ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಏ.28;
ಉದ್ಯಮಿ ಪುತ್ರ ವಿದ್ವತ್ ಮೇಲೆ ಫರ್ಜಿ ಕೆಫೆಯಲ್ಲಿ ಹಲ್ಲೆ ನಡೆಸಿದ ಆರೋಪಿ ಮೊಹಮದ್ ನಲಪಾಡ್ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಮೇ.11ರವರೆಗೆ ವಿಸ್ತರಿಸಿದೆ.
ವಿದ್ವತ್ ಮೇಲೆ ತೀವ್ರ ಹಲ್ಲೆ ನಡೆಸಿರುವ ಆರೋಪದ ಮೇಲೆ ಜೈಲು ಸೇರಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ಮೇ.11ರವರೆಗೆ ವಿಸ್ತರಿಸಿದೆ.
ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಮೊಹಮದ್ ನಲಪಾಡ್ ಪರ ವಕೀಲರು ನಲಪಾಡ್ ಜಾಮೀನು ಕೋರಿ, ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 60 ದಿನಗಳಾದರೂ ಇನ್ನೂ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿಲ್ಲ. ಆದ್ದರಿಂದ, ಸಿಆರ್‌ಪಿಸಿ ಕಲಂ 167(2)ರ ಅಡಿಯಲ್ಲಿ ಆರೋಪಿಗೆ ಕಡ್ಡಾಯ ಜಾಮೀನು ಮಂಜೂರು ಮಾಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ವಿಶೇಷ ಅಭಿಯೋಜಕ ಶ್ಯಾಮ್‍ಪ್ರಸಾದ್, ದೋಷಾರೋಪಣೆ ಪಟ್ಟಿ ಸಲ್ಲಿಕೆಗೆ 90 ದಿನಗಳವರೆಗೆ ಕಾಲಾವಕಾಶವಿದೆ. ಅಲ್ಲದೆ ಇದೊಂದು ಗಂಭೀರ ಪ್ರಕರಣವಾಗಿದ್ದು ತನಿಖಾಧಿಕಾರಿಗಳಿಗೆ ಇನ್ನಷ್ಟು ಕಾಲಾವಕಾಶದ ಅವಶ್ಯಕತೆ ಇರುವ ಕಾರಣ ದೋಷಾರೋಪ ಪಟ್ಟಿ ಸಲ್ಲಿಸಲಾಗಿಲ್ಲ ಎಂದು ವಾದ ಮಂಡಿಸಿದರು. ಅವರ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಕೊನೆಯಾದ ಹಿನ್ನೆಲೆಯಲ್ಲಿ ಒಂದನೇ ಎಸಿಎಂಎಂ ನ್ಯಾಯಾಲಯ ಮೇ.11 ರವರೆಗೆ ವಿಸ್ತರಿಸಿದೆ.