ಕೆ.ಎನ್.ಪಿ.ವಾರ್ತೆ,ಬೆಂಗಳೂರು ಆ.07;

ಕೃಷ್ಣೆ, ಘಟಪ್ರಭಾ ಹಾಗೂ ಮಲಪ್ರಭಾ ತುಂಬಿ ಹರಿಯುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಪ್ರಸಿದ್ಧ ಕೂಡಲಸಂಗಮ ದೇವಸ್ಥಾನ ಆವರಣಕ್ಕೆ ನೀರು ಬಂದಿದ್ದು, ಹೈ ಅಲಟ್೯ ಘೋಷಿಸಲಾಗಿದೆ. ಭಕ್ತರು ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಇಂದು ಮಧ್ಯಾಹ್ನ ದವರೆಗೆ ದೇವಾಲಯ ಜಲಾವೃತವಾಗುವ ಸಾಧ್ಯತೆಯಿದೆ. ಬಸವಣ್ಣನವರ ಐಕ್ಯ ಮಂಟಪವನ್ನು ಯೋಜಿತವಾಗಿ ನಿರ್ಮಿಸಿರುವುದರಿಂದ ಮುಳುಗಡೆಯಾಗುವುದಿಲ್ಲ. ಆದರೆ ಐಕ್ಯ ಮಂಟಪಕ್ಕೆ ತೆರಳುವ ಮೆಟ್ಟಿಲುಗಳವರೆಗೆ ನೀರು ನಿಲ್ಲಲಿದೆ.

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟ :

ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದು ಹಾರಂಗಿಗೆ ಒಂದೇ ದಿನ 7 ಅಡಿ ನೀರು ಹರಿದು ಬಂದಿದೆ.

ಸುಂಟಿಕೊಪ್ಪ-ಮಾದಾಪುರ ಮಾರ್ಗದಲ್ಲಿ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮಡಿಕೇರಿ-ಕಾಲೂರು, ಹೈಸೆಡ್ಲೂರು-ಬಿರುನಾಣಿ ಮಾರ್ಗದಲ್ಲಿ ಬರೆ ಕುಸಿತವಾಗಿದೆ. ಬೇರೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ ನೀಡಲಾಗಿದೆ. ನಾಲ್ಕೇರಿ ಬಳಿ ಲಕ್ಷ್ಮಣತೀರ್ಥ ನದಿ ಪ್ರವಾಹ ಸೃಷ್ಟಿಸಿದೆ. ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಮಡಿಕೇರಿ-ಭಾಗಮಂಡಲ ಮಾರ್ಗದ ಅಪ್ಪಂಗಳ ಬಳಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ :

ಬುಧವಾರ ಸಹ ಶಾಲೆ‌ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶರಾವತಿ, ತುಂಗಾ, ಮಾಲತಿ, ಕುಮದ್ವತಿ, ವರದಾ, ದಂಡಾವತಿ ನದಿಗಳು ಮತ್ತು ಹಳ್ಳಗಳ್ಳಲ್ಲಿ ಹೆಚ್ಚಿದ ಪ್ರವಾಹ. ಒಂದೇ ದಿನದಲ್ಲಿ ಲಿಂಗನಮಕ್ಕಿಯಲ್ಲಿ ಐದೂವರೆ ಅಡಿ, ಭದ್ರಾದಲ್ಲಿ ನಾಲ್ಕೂವರೆ ಅಡಿ ನೀರು ಏರಿಕೆ. ಲಿಂಗನಮಕ್ಕಿಗೆ 1.40 ಲಕ್ಷ ಕ್ಯೂಸೆಕ್, ಭದ್ರಾಕ್ಕೆ 45ಸಾವಿರ ಕ್ಯೂಸೆಕ್ ಒಳ ಹರಿವು. ತುಂಗಾ ಜಲಾಶಯಕ್ಕೆ 1 ಲಕ್ಷ ಬರುತ್ತಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

ರೈಲು ನಿಲುಗಡೆ

ಸಾಗರದಿಂದ ಬೆಳಗ್ಗೆ 11.30 ಕ್ಕೆ ಹೊರಡುವ ತಾಳಗುಪ್ಪ ಟು ಶಿವಮೊಗ್ಗ ಲೋಕಲ್ ರೈಲು ಸಾಗರ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ರದ್ದುಪಡಿಸಲಾಗಿದೆ. ಗಾಡಿ ನಂಬರ್ : 56217.

ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು: ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ವರೆಗೆ) ಆ.7ರಂದು ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಮಲೆನಾಡಲ್ಲಿ ಮುಂದುವರೆದ ಧಾರಾಕಾರ ಮಳೆ

ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಕಳಸ, ಕುದುರೆಮುಖ, ಕೆರೆಕಟ್ಟೆ, ಬಾಳೆಹೊನ್ನೂರು ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಮಳೆಯಿಂದ ಮಲೆನಾಡಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತ ವಾಗಿದ್ದು ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಅನೇಕ ವರ್ಷಗಳ ನಂತರ ದತ್ತಪೀಠ ರಸ್ತೆಯಲ್ಲಿರೋ ಹೊನ್ನಮ್ಮನ ಹಳ್ಳ‌ ಉಕ್ಕಿ ಹರಿಯುತ್ತಿದ್ದು, ಫಾಲ್ಸ್‌ಗೆ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.

ರಾಯಚೂರು: ಬ್ಯಾರೆಜ್ ಮುಳುಗಡೆ

ತಾಲೂಕಿನ ಗುರ್ಜಾಪುರ ಬಳಿ ಕೆಪಿಸಿ ಆರ್ಟಿಪಿಎಸ್ ನ ನೀರಿನ ಅವಶ್ಯಕತೆಗೆ ನಿರ್ಮಿಸಿದ ಬ್ಯಾರೇಜ್ ಕಂ ಬ್ರಿಡ್ಜ್ ಕೃಷ್ಣಾ ಪ್ರವಾಹದಲ್ಲಿ ಮುಳುಗಡೆಯಾಗುತ್ತಿದೆ. ನಾರಾಯಣಪುರ ಜಲಾಶಯದಿಂದ ನಿನ್ನೆ ರಾತ್ರಿ 4 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ಹೀಗಾಗುತ್ತಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿಸಿದ್ದರಿಂದ ಬ್ಯಾರೇಜ್‌ನ ಗೇಟ್‌ಗಳನ್ನು ತೆಗೆದು ನೀರು ಹರಿದು ಬಿಡಲಾಗಿತ್ತು.

ದೇವದುರ್ಗದ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಲಕ್ಷ್ಮಿ ನರಸಿಂಹ ದೇವರ ದೇಗುಲಕ್ಕೆ ಕೃಷ್ಣಾ ನದಿ ಪ್ರವಾಹದ ನೀರು ನುಗ್ಗಿದೆ. ಇದರಿಂದಾಗಿ ಇಂದು ಪೂಜಾ ಕೈಂಕರ್ಯ ಸ್ಥಗಿತಗೊಂಡಿದೆ. ಭಕ್ತರಿಗೂ ಪ್ರವೇಶ ಅವಕಾಶಕ್ಕೆ ತಡೆ ಒಡ್ಡಲಾಗಿದೆ. ನಾರಾಯಣಪುರ ಜಲಾಶಯ ದಿಂದ ನಾಲ್ಕು ಲಕ್ಷ ಕ್ಯುಸೆಕ್ ನೀರು ಹರಿಸಿದ್ದರಿಂದ ದೇಗುಲದೊಳಗೆ ನೀರು ನುಗ್ಗಿದೆ.

ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಬಿ ಎಸ್ ಯಡಿಯೂರಪ್ಪನವರು ಗುರುವಾರ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಹುಕ್ಕೇರಿಯಲ್ಲಿ ಸ್ಥಿತಿ ವೀಕ್ಷಿಸಿ ಜಮಖಂಡಿ ಹಾಗೂ ಮುಧೋಳ ತಾಲೂಕುಗಳ ನೆರೆ ಪೀಡಿತ ಗ್ರಾಮಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.