ಕೆ.ಎನ್.ಪಿ.ಲೇಖನ;

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶ ಈಗಾಗಲೇ ಪ್ರಕಟಗೊಂಡು ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವುದು ಸರಿಯಷ್ಟೇ..

ಈ ನಡುವೆ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲು ಹಲವು ಖಾಸಗಿ ಸಂಘ ಸಂಸ್ಥೆಗಳು ಪತ್ರಿಕೆ, ವಾಟ್ಸಾಪ್ ಮತ್ತು ಫೇಸ್ ಬುಕ್ ಸೇರಿದಂತೆ ಇತರೆ ಮಾಧ್ಯಮಗಳ ಮೂಲಕ ಅರ್ಜಿ ಆಹ್ವಾನಿಸುತ್ತಿವೆ. ವಿದ್ಯಾರ್ಥಿಗಳ ಈಗಿನ ಸಾಧನೆಗೆ ಬೆನ್ನುತಟ್ಟಿ ಮುಂದಿನ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುವ ಈ ಕಾರ್ಯ ನಿಜಕ್ಕೂ ಸ್ವಾಗತಾರ್ಹ ಮತ್ತು ಶ್ಲಾಘನೀಯವೇ.

ಆದರೆ ಕೆಲವು ಸಂಘ ಸಂಸ್ಥೆಗಳ ಉದ್ದೇಶ ಮತ್ತು ಅವರು ಅನುಸರಿಸುವ ಮಾನದಂಡಗಳು ಹಾಗೂ ಪ್ರಕ್ರಿಯೆಯ ವಿಚಾರವಾಗಿ ಒಂದಷ್ಟು ವಾಸ್ತವ ನೆಲೆಗಟ್ಟಿನಲ್ಲಿ ಚಿಂತಿಸುವ ಅಥವಾ ಅವಲೋಕಿಸುವ ಅಗತ್ಯ, ಪ್ರಸ್ತುತತೆ ಖಂಡಿತ ಇದೆ.

ಕೆಲವು ಸಂಘ ಸಂಸ್ಥೆಗಳು ಪತ್ರಿಕೆ ಅಥವಾ ವಿವಿಧ ಮಾಧ್ಯಮಗಳಲ್ಲಿ ಆಹ್ವಾನ ನೀಡುವಾಗ ಪುರಸ್ಕಾರದ ತಮ್ಮ ಪ್ರಕ್ರಿಯೆ ಸಂಪೂರ್ಣ ಉಚಿತ ಎಂಬಂತೆ ಬಿಂಬಿಸಿರುತ್ತಾರೆ. ಆದರೆ ಅರ್ಜಿ ನಮೂನೆ ಭರ್ತಿ ಮಾಡುವ ವೇಳೆ ಅರ್ಜಿ ಫಾರಂ ಗಾಗಿ ಹತ್ತಿಪ್ಪತ್ತು ರೂಪಾಯಿ ಮತ್ತು ಕಾರ್ಯಕ್ರಮದ ಫೋಟೋ ಆಯ್ಕೆಗಾಗಿ ಇಂತಿಷ್ಟು ಡೆಪಾಜಿಟ್ ಎಂದು ಕಡ್ಡಾಯವಾಗಿ ಕಟ್ಟಿಸಿಕೊಳ್ಳುತ್ತಾರೆ.

ಎಲ್ಲರ ಕೈಯಲ್ಲೂ ಬೆಲೆ ಬಾಳುವ ಮತ್ತು ಕ್ವಾಲಿಟಿ ಮೊಬೈಲ್ ಗಳು ಇರುವ ಇಂದಿನ ನೆಟ್ ಯುಗದಲ್ಲಿ ಈ ಕಡ್ಡಾಯ ಎಷ್ಟರಮಟ್ಟಿಗೆ ಸರಿ ? ಅದೂ ಕಾರ್ಯಕ್ರಮ ನಡೆಯುವ ವೇಳೆ ಮೊಬೈಲ್ ಅಥವಾ ಇನ್ನಿತರೆ ಡಿವೈಸ್ ಗಳ ಮೂಲಕ ಅಭ್ಯರ್ಥಿಗಳು ಫೋಟೋ ತೆಗೆದುಕೊಳ್ಳದಂತೆ ಸಂಪೂರ್ಣ ಮತ್ತು ಕಡ್ಡಾಯ ನಿರ್ಬಂಧ ಹೇರಿರುತ್ತಾರೆ. ಅಲ್ಲದೆ ಅವರು ನಿಗದಿಪಡಿಸಿ ತಿಳಿಸಿದ ದಿನಾಂಕಕ್ಕೆ ಸರಿಯಾಗಿ ಹೋಗಿ ಫೋಟೋ ತೆಗೆದುಕೊಳ್ಳದಿದ್ದರೆ ಹಣ ಮಟಗೋಲು ಆಗುತ್ತದೆ…

ಇದ್ಯಾವ ಸಾಮಾಜಿಕ ಕಳಕಳಿ ? ಇದೆಂಥಾ ಉಚಿತ ಪುರಸ್ಕಾರ ? ಇದೇನು ಕಟ್ಟು ಕತೆಯಲ್ಲ, ಸ್ವತಃ ನಾನೇ ನಮ್ಮ ಮನೆಯ ಮಕ್ಕಳು ಅತಿ ಹೆಚ್ಚು ಅಂಕ ಗಳಿಸಿದ ಸಂದರ್ಭದಲ್ಲಿ ಕೆಲ ಸಂಸ್ಥೆಯ ಕಾರ್ಯಕ್ರಮದಲ್ಲಿ ಕಂಡುಂಡ, ಅನುಭವಿಸಿದ, ಇತರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪುರಸ್ಕಾರ ದೊರೆಯಲೆಂಬ ಕಳಕಳಿಯಿಂದ ಅಂತಹ ಸಂಸ್ಥೆಗಳ ಹುನ್ನಾರದ ಪೂರ್ವಾಪರ ತಿಳಿಯದೆ ಇತರರಿಗೂ ಅರ್ಜಿ ಹಾಕಲು ತಿಳಿಸಿ ಹೆಸರು ಸೂಚಿಸಿ ಪರಿ ( ನಗೆ) ಪಾಟಲಿಗೆ ಗುರಿಯಾದ ಹಾಗೂ ಹತ್ತಾರು ವರ್ಷಗಳಿಂದ ಅತಿ ಹತ್ತಿರದಿಂದ ಮೂಕ ಸಾಕ್ಷಿಯಾಗಿ ನೋಡುತ್ತಿರುವ ಸತ್ಯ ಘಟನೆ..

ಯಾವುದೇ ಕಾರ್ಯಕ್ರಮದ ಆಯೋಜನೆ ಮಾಡಿ ಅದರ ನಿರ್ವಹಣಾ ವೆಚ್ಚ ಭರಿಸುವುದು ಅಷ್ಟು ಸುಲಭದ ಮಾತಲ್ಲ. ಒಪ್ಪಿಕೊಳ್ಳೋಣ. ಆದರೆ, ನಿಜಕ್ಕೂ ಇವರಿಗೆ ಮಕ್ಕಳ ಬಗ್ಗೆ ಕಾಳಜಿ ಮತ್ತು ಪ್ರತಿಭೆಯ ಬಗ್ಗೆ ಗೌರವ ಇರುವುದೇ ನಿಜವಾದರೆ ಅದೇ ಹಣಕ್ಕೆ ಮುಂದಿನ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಬಹುದಾದ ಯಾವುದಾದರೂ ಉಡುಗೊರೆ ನೀಡಬಹುದಲ್ಲವೇ !

ಆದರೆ ಹಾಗೆ ಮಾಡುವುದಿಲ್ಲ. ಏಕೆಂದರೆ ಅದರಲ್ಲಿ ಅವರ ವ್ಯಾಪಾರಿ ಬುದ್ಧಿಯ ಕೈ ಚಳಕವಿರುತ್ತದೆ. ವರ್ಷ ಪೂರ್ತಿ ದುಡಿಮೆ ಗಳಿಕೆಯ ಲಾಭದ ಲೆಕ್ಕಾಚಾರವಿರುತ್ತದೆ. ಅದಕ್ಕಾಗಿ ಈ ಸಂದರ್ಭವನ್ನು ವೇದಿಕೆಯಾಗಿ ಬಳಸಿಕೊಳ್ಳುವ ಅವರ ಕಲಾ ನೈಪುಣ್ಯತೆ ಈ ಕೆಲಸ ಮಾಡಿಸುತ್ತದೆ.

ಇಂತಹ ಪುರಸ್ಕಾರಗಳು ಬೇಕೇ ?

ರಾಜ್ಯಮಟ್ಟದ ಪುರಸ್ಕಾರ ಪಡೆಯುವ ಸಲುವಾಗಿ ರಾಜ್ಯದ ವಿವಿಧ ದೂರ ದೂರದ ಜಿಲ್ಲೆಗಳಿಂದ ಅರ್ಜಿ ಸಲ್ಲಿಸಲು ಒಮ್ಮೆ ಹಾಗೂ ಮಕ್ಕಳ ಕಾರ್ಯಕ್ರಮ ಕಣ್ತುಂಬಿಕೊಳ್ಳಬೇಕೆಂಬ ಮಹದಾಸೆಯಿಂದ ಕಾರ್ಯಕ್ರಮದ ದಿನ ಮತ್ತೊಮ್ಮೆ ಆಗಮಿಸುವ ಪೋಷಕರು ಮಾಡುವ ಪ್ರಯಾಣ ವೆಚ್ಚ, ವಸತಿ ವ್ಯವಸ್ಥೆ ಸೇರಿದಂತೆ ಇತರೆ ಖರ್ಚು – ವೆಚ್ಚವೋ 2-3 ಸಾವಿರಕ್ಕೂ ಅಧಿಕ. ಸುಮ್ಮನೆ ವೃಥಾ ಹಣ ವ್ಯರ್ಥ. ಮೇಲಾಗಿ ಉಚಿತ ಎಂದು ನಂಬಿ ಬಂದಿದ್ದಕ್ಕೆ ವಿಷಾದ ಖಚಿತ.

ಹೋಗಲಿ ಹತ್ತಿಪ್ಪತ್ತು ರೂಪಾಯಿ ಬೆಲೆಯ ಒಂದು ಕಿರೀಟವನ್ನೋ, ಹಾರ – ಶಾಲು ಹಾಕಿ ಮಾಡುವ ಆ ಸನ್ಮಾನವನ್ನೋ ಅಥವಾ ಅವರು ನೀಡುವ ಅಭಿನಂದನಾ ಪತ್ರವನ್ನೋ ಯಾರು ಯಾವುದಕ್ಕೆ ಪರಿಗಣಿಸುತ್ತಾರೆ ಹೇಳಿ ? ಅದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಎನ್. ಸಿ. ಸಿ., ಎನ್ನೆಸ್ಸೆಸ್, ಕ್ರೀಡಾ ಕೋಟಾದಂತೆ ಸೀಟು ಲಭ್ಯತೆಯ ವಿಶೇಷ ಕೋಟಾವನ್ನೇನಾದರೂ ಮೀಸಲಿಡಲಾಗಿದೆಯೇ ? ಸರ್ಕಾರಿ ನೌಕರಿಯ ಮೀಸಲಾತಿ ಸೌಲಭ್ಯವೇನಾದರೂ ದೊರೆಯಲಿದೆಯೇ ? ಅದೇನು ಅಧಿಕೃತ ಸರ್ಕಾರಿ ಸಾಂಸ್ಥಿಕ ದೃಢೀಕೃತ ಪತ್ರವೇ ? ಅದೊಂದು ಪ್ರತಿಭೆಗೆ ಸಿಗುವ ಮನ್ನಣೆ ಅಥವಾ ಪ್ರೋತ್ಸಾಹ ಅಷ್ಟೇ. ಅದನ್ನು ದುಡ್ಡು ಕೊಟ್ಟು ಖರೀದಿಸಬೇಕೇ ?

ನಮ್ಮ ಪೋಷಕರು ಮತ್ತು ವಿದ್ಯಾರ್ಥಿಗಳು ಇಂಥವರ ಹುನ್ನಾರಕ್ಕೆ ಒಳಗಾಗುವ ಮುನ್ನ ಯೋಚಿಸಿ ನಿರ್ಧರಿಸಬೇಕಿದೆ.
ವಾಸ್ತವದಲ್ಲಿ ಓದುವ ಹಂತದಲ್ಲಿರುವ ವಿದ್ಯಾರ್ಥಿಗಳೇನು ದುಡಿಮೆ ಮಾಡಿ ಸಂಪಾದಿಸಿ ತಮ್ಮ ಬಳಿ ಹಣವನ್ನೇನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ದುಡ್ಡು ಕೊಟ್ಟು ಪಡೆಯಬೇಕಾದ ಪ್ರತಿಭಾ ಪುರಸ್ಕಾರದ ಹಂಬಲಕ್ಕೋ ಆಕರ್ಷಣೆಗೋ ಒಳಗಾದರೆ ಅದು ಹೆತ್ತವರಿಗೆ ನೀಡುವ ಮಾನಸಿಕ ಹಿಂಸೆ ಹಾಗೂ ಆರ್ಥಿಕ ಹೊರೆಯಾದೀತು. ಇದನ್ನು ವಿದ್ಯಾರ್ಥಿಗಳು ಅರಿಯಬೇಕು. ಪಾಲಕರು ಕೂಡ ಈ ಕುರಿತು ಮಕ್ಕಳಿಗೂ ತಿಳಿ ಹೇಳಬೇಕು. ಒಟ್ಟಾರೆ ಹಣ ಕೇಳುವ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಹಾಕದಂತೆ ಸ್ವಯಂ ಜಾಗೃತರಾಗಬೇಕು.

ವಿದ್ಯಾರ್ಥಿಗಳ ಬಗ್ಗೆ ನಿಜಕ್ಕೂ ಕಳಕಳಿ ಇರುವ, ಗೌರವ ಪುರಸ್ಕಾರ ನೀಡಿ ಪ್ರೋತ್ಸಾಹಿಸುವ ಮನಸ್ಸಿರುವ ಸಂಘ – ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಒಂದು ರೂಪಾಯಿ ಕೂಡ ನಿರೀಕ್ಷಿಸಿದೆ, ಬೆವರು ಸುರಿಸಿ ದುಡಿದ ತಮ್ಮ ದುಡಿಮೆಯ ಹಣದಲ್ಲಿ ಅಥವಾ ಅಗತ್ಯವಿದ್ದಲ್ಲಿ ದಾನಿಗಳ ಅಥವಾ ಪ್ರಾಯೋಜಕರ ಸಹಯೋಗ ಪಡೆದು ವಿದ್ಯಾರ್ಥಿಗಳನ್ನು ಪುರಸ್ಕರಿಸಲಿ. ಅದು ನಿಜವಾದ ಪ್ರತಿಭಾ ಪ್ರೋತ್ಸಾಹ ಅಲ್ಲವೇ ..

— ಗಂಗಾಧರ ಬಿ ಎಲ್ ನಿಟ್ಟೂರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.