ಕೆ.ಎನ್.ಪಿ.ಲೇಖನ;

ಕೆ.ಎನ್.ಪಿ.ಲೇಖನ ವಿಭಾಗದಲ್ಲಿ ಪ್ರಗತಿಪರ ಚಿಂತಕರು ಮತ್ತು ಬರಹಗಾರರಾದ ಸಂಗಮೇಶ ಎನ್ ಜವಾದಿ ರವರ “ನಾಗರ ಪಂಚಮಿ ಬೇಡ, ಬಡವರ ಪಂಚಮಿ ಆಚರಣೆಗೆ ಬರಲಿ” ಎಂಬ ಲೇಖನವನ್ನು ಪ್ರಕಟಿಸಲಾಗಿದೆ. ಸಹೃದಯರು ಲೇಖನ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ..

ಭಾರತದಾದ್ಯಂತ ದಿನನಿತ್ಯ ಸಾವಿರಾರು ಪ್ರಾಣಗಳು ಅನ್ನವಿಲ್ಲದೆ ಹೋಗುತ್ತಿರುವುದನ್ನು ನಾವೆಲ್ಲರೂ ಕಣ್ಣಾರೆ ಕಾಣುತ್ತಿದೇವೆ. ಆದರೆ ಮೂಢನಂಬಿಕೆ ಮತ್ತು ಅಜ್ಞಾನ – ಅಂಧಕಾರದಲ್ಲಿ ಮುಳುಗಿ ಎಳುವುದರಲ್ಲಿಯೇ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಿದ್ದೇವೆ ಎಂಬುವುದೇ ಅತ್ಯಂತ ನೋವಿನ ಸಂಗತಿ.

ದಿನ ಬೆಳಗಾದರೆ ನರಕಮಯ ಜೀವನವನ್ನು ಸಾಗಿಸುತ್ತಿರುವ ಎಷ್ಟೋ ಮನುಷ್ಯರ ಬಗ್ಗೆ ನಾವು ಯಾವತ್ತಾದರೂ ಯೋಚನೆ ಮಾಡಿದ್ದೇವೆಯೇ ಎಂದು ಒಮ್ಮೆ ಎದೆ ತಟ್ಟಿ ಆತ್ಮಸಾಕ್ಷಿ ಅಂತರಂಗದಿಂದ ಯೋಚನೆ ಮಾಡಬೇಕಾಗಿದೆ. ಯೋಚನೆ ಮಾಡಿದಾಗಲೇ ನಮಗೊಂದು ಸತ್ಯ ಸಂಗತಿ ಗೊತ್ತಾಗಬಹುದಾಗಿದೆ ಶರಣ ಬಂಧುಗಳೆ…

ಮಾನವರಾದ ನಾವು ಇಂದು ಮಾನವೀಯ ಮೌಲ್ಯಗಳನ್ನು ಮರೆತು ಬದುಕುತ್ತಿರುವುದು ಹೇಯ ಸಂಸ್ಕೃತಿ ಅಲ್ಲವೇ ? ಜಾತಿ ಮತ ಪಂಥ ಎಂಬ ಬಲೆಯಲ್ಲಿ ಬಿದ್ದು, ಮನುಜತ್ವವನ್ನು ಮರೆಯುತ್ತಿರುವುದು ನಮಗೆಲ್ಲಾ ನಾಚಿಕೆ ವಿಷಯ ವಲ್ಲವೇ ? ಸರ್ವ ಧರ್ಮ ನೆಲೆವೀಡಾದ ಈ ದೇಶದಲ್ಲಿ ಅನ್ನಕ್ಕಾಗಿ ಹಾಹಾಕಾರ ಪಡುತ್ತಿರುವ ಜೀವಗಳ ಯಾತನಮಯ ಬದುಕಿನ ಕುರಿತ ನೈಜತೆಯ ಸನ್ನಿವೇಶದ ನೈಜ ಘಟನೆಗಳು ನಮಗೆ ಇನ್ನೂ ಕಾಣುತ್ತಿಲ್ಲವೇ? ಕಾಣುತ್ತಿದೆ ಆದರೆ ನಾವು ಆ ಕಡೆ ಗಮನ ಕೊಡುವುದಿಲ್ಲ ಎಕೆಂದರೆ ನಾವು ಶ್ರೀಮಂತ ವರ್ಗದಲ್ಲಿ ಹುಟ್ಟಿದ ಕಾರಣ ನಮಗೆ ಬಡವರ ಅನಾಥರ ಬಗ್ಗೆ ಚಿಂತೆ ಮಾಡುವುದಕ್ಕೆ ಸಮಯ ವಿಲ್ಲ ಎಂಬ ಉದಾಸೀನ ಮನೋಭಾವ ಅಲ್ಲದೆ ಬಡವರ ಬಗ್ಗೆ ನಾವೇಕೆ ಚಿಂತೆ ಮಾಡಬೇಕೆಂಬ ಸ್ವಾರ್ಥ ಬುದ್ಧಿ.

ಇಂತಹ ಹತ್ತಾರು ಅರ್ಥಹೀನ ಮನೋಭಾವದ ಅಜ್ಞಾನದಿಂದ ಈ ದೇಶದಲ್ಲಿ ವಾಸಿಸುತ್ತಿರುವ ಬಡವರ ಸ್ಥಿತಿ ಈ ಕೆಳ ಮಟ್ಟಕ್ಕೆ ಹಾಗೂ ಆಹಾರ ವಿಲ್ಲದೆ ಸಾವಿರಾರು ಪ್ರಾಣಗಳು ಹೋಗುತ್ತಿರುವುದು ಖೇಧಕರ ಮತ್ತು ಚಿಂತಾಜನಕ ವಿಷಯ. ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ನಾವೆಲ್ಲರೂ ಕಾರಣೀಭೂತರಾಗಿದ್ದೇವೆಂಬುವುದನ್ನು ಮರೆಯಬಾರದು.

ಶ್ರೀಮಂತರು ಸಹ ಮನಷ್ಯರು ತಾನೇ, ಎನು ಅವರು ಆಕಾಶದಿಂದ ಕಳಚಿಕೊಂಡು ಬಂದಿದಾರೋ? ಇಲ್ಲಾ ತಾನೇ, ಎಲ್ಲರೂ ಹುಟ್ಟುವ ಹಾಗೆ ಅವರ ಹುಟ್ಟು – ಸಾವು ಇದೆಯಲ್ಲಾ ಎಂಬುದು ಒಮ್ಮೆ ಅವರು ಆಳವಾಗಿ ಚಿಂತೆ ಮಾಡಲಿ ಮತ್ತು ಮಾಡುವ ಕಾಲ ಈಗ ಕೂಡಿ ಬಂದಿದೆ, ದಯವಿಟ್ಟು ಇನ್ನೊಬ್ಬರ ನೋವಿಗೆ ನೋವಿನ ಕಷ್ಟ ನೀಡಬೇಡಿ, ಕಷ್ಟಕ್ಕೆ ಪರಿಹಾರ ನೀಡುವ – ಸ್ಪಂದಿಸುವ ಗುಣ, ಕೆಲಸ ನಿಮ್ಮಿಂದ ಆಗಲಿ ಎನ್ನುವ ಮಹಾದಾಸೆಯೇ ನಮ್ಮದಾಗಿದೆ.

ಬಡವರ – ಹಸಿದವರ ಪಂಚಮಿ ಆಗಲಿ:

ದೇವರ ಹೆಸರಿನಲ್ಲಿ ಪ್ರತಿವರ್ಷ ದೇಶದಲ್ಲಿ ಲಕ್ಷಾಂತರ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ಇಂಥ ಅವೈಜ್ಞಾನಿಕ ಪದ್ಧತಿಯನ್ನು ಸರಕಾರ ಕೂಡಲೇ ನಿಷೇಧಿಸಬೇಕು. ಇದಕ್ಕೆ ವ್ಯಯವಾಗುವ ಹಾಲನ್ನು ಬಡವರ ಮಕ್ಕಳಿಗೆ ಕೊಡಿಸುವ ಕೆಲಸ ಎಲ್ಲಾ ಪ್ರಗತಿಪರ ಸಂಘಟನೆಗಳು ಮತ್ತು ಬುದ್ದಿಜೀವಿಗಳು ಮಾಡಬೇಕಾಗಿದೆ. ಹಾಲು ಮಣ್ಣು ಪಾಲಾಗುತ್ತದೆ. ಇದಕ್ಕಿಂತ ನಿರ್ಗತಿಕ, ಶೋಷಿತ, ರೋಗಿಗಳಿಗೆ ವಿತರಿಸುವ ಕಾರ್ಯ ನಡೆಯಲಿ ಮತ್ತು ದೇಶದಲ್ಲಿ ಇತ್ತೀಚೆಗೆ ಹಾಲಿನ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಅಪೌಷ್ಠಿಕತೆ, ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ನೀಡುವುದರಿಂದ ಇದನ್ನು ನಿವಾರಿಸಬಹುದಾಗಿದೆ.

ಬಡವರು ಮತ್ತು ಅನಾಥರು ದೇವರಿದ್ದಂತೆ. ಅವರ ಯೋಗಕ್ಷೇಮವೇ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಸಮಾಜದ ಪರಿವರ್ತನೆಗೆ ಬಸವಾದಿ ಪ್ರಥಮರು 12ನೇ ಶತಮಾನದಿಂದಲೂ ಶ್ರಮಿಸಿದ್ದರೂ ಮೌಢ್ಯತೆ ಇಂದಿಗೂ ಕಡಿಮೆಯಾಗಿಲ್ಲ. ವೈಜ್ಞಾನಿಕ ಯುಗದಲ್ಲಿ ಇಂಥ ಅನಿಷ್ಠ ಪದ್ಧತಿ ಇನ್ನೂ ಜಾರಿಯಲ್ಲಿರುವುದು ವಿಷಾಧದ ಸಂಗತಿ. ಕೆಲ ಸ್ವಾರ್ಥಹೀನ ಮನಷ್ಯರು ಅವರ ವೈಭೋಗದ ಸುಖಕ್ಕಾಗಿ ಮೂಢನಂಬಿಕೆಯ ವಿಷ ಬೀಜ ಭಿತ್ತಿ ಜನರನ್ನು ಮೂಢರನ್ನಾಗಿ ಮಾಡುತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರು ಎಚ್ಚರ ವಹಿಸಬೇಕು, ವಹಿಸಿದಾಗಲೇ ನಮ್ಮ ಬದುಕು ಹಸನಾಗುತ್ತದೆ.

ಕೊನೆಯ ಮಾತು : ಕರುಣೆ ಎಂಬುವುದೆ ನಮ್ಮಲ್ಲಿ ಇಲ್ಲಾ

ಹಸಿವಿನಿಂದ ಬಳಲುತ್ತಿರುವ ಎಷ್ಟೋ ಬಡವರ ಅಳುವಿನ ಕೂಗಿಗೆ ಬೆಲೆ ನೀಡದೇ ಅಥವಾ ಆ ಕಡೆ ಗಮನ ಹರಿಸದೇ, ಖಾಲಿ ಹುತ್ತಕೇ ಲೀಟರ್ ಗಟ್ಟಲೇ ಹಾಲು ಹಾಕಿದರೆ ಪ್ರಯೋಜನ ವೇನೂ ಹೇಳಿ? ಮನುಷ್ಯ ರೂಪದಲ್ಲೇ ಇರುವ ದೇವರನ್ನು ಬಿಟ್ಟು ಗುಡಿ ಗುಂಡಾರದಲ್ಲಿ ಹುಡುಕಿದರೆ ಹೇಗೆ ದೇವರು ನಮಗೆ ಸಿಗುತ್ತಾನೆ, ಇತ್ತ ನಿಜವಾದ ದೇವರಾದ ಬಡವರ ಹಸಿವು ಮರೆತರೇ ಹೇಗೆ ಎನ್ನುವ ಚಿಂತೆ ನಮ್ಮದು ಹಾಗಾಗಿ ಇಂತಹ ಕಲ್ಲು ಮಣ್ಣು ಕಟ್ಟಿಗೆಯಲ್ಲಿ ದೇವರನ್ನು ಕಾಣುವ ಬದಲು ನಿಜದೇವರ ಸ್ವರೂಪರಾದ ಬಡವರ – ಹಸಿದವರ ಅಂತರಂಗದಲ್ಲಿ ದೇವರು ಹುಡುಕುವ ಕೆಲಸ ನಿಮ್ಮಿಂದವಾಗಲಿ ಎಂಬುವುದೇ ನಮ್ಮ ಅಭಿಲಾಷೆ ಹಾಗೂ ಅದು ಬಿಟ್ಟು ಕಾಣದೇ ಇರುವ ದೇವರುಗಳು ಹುಡುಕುವ ಬದಲು ದಾನ ಮಾಡುತ್ತಾ, ಹಸಿದವರಿಗೆ ಅನ್ನ ಹಾಕುವ ಕೆಲಸದಲ್ಲಿ ನಿರತರಾಗುವ ಮೂಲಕ ನಮ್ಮ ಜೀವನವನ್ನು ಪಾವನ ಮಾಡುವ ಶ್ರೇಷ್ಠತೆಯ ಕಾಯಕದ ಬದುಕು ನಮ್ಮೆಲ್ಲರದಾಗಿಸೊಣ ಅಲ್ಲದೆ

ದೇವರೆಂದೂ ಯಾವತ್ತೂ – ಯಾವಾಗಲೂ – ಎಂದೊ ಮತ್ತು ಯಾರಿಂದಲೂ ಕಾಣಿಕೆ ಪೂಜೆ ಪುನಸ್ಕಾರ ಕೇಳಿಲ್ಲ ಮತ್ತು ಖಂಡಿತವಾಗಿಯೂ ಕೇಳುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ ವಿಚಾರ ಅಲ್ಲವೇ ?ಬಡವರ ಹೊಟ್ಟೆ ಮೇಲೆ ಹೊಡೆದು ಕಲ್ಲು, ಬಂಡೆ, ಮಣ್ಣು, ಕಟ್ಟಿಗೆಗೆ ಅನ್ನ ಹಾಕುವ ಬದಲು ಜೀವಂತ ಇರುವ ಜೀವಗಳಿಗೆ ಅನ್ನ ಹಾಕುವ ಮೂಲಕ ಪುಣ್ಯ ಕಟ್ಟಿಕೊಳ್ಳಿ ಓ ಮನುಜರೆ, ನಿಜವಾಗಲು ನಿಮಗೆ ಆತ್ಮಸಾಕ್ಷಿ ಅನ್ನುವುದು ಇದೆ ಅಂದಾದರೆ ಬನ್ನಿ ಬಡವರ ಪಾಲಿಗೆ ಸಂಜೀವಿನಿಯಾಗಿ ನಿಲ್ಲುವ ಮೂಲಕ ಅವರ ಆಶೆಯಗಳನು ಪೂರೈಸುವ ದಿಸೆಯಲ್ಲಿ ದುಡಿಯೋಣ.

ಕಾಣದ ಕಲ್ಲಿಗೆ ಹಾಲೆರೆಯುವುದು ಬಿಟ್ಟು ಹಸಿದವರಿಗೆ ಹಾಲು ಕೊಡುವ – ನೀಡುವ ನಿಟ್ಟಿನಲ್ಲಿ ಅಭಿಯಾನ ಮಾಡೊಣ ಬನ್ನಿ, ಕಪ್ಪು ಶಿಲೆಗೆ ಕಾಣಿಕೆ ಹಾಕುವ ಬದಲು ಹೊರಗೆ ಬೇಡುವ ಜೀವಂತ ಶಿಲೆಗೆ ದಾನ ನೀಡೊಣ ಮುಂದೆ ಬನ್ನಿ, ಬೇಡುತ್ತಿರುವ ಕೈಗಳಿಗೆ ಕೈಯಾಗೊಣ. ಇನ್ನಾದರೂ ವಾಸ್ತವದ ನಿಜ ಸಂಗತಿಗೆ ಬನ್ನಿ, ಮಾನವೀಯ ಮೌಲ್ಯಗಳನ್ನು ಸಾರೋಣ, ಹಸಿದವರ ಹಸಿವ ನೀಗುವ ಕೆಲಸಕ್ಕೆ ಕೈ ಹಾಕೋಣ, ನೊಂದವರಿಗೆ ಆಶ್ರಯವಾಗಿ ಅವರ ಬಾಳಿನಲ್ಲಿ ಬೆಳಕಾಗೋಣ, ಸಾಧ್ಯವಾದಷ್ಟು ಒಳ್ಳೆಯದನ್ನೇ ಬಯಸಿ ನಿಜವನರಿತು, ಪ್ರೀತಿ – ಸ್ನೇಹ – ಮಾನವೀಯ ಮೌಲ್ಯಗಳನ್ನು ಹಂಚಿ ಎಲ್ಲರೂ ನಮ್ಮವರೆಂದು ಬದುಕಿ ಜಗತ್ತಿಗೆ ಮಾದರಿಯಾಗೋಣ.

-ಸಂಗಮೇಶ ಎನ್ ಜವಾದಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.