ಕೆ.ಎನ್.ಪಿ.ವಾರ್ತೆ,ಹೈದರಾಬಾದ್,ಏ.21;
ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ.2ರಷ್ಟು ಮೀಸಲಾತಿ ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಇಂದು ಘೋಷಿಸಿದರು.
ಗೋಲ್ಟ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಿಂದಿರುಗಿರುವ ಕ್ರೀಡಾಪಟುಗಳ ತಂಡ ಭೇಟಿ ಮಾಡಿದ ವೇಳೆ ಅವರನ್ನು ಅಭಿನಂದಿಸಿ, ಕ್ರೀಡಾಪಟುಗಳ ಸಾಧನೆಯನ್ನು ಪ್ರಶಂಸಿಸಿದ ನಂತರ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ.2ರಷ್ಟು ಮೀಸಲಾತಿ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾಪಟುಗಳಿಗೆಂದು ಕ್ರೀಡಾಕೋಟಾದಡಿ ಈಗಾಗಲೇ ಶೇ.2ರಷ್ಟು ಮೀಸಲಾತಿಯನ್ನುನೀಡಿದ್ದು, ಜಾರಿಯಲ್ಲಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರಿ ಹುದ್ದೆಯಲ್ಲೂ ಶೇ.2ರಷ್ಟು ಮೀಸಲಾತಿಯನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವೇಳೆ ಬ್ಯಾಡ್ಮಿಂಟನ್ ತರಬೇತುದಾರ ಗೋಪಿಚಂದ್, ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಸೈನಾ ನೆಹ್ವಾಲ್, ಬೆಳ್ಳಿಗೆದ್ದ ಪಿ.ವಿ. ಸಿಂಧು, ಕಿದಂಬಿ ಶ್ರೀಕಾಂತ್, ಸಾತ್ವಿಕ್ ರಾಜ್ ರಂಕಿರೆಡ್ಡಿ ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು.