಯ :

ನಾಗರ ಪಂಚಮಿಯನ್ನು ಮಳೆಗಾಲದ ಸಮಯದಲ್ಲೇ ಆಚರಿಸುವುದಕ್ಕೆ ಕಾರಣ ಹುಡುಕಿದರೆ, ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಹಾವುಗಳಿಂದ ರಕ್ಷಣೆ ಪಡೆಯುವ ಉದ್ದೇಶ ಎದ್ದು ಕಾಣುತ್ತದೆ. ಈ ಸಮಯದಲ್ಲಿ ಹಾವಿಗೆ ಹಾಲೆರೆಯುವ ಮೂಲಕ ಯಾವುದೇ ರೀತಿಯ ಅಪಾಯ ನೀಡದಿರು ಎಂದು ಬೇಡುವ ಉದ್ದೇಶವೂ ಇರುವುದು ಸುಳ್ಳಲ್ಲ.

ನಾಗರ ಪಂಚಮಿ ಉಪವಾಸ :

ಪುರಾಣ ಕತೆಯೊಂದರಲ್ಲಿ ಸತ್ಯೇಶ್ವರಿ ಎಂಬ ದೇವಿಯೊಬ್ಬಳು ನಾಗರಪಂಚಮಿಯ ಮುನ್ನಾದಿನ ಮೃತನಾದ ತನ್ನ ಸಹೋದರನನ್ನು ನೆನೆದು, ನಾಗರಪಂಚಮಿಯ ದಿನ ಅನ್ನ-ನೀರು ಬಿಟ್ಟು ಉಪವಾಸ ಮಾಡಿದಳು. ಇಂದಿಗೂ ನಾಗರ ಪಂಚಮಿಯ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಉಪವಾಸ ಮಾಡುವ ಪರಿಪಾಠವಿದೆ.

ಹಬ್ಬದ ಆಚರಣೆಯ ವಿಧಾನ :

ಹಬ್ಬದ ದಿನದಂದು ಜನರು ಉಳುಮೆ ಸಹಿತ ಯಾವುದೇ ನೆಲವನ್ನು ಅಗಿಯುವ ಕೆಲಸವನ್ನು ಮಾಡುವುದಿಲ್ಲ. ನಾಗರ ಕಲ್ಲಿಗೆ ಹಸುವಿನ ಹಾಲು, ಹುರಿದ ಭತ್ತ (ಅರಳು), ಭತ್ತದ ತೆನೆ ಮತ್ತು ದೂರ್ವ ಅಥವಾ ಗರಿಕೆ (ಎಳೆಹುಲ್ಲಿನ ತುರಿಭಾಗ) ಯನ್ನು ಅರ್ಪಿಸಿ ನಾಗನನ್ನು ಪೂಜಿಸಲಾಗುತ್ತದೆ. ಭಾರತದಾದ್ಯಂತ ಎಲ್ಲೆಡೆ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಕೆಲವೆಡೆ ಕಲ್ಲಿನ ಬದಲು ಮಣ್ಣಿನಿಂದ ಮಾಡಿದ ಹಾವಿನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕೆಲವೆಡೆ ಜೀವಂತ ಹಾವಿಗೂ ಹಾಲು ಮತ್ತು ಹಾವು ಸ್ವೀಕರಿಸುವ ಇತರ ಪದಾರ್ಥಗಳನ್ನು ನೀಡಿ ಪೂಜೆ ಸಲ್ಲಿಸಲಾಗುತ್ತದೆ.

ನಾಗ ಚತುರ್ಥಿ :

ನಾಗರ ಪಂಚಮಿ ಮೊದಲಿನ ದಿನ ಕೆಲವು ಜನರು ಉಪವಾಸ ಮಾಡುವರು ಮತ್ತು ನಾಗರ ಪಂಚಮಿ ಮೊದಲ ದಿನ ಮಾಡುವಂತಹ ಉಪವಾಸವನ್ನು ನಾಗ ಚತುರ್ಥಿ ಅಥವಾ ನಾಗುಲ ಚೌತಿ ಎಂದು ಕರೆಯಲಾಗುತ್ತದೆ. ಆಂಧ್ರ ಪ್ರದೇಶದಲ್ಲಿ ನಾಗ ಚತುರ್ಥಿ ಅಥವಾ ನಾಗುಲ ಚೌತಿಯನ್ನು ದೀಪಾವಳಿ ಬಳಿಕ ಆಚರಿಸಲಾಗುತ್ತದೆ ಮತ್ತು ಇದೇ ವೇಳೆ ತಮಿಳುನಾಡಿನಲ್ಲಿ ಸೂರ ಸಮಹಾರಮ್ ಹಬ್ಬವು ನಡೆಯುವುದು.

ನಾಗಪ್ಪ, ಹುತ್ತಪ್ಪನಿಗೆ ಹಾಲು ನೈವೇದ್ಯೆ:

ನಾಗದೇವ, ಅದರ ಹುತ್ತ ಕೂಡಾ ಈ ಹಬ್ಬದಲ್ಲಿ ಪೂಜೆಗೊಳ್ಳಲಿದೆ. ನಾಗರ ಅಮವಾಸ್ಯೆ ದಿನದಿಂದ ಐದು ದಿನಗಳ ನಿರಂತರವಾಗಿ ಹಬ್ಬ ಆಚರಿಸಲ್ಪಡುತ್ತದೆ. ನಾಗರ ಪಂಚಮಿಯಲ್ಲಿ ಕೆಲವರು ಕಲ್ಲು ನಾಗರನಿಗೆ ಹಾಲು ಎರೆದರೆ ಇನ್ನೂ ಕೆಲವರು ಜೀವಂತ ಸರ್ಪಗಳಿಗೆ ಹಾಲುಣಿಸುತ್ತಾರೆ.

ತರತರಹದ ಲಾಡು:

ನಾಗರ ಪಂಚಮಿಗೆ ಬಗೆ ಬಗೆಯ ಲಾಡುಗಳದ್ದೆ ದರ್ಬಾರು, ಕಡ್ಲಿ, ಪುಟಾಣಿ, ಗೋಧಿ, ಬುಂದೆ, ಶೇಂಗಾ, ಹೆಸರು, ತಂಬಿಟ್ಟು, ರವೆ ಉಂಡಿ ತಯಾರಿಸಿಟ್ಟು ಬಂದ ಬೀಗರಿಗೆ ಉಂಡಿ ಕೊಡಲಾಗುತ್ತದೆ. ನವವಿವಾಹಿತೆ ಗಂಡನ ಮನೆಯಲ್ಲಿದ್ದರೆ ತವರು ಮನೆಯವರು ಪಂಚಮಿ ಹಬ್ಬಕ್ಕೆ ಕೆರೆದುಕೊಂಡು ಬರುವುದು ಪದ್ಧತಿ.

ಹಬ್ಬದಲ್ಲಿ ಜೋಕಾಲಿ ಜೋರು :

ನಾಗರ ಪಂಚಮಿಯಲ್ಲಿ ನಾಗಪ್ಪನಿಗೆ ಹಾಲೆರೆದು, ಪೂಜೆ ಮಾಡಿ ನೈವೇದ್ಯ ಸಲ್ಲಿಸಲಾಗುತ್ತದೆ. ಸಂಜೆ ಹಬ್ಬಕ್ಕೆ ಮೆರಗು ನೀಡಲು ಜೋಕಾಲಿಯಾಟ ಜೋರಾಗಿ ನಡೆಯುತ್ತದೆ. ಪ್ರತಿ ಮನೆ, ಮನೆಗಳಲ್ಲಿ ಮಕ್ಕಳಿಗಾಗಿ ಜೋಕಾಲಿ ಕಟ್ಟಲಾಗುತ್ತದೆ. ಗ್ರಾಮದ ಹೊರ ಭಾಗಗಳಲ್ಲಿರುವ ಮರಗಳಿಗೆ ಜೋಕಾಲಿ ಕಟ್ಟಿ ಅನೇಕ ಜನಪದ ಹಾಡುಗಳನ್ನು ಹಾಡುತ್ತ ಯುವತಿಯರು ಸಂಭ್ರಮಿಸುತ್ತಾರೆ.

ಸಸಿ ಹಾಕುವುದು :

ಹಬ್ಬದ ಮುಂಚಿತವಾಗಿ ಮಹಿಳೆಯರು ಹಬ್ಬದ ಕಾರ‍್ಯದ ಸಿದ್ಧತೆಯಲ್ಲಿ ತೊಡಗುವರು ಪ್ರಥಮವಾಗಿ ಮನೆಯಲ್ಲಿ ಗೋಧಿ. ಬತ್ತ, ಗೋವಿನ ಜೋಳ ಇತ್ಯಾದಿಗಳ ಬೀಜಗಳನ್ನು ಹಾಕಿ ಸಸಿಗಳನ್ನು ಹಾಕಿ ಬೆಳೆಸುತ್ತಾರೆ. ಈ ಸಸಿಗಳನ್ನು ನಾಗಪ್ಪ ಮತ್ತು ಹುತ್ತಪ್ಪನ ಪೂಜೆಗೆ ಬಳಸಲಾಗುತ್ತದೆ.

ಈ ಹಬ್ಬದಲ್ಲಿ ಮಕ್ಕಳಿಗೂ ಖುಷಿಯೋ ಖುಷಿ. ಮಕ್ಕಳು ಒಣ ಕೊಬ್ಬರಿಯಿಂದ ಬೋಲ್‌ ಬಗರಿ ಆಡಿಸುತ್ತಾರೆ. ಒಣ ಕೊಬ್ಬರಿ ಬಟ್ಟಲಕ್ಕೆ ದಾರ ಹಾಕಿ ಬೋಲ್‌ ಬಗರಿ ತಿರುಗಿಸುತ್ತ ಮಕ್ಕಳು ಸಂತಸಪಡುತ್ತಾರೆ.

ನಾಗರ ಪಂಚಮಿಯಲ್ಲಿ ವಿಷ್ಣುವನ್ನು ಏಕೆ ಪೂಜಿಸುತ್ತಾರೆ?

ನಾಗರ ಪಂಚಮಿಯ ದಿನ ವಿಷ್ಣು ದೇವರನ್ನು ಸಹ ಆರಾಧಿಸಲಾಗುತ್ತದೆ. ಈ ಪೂಜೆಯ ಹಿಂದೆ ಒಂದು ಪವಿತ್ರವಾದ ಪುರಾಣದ ಹಿನ್ನೆಲೆಯಿದೆ ಎಂದು ಹೇಳಲಾಗುವುದು. “ಕಲಿಯಾ ನಾಗ ಒಮ್ಮೆ ಯಮುನಾ ನದಿಯ ನೀರಿನಲ್ಲಿ ಪ್ರವೇಶಿಸಿತು. ಇದರ ಪರಿಣಾಮವಾಗಿ ನದಿಯ ನೀರೆಲ್ಲಾ ಕಪ್ಪು ಬಣ್ಣಕ್ಕೆ ತಿರುಗಿತು. ಜೊತೆಗೆ ನದಿಯ ನೀರೆಲ್ಲಾ ವಿಷವಾಗಿ ಪರಿವರ್ತನೆಯಾಯಿತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.