ಕೆ.ಎನ್.ಪಿ.ಲೇಖನ;

ಕೆ.ಎನ್.ಪಿ.ಲೇಖನ ವಿಭಾಗದಲ್ಲಿ ಪ್ರಗತಿಪರ ಚಿಂತಕರು ಮತ್ತು ಬರಹಗಾರರಾದ ಸಂಗಮೇಶ ಎನ್ ಜವಾದಿ ರವರ “ಶಿಕ್ಷಣ ಮಾಧ್ಯಮವಾಗಿ ಕನ್ನಡ” ಎಂಬ ಲೇಖನವನ್ನು ಪ್ರಕಟಿಸಲಾಗಿದೆ. ಸಹೃದಯರು ಲೇಖನ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ..

ಶಿಕ್ಷಣ ಮಾನವನ ಪ್ರಗತಿ ಆಧಾರಸ್ತಂಭವಾಗಿದೆ. ಇದು ಸಮಾಜದ ಹಾಗೂ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಶಿಕ್ಷಣ, ದೇಶಭಕ್ತಿಯ ಶಿಸ್ತಿನ ಮತ್ತು ಉತ್ಪಾದಕ ಮಾನವಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು.

ಹಾಗಾಗಿ ಶಿಕ್ಷಣ ಮಾಧ್ಯಮ ಎಂದರೆ ಶಿಕ್ಷಣ ಕಲಿಸಲು ಬಳಸುವ ಸಾಧನಾ ಮಾಧ್ಯಮವೇ ಶಿಕ್ಷಣ ಮಾಧ್ಯಮ ಎನ್ನಬಹುದು.

ಇನ್ನು ಮಾತೃಭಾಷೆಯಲ್ಲಿ ಕಲಿಯುವುದು ನೈಸರ್ಗಿಕ ಅಥವಾ ಸ್ವಾಭಾವಿಕ ಪ್ರಕ್ರಿಯೆ.

ಹಾಗಾಗಿ ಕನ್ನಡ ಮಾತೃಭಾಷಾ ಮಾಧ್ಯಮದ ಮುಖೇನ ಕಲಿಯುವ ಮಕ್ಕಳ ಕಲಿಕೆ ಬಹು ವೇಗದಲ್ಲಿ ಸಾಗುತ್ತದೆ ಹಾಗು ಗುರಿ ಸಾಧಿಸುವ ಮಟ್ಟವನ್ನು ಬೇಗನೆ ತಲಪುತ್ತದೆ.

ಈ ತನಕ ಕನ್ನಡ ಭಾಷೆಯಲ್ಲಿ ಕಲಿತಿರುವ ವ್ಯಕ್ತಿಗಳ ಕುರಿತು ಸಂಶೋಧನೆಗಳು ಮಾಡಿದಾಗ ಇದನ್ನು ಪುಷ್ಟೀಕರಿಸುತ್ತಿದೆ.

ಹಾಗೆ ಯಾವ ರಾಷ್ಟ್ರಗಳಲ್ಲಿ ಸ್ನಾತಕೋತ್ತರ ಶಿಕ್ಷಣವೂ ಸೇರಿದಂತೆ ಎಲ್ಲ ಹಂತಗಳಲ್ಲಿ ಶಿಕ್ಷಣವನ್ನು ಆಯಾ ಜನತೆಯ ಭಾಷೆಯಲ್ಲಿ ನೀಡಲಾಗುತ್ತಿದೆಯೋ ಅವು ವೇಗವಾಗಿ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿರುವುದು ನಾವೆಲ್ಲರೂ ಕಾಣಬಹುದು.

ಆದಕಾರಣ ಶಿಕ್ಷಣ ಮಾಧ್ಯಮವಾಗಿ ಕನ್ನಡಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪರಿಸ್ಥಿತಿ ಇಂತಿದೆ.

ಸರ್ಕಾರಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಾಲೆಗಳಲ್ಲಿ ಮಾತೃಭಾಷೆ ಅಂದರೆ ಕನ್ನಡ ಭಾಷೆ ಬೋಧನ ಮಾಧ್ಯಮವಾಗಿದೆ.

ಆದರೆ ಉನ್ನತ ಶಿಕ್ಷಣ ಹಂತದಲ್ಲಿ ಇಂಗ್ಲಿಷ್ ಭಾಷೆಯನ್ನು ಬೋಧನ ಮಾಧ್ಯಮವಾಗಿ ಕಲಿಯುವ ಪ್ರಯತ್ನ ನಡೆದಿದೆ.

ಹೀಗಾಗಿ ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸುವ ಪ್ರಯತ್ನಗಳಿವು ಕೆಲ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಆದರೆ ಇಲ್ಲಿಯವರೆಗೆ ಯಶಸ್ವಿಯಾಗಿಲ್ಲ ಅನ್ನುವುದೇ ನೋವಿನ ಸಂಗತಿ.

ಆದ್ದರಿಂದ ಮಕ್ಕಳಿಗೆ ಗಟ್ಟಿ ಅಡಿಪಾಯದ ಕಲಿಕೆ ಸಿಗುವಂತಾಗುವುದು ಮಾತೃಭಾಷೆ ಕನ್ನಡದಿಂದ ಮಾತ್ರ ಕಲಿತಾಗಲೇ ಎಂಬುದನ್ನು ಅರಿತುಕೊಂಡಿರುವ ಹಲವು ತಂದೆ-ತಾಯಂದಿರೂ ನಮ್ಮ ನಡುವೆ ಇದ್ದಾರೆ.

ಅಂತವರಲ್ಲಿ ಕೆಲವರು ತಮ್ಮ ಮಕ್ಕಳನ್ನು ಈಗಾಗಲೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.

ಮತ್ತೆ ತಾಯ್ನುಡಿಯಲ್ಲಿ ಕಲಿಕೆಯೇ ಮೇಲು ಎಂಬುದನ್ನು ಅರಿತಿದ್ದರೂ ಕೆಲವರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸುತ್ತಿರುವುದಕ್ಕೆ ಅವರಲ್ಲಿ ಕಾಣುವ ವ್ಯವಹಾರಿಕ ದೃಷ್ಟಿ ಹಾಗೂ ಶ್ರೇಷ್ಠ ಮನುಷ್ಯ ರಾಗುತ್ತಾರೆಂಬ ಹುಸಿ ನಂಬಿಕೆಗಳ ಹಿನ್ನಲೆಯಲ್ಲಿ ಅವರು ಇಂಗ್ಲೀಷ್ ಪಾಶಕ್ಕೆ ಬಿದ್ದಿದ್ದಾರೆ.

ಇನ್ನೂ ಇತ್ತೀಚೆಗೆ ರಾಜ್ಯ ಸರಕಾರವಂತು ಕನ್ನಡ ಶಾಲೆಗಳಿಗೆ ಆದ್ಯತೆ ನೀಡದೇ ಇಂಗ್ಲೀಷ್ ವ್ಯಾಮೋಹಕ್ಕೆ ಮರಳಾಗುತ್ತಿದೆ.

ಆದ್ದರಿಂದ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಕಾನೂನು ಮೂಲಕ ಜಾರಿಗೆ ತಂದಾಗ ಮಾತ್ರ ಬೇರೆ ಭಾಷೆಗಳ ಬಗ್ಗೆ ಇರುವ ಒಲುಮೆ – ಪ್ರೀತಿ ಕಡಿಮೆ ಆಗಬಹುದಾಗಿದೆ.

ಈ ನಿಟ್ಟಿನಲ್ಲಿ ಶಿಕ್ಷಣ ಮಾಧ್ಯಮವಾಗಿ ಕನ್ನಡ ಮಾಡುವ ಕುರಿತು ಕೆಲ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನ ಮಾಡಲಾಗಿದೆ.

ಪ್ರಾಚೀನ ಭಾಷೆ ಕನ್ನಡ :

ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಭಾಷೆಯು ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು ಇದಕ್ಕೆ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. (2500 ವರ್ಷಗಳ ಹಿಂದೇ ಕನ್ನಡ ಭಾಷೆಯ ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ.)

ವಿಶ್ವದ ನಾನಾ ಪ್ರದೇಶಗಳಲ್ಲಿ ಸಿಕ್ಕ ಅಚ್ಚ ಕನ್ನಡ ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸಿವೆ.

ದೇಶದ ಭಾಷೆಗಳಲ್ಲಿ ಕನ್ನಡ ಭಾಷೆಯೂ ಪ್ರಮುಖವಾಗಿದ್ದು ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ.

ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಂತಹ ಭಾಷೆ ನಮ್ಮ ಕನ್ನಡ.

ಆದರೆ ಪ್ರಸ್ತುತ ಕನ್ನಡ ಭಾಷೆಯ ಸ್ಥಿತಿಗತಿಯನ್ನು ಗಮನಿಸುತ್ತಿದ್ದರೆ ಎಲ್ಲೋ ಒಂದು ಕಡೆ ನಮ್ಮ ಪರಭಾಷೆಯ ಮೇಲಿರುವ ವ್ಯಾಮೋಹದಿಂದ ನಮ್ಮ ತಾಯಿಯ ಸಮಾನದ ಕನ್ನಡ ಭಾಷೆಯು ಅಪಾಯದಂಚಿನಲ್ಲಿ ಸಿಕ್ಕಿ ಕೊಂಡಿದೆ.

ಆದ್ದರಿಂದ ಈ ಹಿನ್ನೆಲೆಯಲ್ಲಿ ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಬಳುಸುವ ದಿಸೆಯಲ್ಲಿ ಹೆಜ್ಜೆ ಇಡುವ ತನಕ ಕನ್ನಡಕ್ಕೆ ಅಪಾಯ ತಪ್ಪಿದ್ದಲ್ಲ.

ಹಾಗೆ ಸಂಪೂರ್ಣವಾಗಿ ಯಶಸ್ವಿಯಾಗಿ ಪ್ರತಿಷ್ಠಾಪಿತವಾಗುವ ತನಕ ಶಿಕ್ಷಣ ಕ್ಷೇತ್ರ ಉದ್ಧಾರವಾಗಲ್ಲ, ಇಂಗ್ಲೀಷಿನ ಮೂಲಕ ಪಡೆಯುವ ಶಿಕ್ಷಣ ಗಾಳಿಗೋಪುರವಲ್ಲದೆ ಮತ್ತೇನೂ ಆಗಲಾರದು.

ಅನ್ಯ ಭಾಷೆ ವ್ಯಾಮೋಹ:

ದಿನಬೆಳಗಾದ್ರೆ ನಾವು ಕನ್ನಡಿಗರು, ಕನ್ನಡದ ಭಾಷೆ ಮತ್ತು ಶಿಕ್ಷಣ ಬಗ್ಗೆ ಹಾಗೆ ಹೀಗೆ ಅಂತ ಮಾತನಾಡುತ್ತೇವೆ.

ಆದ್ರೆ ಕನ್ನಡಿಗರಾಗಿ ನಮ್ಮ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ ಎಂದು ಎದೆ ಮೇಲೆ ಕೈಇಟ್ಟು ಪ್ರಶ್ನೆ ಮಾಡಿಕೊಂಡಾಗ ಕನ್ನಡದ ಶಿಕ್ಷಣ ವ್ಯವಸ್ಥೆಯ ಕುರಿತು ಸತ್ಯ ನಮಗೆ ಅರಿವಾಗಬಹುದು.

ಹಾಗೆ ನಾವು ಯಾವ ಹಂತದಲ್ಲಿ ಕನ್ನಡತನವನ್ನು ಅಪ್ಪಿಕೊಂಡಿದೇವೆಂದು ಸ್ವಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇಂದು ಶಿಕ್ಷಣ ಕ್ಷೇತ್ರದಲ್ಲಿ ನೋಡಿದರಂತು ಅಲ್ಲಿ ಇಂಗ್ಲೀಷಿಗೆ ದೊರೆಯುವ ಪ್ರಾಮುಖ್ಯತೆ ಕನ್ನಡಕ್ಕೆ ದೊರೆತಿಲ್ಲ ಎನ್ನವುದಂತು ನಿಜ.

ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿರುವ ಶೇಕಡಾ 90 ರಷ್ಟು ಶಿಕ್ಷಕರ ಮಕ್ಕಳು ಓದುತ್ತಿರುವುದು ಖಾಸಗಿ ಶಾಲೆಯಲ್ಲಿಯೇ ಎನ್ನುವುದು ಸುಳ್ಳಲ್ಲ.

ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿರುವವರಿಗೆ ಕನ್ನಡ ಶಿಕ್ಷಣ ಬಗ್ಗೆ ನಂಬಿಕೆ ಇಲ್ಲದ ಮೇಲೆ ಇನ್ನು ಸಾಮಾನ್ಯರ ಪಾಡೇನು ಎಂಬುದು ಎಲ್ಲರೂ ಸೇರಿ ಯೋಚನೆ ಮಾಡುವುದು ಒಳ್ಳೆಯದು ಹಾಗಾಗಿ ದಿನ ಕಳೆದಂತೆ ಕನ್ನಡ ಶಿಕ್ಷಣದ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ.

ಕನ್ನಡ ಭಾಷೆಯ ಶಿಕ್ಷಣ, ಸರ್ಕಾರಿ ಶಾಲೆ ಬಗ್ಗೆ ಪ್ರಶ್ನೆಗಳು ಬರುತ್ತಲ್ಲೇ ಇವೆ.

ನಮ್ಮ ರಾಜ್ಯದಲ್ಲಿ 52 ಸಾವಿರಕ್ಕೂ ಅಧಿಕ ಶಾಲೆಗಳಿವೆ, ಕನ್ನಡ ಭಾಷೆಯನ್ನು ಏನಾದರೂ ಅಭಿವೃದ್ಧಿ ಪಡಿಸಬೇಕೆಂದರೆ ಮುಂಚೆ ಆ ಶಾಲೆಗಳಿಂದಲ್ಲೇ ಕನ್ನಡ ಮಾಧ್ಯಮದಲ್ಲಿಯೇ ಕಡ್ಡಾಯವಾಗಿ ಶಿಕ್ಷಣವನ್ನು ಕಲಿಸಿದಾಗ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯವಾಗಬಹುದು.

ಆದರೇ ದುರದೃಷ್ಟವಶಾತ್ ನಮ್ಮ ಸರ್ಕಾರಿ ಶಾಲೆಗಳ ಬಗ್ಗೆ ನಮಗೆ ನಂಬಿಕೆ ಇಲ್ಲವಾಗಿದೆ.

ಕನ್ನಡದ ಬಗ್ಗೆ ಹೋರಾಟ ಮಾಡುವ ಪಕ್ಷ, ಸಂಘಟನೆ, ಕವಿಗಳು, ಸಾಹಿತಿಗಳು, ರಾಜಕಾರಣಿಗಳು ಒಟ್ಟಾರೆ ಭಾಷಣ ಮಾಡುವ ಎಲ್ಲಾ ಅರ್ಹತೆ ಮತ್ತು ಹುದ್ದೆ ಪಡೆದವರ ಮಕ್ಕಳು – ಮೊಮ್ಮಕ್ಕಳು, 90 ಶೇಕಡಾಕ್ಕೂ ಅಧಿಕ ಮಂದಿ ಇಂಗ್ಲೀಷ ಅಥವಾ ಖಾಸಗಿ ಶಾಲೆಯಲ್ಲಿಯೇ ಇರುವುದರಿಂದ ಕನ್ನಡ ಶಿಕ್ಷಣ ಮಾಧ್ಯಮಕ್ಕೆ ಇದು ಹಿನ್ನಡೆಯಾಗಿದೆ.

ಆದ್ದರಿಂದ ಈ ದಿಸೆಯಲ್ಲಿ ಸರ್ಕಾರ ಯಾವುದೇ ರೀತಿಯ ಒತ್ತಡಗಳಿಗೆ ಒಳಗಾಗದೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಕಲಿತ ವ್ಯಕ್ತಿಗಳಿಗೆ ಮಾತ್ರ ಎಲ್ಲಾ ರೀತಿಯ ಸೌಲಭ್ಯಗಳು ಈ ರಾಜ್ಯದಲ್ಲಿ ಲಭಿಸುತ್ತವೆ ಎನ್ನುವ ಒಂದು ವಿಶೇಷವಾದ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಇದೆ, ಕಾಯ್ದೆ ತಂದಾಗ ಕನ್ನಡ ಶಿಕ್ಷಣ ವ್ಯವಸ್ಥೆಗೆ ನಿಜವಾದ ಬೆಲೆ ಬರುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ.

ಹಾಗೆ ಜನಸಾಮಾನ್ಯರು ಕನ್ನಡ ಪರ ಕೆಲಸ ಮಾಡುವವರಿಗೇ ಆದ್ಯತೆ ನೀಡುವುದು ಉತ್ತಮ ಮತ್ತು ಹೀಗೆ ಮಾಡಿದರೆ ಶಿಕ್ಷಣ ಮಾಧ್ಯಮವಾಗಿ ಕನ್ನಡ ಉಳಿಯುತ್ತದೆ ಮತ್ತು ಯಶಸ್ವಿಯಾಗಿ ಸಾಗುತ್ತದೆ.

ಶಿಕ್ಷಣದಲ್ಲಿ ಕನ್ನಡ :

ಇಂಗ್ಲಿಷ್‌ ಮಾಧ್ಯಮದಿಂದ ಮಕ್ಕಳಲ್ಲಿ ಕನ್ನಡದ ಪ್ರೇಮ ಕಡಿಮೆಯಾಗುವ ಭೀತಿ!

ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳಗಳಲ್ಲಿ ಅಲ್ಲಿನ ಜನಗಳು ಮತ್ತು ಸರ್ಕಾರ ಯಾವಾಗಲೂ ಯಾವ ಸರ್ಕಾರ ಬಂದರೂ ತಮ್ಮ ಭಾಷೆಯ ಬಗ್ಗೆ ಉದಾಸೀನ ಮಾಡದೇ ಆ ಭಾಷೆಯು ಬೆಳೆಯುವಂತೆ ನೋಡಿಕೊಳ್ಳುತ್ತಾರೆ.

ಆದರೆ ನಮ್ಮ ಕರ್ನಾಟಕದಲ್ಲಿ ನಮ್ಮ ಜನಗಳು(ಕೆಲವರನ್ನು ಬಿಟ್ಟು) ಮತ್ತು ಸರ್ಕಾರಗಳು ಯಾವಾಗಲೂ ನಿರಾಸಕ್ತಿ ತೋರುವುದು ಸರ್ವೇ ಸಾಮಾನ್ಯವಾಗಿದೆ.

ಕನ್ನಡ ನಮ್ಮ ಕರ್ನಾಟಕದ ಮಾತೃಭಾಷೆ. ಅದನ್ನು ಉಳಿಸಿ ಬೆಳೆಸುವುದು ಈ ರಾಜ್ಯದ ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ.

ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಮಾತೃಭಾಷೆ ಕನ್ನಡದ ಏಳಿಗೆ ಕಷ್ಟವೆನಿಸುತ್ತದೆ.

ನಮ್ಮ ಸಾಹಿತಿಗಳು ಮತ್ತು ಕನ್ನಡ ಪರ ಸಂಘ ಸಂಸ್ಥೆಗಳು ಮಾತ್ರ ನಿರಂತರವಾಗಿ ಹೋರಾಡುತ್ತಿದ್ದಾರೆ.

ಇವರ ಬಲವಂತಕ್ಕೆ ಸರ್ಕಾರ ಕೆಲವೊಮ್ಮೆ ಹೇಳಿಕೆಗಳನ್ನು ನೀಡಿ ಸುಮ್ಮನಾಗುತ್ತದೆ.

ಇದು ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಆಗುತ್ತಿರುವ ಅನ್ಯಾಯ ಎಂದು ಹೇಳಿದರೆ ತಪ್ಪಾಗಲಾರದು.

ಈಗ ಮಾತೃಭಾಷೆಯಲ್ಲಿ ಶಿಕ್ಷಣದ ವಿಚಾರಕ್ಕೆ ಬರೋಣ. ಸುಮಾರು 15 ವರುಷಗಳ ಹಿಂದೆ ಇದ್ದ ಹಾಗೆ ಎರಡನೇ ಭಾಷೆ ಮತ್ತು ಮೂರನೇ ಭಾಷೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಭಾಷೆ ಇದ್ದರೆ ಪರವಾಗಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ (ಮುಖ್ಯವಾಗಿ ಬೆಂಗಳೂರಿನಲ್ಲಿ ) ಇಂಗ್ಲಿಷ್‌ ಮಾಧ್ಯಮ ಶಾಲೆಗಳೇ ಹೆಚ್ಚಾಗಿವೆ.

ಎಲ್ಲರೂ ಪ್ರಾರಂಭದಿಂದಲೇ ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಮಕ್ಕಳಿಗೆ ಕನ್ನಡದ ಮೇಲಿನ ಪ್ರೀತಿ ಸಹಜವಾಗಿಯೇ ಕಡಿಮೆಯಾಗುತ್ತದೆ.

ನಾವು ಜನರಿಗೆ ಮತ್ತು ಶಾಲಾ ಸಂಸ್ಥೆಗಳಿಗೆ ಅವರ ಇಷ್ಟ ಬಂದ ಹಾಗೆ ಶಿಕ್ಷಣ ಮಾಧ್ಯಮಗಳನ್ನು ರೂಪಿಸಲು ಬಿಟ್ಟರೆ ಬಹು ಪಾಲು ಎಲ್ಲರೂ ಇಂಗ್ಲಿಷ್‌ ಮಾಧ್ಯಮಕ್ಕೆ ಮೊರೆಹೋಗುತ್ತಾರೆ.

ಆದ್ದರಿಂದ ಇಂತಹ ಸಂದರ್ಭದಲ್ಲಿ ಬಲವಂತವಾಗಿ ಸರ್ಕಾರ ಸುತ್ತೋಲೆ ಹೊರಡಿಸಿ ಏಳನೇ ತರಗತಿಯವರೆಗೆ ಕರ್ನಾಟಕದಲ್ಲಿರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣಸಂಸ್ಥೆಗಳಲ್ಲಿ ಏಕರೂಪವಾಗಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಿದರೆ ಎಲ್ಲರೂ ಕನ್ನಡವನ್ನು ಕಲಿಯುತ್ತಾರೆ ಮತ್ತು ಕನ್ನಡದ ಬೆಳವಣಿಗೆಗೆ ಸಹಾಯವಾಗುತ್ತದೆ.

ಐದನೇ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಓದಬಹುದು. ಎಂಟನೇ ತರಗತಿಯಿಂದ ಇಂಗ್ಲಿಷ್‌ ಮೀಡಿಯಂ ಅಥವಾ ಕನ್ನಡ ಮಾಧ್ಯಮ ತೆಗೆದುಕೊಳ್ಳಬಹುದು.

ಸುಮಾರು ಎಪ್ಪತ್ತು ಎಂಬತ್ತು ದಶಕಗಳವರೆಗೆ ಬಹುಪಾಲು ಎಲ್ಲಾ ಶಾಲೆಗಳಲ್ಲಿ ಇದೇ ರೀತಿ ಇತ್ತು.

ಆಗ ಓದಿದ ಅನೇಕ ವಿದ್ಯಾರ್ಥಿಗಳು ( ಉದಾಹರಣೆ : ಯು.ಆರ್‌. ರಾವ್‌, ರಾಜಾರಾಮಣ್ಣ, ವಿಶ್ವೇಶ್ವರಯ್ಯ, ಬಿ.ಡಿ. ಜತ್ತಿ, ನಾರಾಯಣ ಮೂರ್ತಿ) ವಿಜ್ಞಾನಿಗಳೂ, ಸಂಸ್ಥೆಗಳ ಮುಖ್ಯಸ್ಥರೂ, ಪ್ರಭಾವಿಶಾಲಿಗಳೂ ಆಗಲಿಲ್ಲವೇ.

ಏಳನೇ ತರಗತಿಯವರೆಗೆ ಕನ್ನಡದಲ್ಲಿ ಕಲಿತು ನಂತರ ಇಂಗ್ಲಿಷಿನಲ್ಲಿ ಓದಿದರೆ ಎರಡೂ ಭಾಷೆಗಳಲ್ಲೂ ಪಾಂಡಿತ್ಯ ಸಾಧಿಸಬಹುದು.

ಹೀಗೆ ಸರ್ಕಾರ ಬಲವಂತ ಮಾಡದಿದ್ದರೆ ಕನ್ನಡದ ಏಳಿಗೆಗೆ ಖಂಡಿತ ತೊಂದರೆಯಾಗುತ್ತದೆ. ಕರ್ನಾಟಕ ಸರ್ಕಾರದ ಮೆದು ಧೋರಣೆಯಿಂದಲೇ ಇಂದು ಕನ್ನಡಕ್ಕೆ ಈ ಸ್ಥಿತಿ ಬಂದಿದೆ.

ಆಶಯ ನುಡಿ :

ಅನಾವಶ್ಯಕವಾಗಿ ಇಂಗ್ಲಿಷ್ ಮಾತನಾಡುವುದರಿಂದ ಕೀರ್ತಿ ಹೆಚ್ಚುತ್ತದೆಂದು ಭಾವನೆ ಎಲ್ಲರಲ್ಲಿಯೂ ಮನೆ ಮಾಡಿದೆ ಹಾಗಾಗಿ ಇಂದು ಕನ್ನಡವನ್ನು ಕೀಳರಿಮೆಯ ದೃಷ್ಟಿಯಿಂದ ನೋಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಆದರೆ ಬೇರೆ ಭಾಷೆ ಬಗ್ಗೆ ಕೀಳರಿಮೆ ಬೇಡ, ಅನ್ಯ ಭಾಷೆಯನ್ನು ಸಹ ಪ್ರೀತಿಸಿ, ಗೌರವಿಸುವ ಸಂಸ್ಕೃತಿ ನಮ್ಮದಾಗುವ ಜೊತೆಯಲ್ಲಿ ಕಡ್ಡಾಯವಾಗಿ ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆ ಬೋಧನೆಯನ್ನು ಮಾಡಲೇಬೇಕು, ಮಾಡಿದಾಗಲೇ ಕನ್ನಡತನವನ್ನು ಉಳಿಸಿ – ಬೆಳೆಸಲು ಸಹಕಾರಿಯಾಗುತ್ತದೆ.

ನಮ್ಮ ಎಲ್ಲಾ ಕನ್ನಡ ಶಾಲೆಗಳಲ್ಲಿ ಜಗತ್ತಿನ ಎಲ್ಲಾ ಬಗ್ಗೆಯ ಮಾಹಿತಿಗಳು ಕನ್ನಡ ಪುಸ್ತಕದಲ್ಲಿಯೇ ಸಿಗುವಂತಹ ವ್ಯವಸ್ಥೆ ಸರ್ಕಾರ ಮಾಡಬೇಕಾಗಿದೆ.

ಇತರ ಅನೇಕ ಭಾಷೆಗಳಲ್ಲಿ ಇರುವ ವಿಜ್ಞಾನ, ಗಣಿತ, ಸಾಹಿತ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಬಗೆಯ ಪುಸ್ತಕಗಳು ಕನ್ನಡಕ್ಕೆ ಅನುವಾದಿಸುವ ಕಾರ್ಯ ಹೆಚ್ಚು ಹೆಚ್ಚು ಆಗಬೇಕಾಗಿದೆ ಅದರ ವಿತರಣೆ ಎಲ್ಲಾ ಸರ್ಕಾರಿ ಶಾಲೆಗಳಿಗೂ ಕಡ್ಡಾಯವಾಗಿ ಆಗಬೇಕಾಗಿದೆ.

ನಮ್ಮ ಶಾಲೆ, ಗ್ರಂಥಾಲಯ ಕನ್ನಡ ಭಾಷೆಯಲ್ಲಿಯೇ ಜಗತ್ತಿನ ಬಗ್ಗೆ ತಿಳಿಸುವ ಮಾಹಿತಿ ಕೇಂದ್ರಗಳಾಗುವಂತೆ ಗಮನಹರಿಸಬೇಕಾಗಿದೆ.

ನಮ್ಮ ಪ್ರತಿ ಬಾರಿಯ ರಾಜ್ಯೋತ್ಸವಕ್ಕೆ ಪ್ರತಿ ಶಾಲೆಗೂ ಅನೇಕ ಪುಸ್ತಕಗಳು ಸಿಗುವಂತ ವ್ಯವಸ್ಥೆ ಆಗಬೇಕಾಗಿದೆ. ಮಾದ್ಯಮಗಳು ಕೂಡ ದೇಶ ವಿದೇಶದ ಮಾಹಿತಿಯನ್ನು ಕನ್ನಡದಲ್ಲಿ ತಿಳಿಸುವಂತೆ ಮಾಡಬೇಕು.

ಯಾರು ಏನೇ ಓದಲು ತಿಳಿಯಲು ಪ್ರಯತ್ನಿಸಿದರೂ ಅದೂ ಕನ್ನಡದಲ್ಲಿ ಸಿಗುವಂತೆ ಮಾಡಬೇಕಾಗಿದೆ. ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನಲೆ ಇದೆ.

ಕನ್ನಡ ಭಾಷೆ ಸರಳ, ಸಹಜ, ಇಂಪು ಸಹ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ ತಾನೇ ಬಂಧುಗಳೆ ಆದ್ದರಿಂದ ನಮ್ಮ ಕನ್ನಡ ಭಾಷೆ ವಿದ್ಯಾಭ್ಯಾಸದ ಅತ್ಯುನ್ನತ ಮಟ್ಟಗಳಲ್ಲಿಯೂ ಶಿಕ್ಷಣ ಮಾಧ್ಯಮವಾಗಲು ಸಮರ್ಥವಾಗಿದೆ ಎನ್ನುವುದರ ಬಗೆಗೆ ಯಾರೂ ಸಂದೇಹ ಪಡಬೇಕಾಗಿಲ್ಲ. ಮಾತೃಭಾಷೆಯ ಮೂಲಕವಾಗಿ ನಡೆಯುವ ಶಿಕ್ಷಣವೇ ಸರ್ವೋತ್ಕೃಷ್ಟವಾದುದೆಂಬುದು ಸತ್ಯ.

ಶಿಕ್ಷಣ ಮಾಧ್ಯಮವಾಗಿ ಕನ್ನಡ

-ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.