ಕೆ.ಎನ್.ಪಿ,ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ “ಹೊಸ ವರ್ಷಕ್ಕೆ ಹೊಸ ಯೋಜನೆ” ಕವಿತೆಯನ್ನು ಪ್ರಕಟಿಸಲಾಗಿದೆ…ಸಹೃದಯರು ಕವಿತೆ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ, ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಹೊಸ ವರ್ಷಕ್ಕೆ ಹೊಸ ಯೋಜನೆ

ಬಿಟ್ಟು ಬಿಡಲು ಹಲವಾರು
ರೂಢಿಸಿಕೊಳ್ಳಲು ಕೆಲವು
ತಿದ್ದಿಕೊಳ್ಳಲು ಒಂದಿಷ್ಟು
ಬದಲಾಗಲು ಬೆಟ್ಟದಷ್ಟು
ಹೊಸ ವರ್ಷವೇ ಬರಬೇಕೆಂದು
ತುಂಬಾ ದಿನಗಳಿಂದ ಕಾಯುತ್ತಿದ್ದ

ಅಗೋ ಬಂದೇ ಬಿಟ್ಟಿತು ಹೊಸ ವರ್ಷ
ಹಿಂದಿನ ದಿನವೇ ಸಿದ್ದಪಡಿಸಿ ಇಡಲು
ಅಣಿಯಾಗಿದ್ದ ಉದ್ದವಾದ ಪಟ್ಟಿಯೊಂದನ್ನು
ಆದರೆ ಸಮಯದ ಕೊರತೆ
ಹಳೆ ವರ್ಷ ಬೀಳ್ಕೊಡುಗೆಯ ಕಾರಣ
ಆಚರಿಸಲು ಹೊಸ ವರ್ಷದ ಸಂಭ್ರಮ

ಬರೆದು ಇಟ್ಟರೆ ಆಯಿತು ಆಮೇಲೆ
ಎಂದು ಗೊಣಗಿಕೊಂಡು ನಡೆದ
ಆ ಕ್ಷಣವೇ ಅಲ್ಲಾಡಿತು ಬುನಾದಿ
ಭದ್ರವಾಗಿ ಹಾಕುವ ಮುನ್ನವೇ

ಎಗ್ಗಿಲ್ಲದೆ ಕುಡಿದು ತೂರಾಡಿ
ಮಜಾ ಮಾಡಿ ಬಂದ ಬಳಿಕವೂ
ಹಾಗೆ ಇರಬೇಕು ಹೀಗೆ ಮಾಡಬೇಕು ಎಂದು
ಮತ್ತೆ ಅದನ್ನೆಲ್ಲಾ ಮನನ ಮಾಡಿಕೊಂಡ
ಮರುದಿನ ಎದ್ದ ಕೂಡಲೇ
ಅದರಂತೆ ಶಿಸ್ತಿನಿಂದ ನಡೆಯಬೇಕು
ಎಂದೇ ದಿನ ಆರಂಭಿಸಿದ

ಹೌದು ಹೋದ ವರ್ಷವೂ
ಅವನು ಹೀಗೆ ಮುಂದಿನ ವರ್ಷಕ್ಕೆಂದೇ
ಅಚ್ಚುಕಟ್ಟಾಗಿ ಯೋಜನೆಗಳನ್ನು ಹಾಕಿಕೊಂಡಿದ್ದ
ಆದರೆ ಒಂದೆರಡು ದಿನಗಳ ನಂತರ
ಮಾಡಿದರೆ ಆಯ್ತು ಬಿಟ್ಟರೆ ಆಯ್ತು
ಎನ್ನುತ್ತಲೇ ನಿರ್ಲಕ್ಷಿಸಿ ತಳವೂರುವ ಮೊದಲೇ
ತನ್ನ ನಿರ್ಧಾರ ಪ್ರತಿಜ್ಞೆಗಳನ್ನು
ತಾನೇ ಅಲ್ಲಾಡಿಸಿ ಬೀಳಿಸಿ ಬಿಡುತ್ತಿದ್ದ
ಮತ್ತೆ ಜೀವನ ಎಂದಿನಂತೆ ಬೇಕಾಬಿಟ್ಟಿ

ಅಯ್ಯೋ ಹಾಗೆ ಅಂದ್ಕೊಂಡಿದ್ದೆ
ಅಯ್ಯಯ್ಯೋ ಹೀಗೆ ಅಂದ್ಕೊಂಡಿದ್ದೆ
ಪಶ್ಚಾತಾಪ ಪಟ್ಟು ಶಪಿಸಿಕೊಳ್ಳುತ್ತಲೇ
ಇನ್ನಾದರೂ ಬದಲಾಗಬೇಕು ಎಂದುಕೊಂಡು
ಮತ್ತೆ ಮತ್ತೆ ಹಾಗೆ ಇರುತ್ತಿದ್ದ

ಹೀಗೆ ಎಷ್ಟು ವರ್ಷಗಳು ಕಳೆದು ಹೋದವೋ
ಅವನಿಗೂ ಸಹ ಇಂದಿಗೂ ಗೊತ್ತಿಲ್ಲ
ಕೇಳಿದರೆ ಈ ವರ್ಷ ಪಕ್ಕಾ ಗುರು
ಎಂದು ನಗುತ್ತಲೇ ಸುಮ್ಮನಾಗುವ
ಆತ ಮಹಾ ಪ್ರಚಂಡ ಬುದ್ಧಿವಂತ
ಹೋದ ವರ್ಷವೂ ನನಗೆ
ಹೀಗೆ ಹೇಳಿ ಆತ ಹಾಗೆ ಉಳಿದರೂ
ಮತ್ತೆ ನೆನಪಿಸುವ ನಾ ದೊಡ್ಡ ದಡ್ಡ ಶಿಖಾಮಣಿ

ಅಷ್ಟಕ್ಕೂ ಅಂದ್ಕೋಡಿದ್ದು ಏನೆಂದು ಯೋಚಿಸಿದರೆ
ಅವು ಅವೇ ನಾವೆಲ್ಲರೂ
ಪ್ರತಿ ಸಲ ಅಂದುಕೊಳ್ಳುವಂತಹ
ಹಳೆ ಚಿಕ್ಕ ಚೊಕ್ಕ ಜೀವನ ವಿಧಾನಗಳೇ
ಹಾಗಾದರೆ ಕಾರ್ಯರೂಪಕ್ಕೆ
ತರುವ ನಿಟ್ಟಿನಲ್ಲಿ ಎಡವುತ್ತಿರುವುದೆಲ್ಲಿ

ಮತ್ತೆ ಹೊಳೆಯುವವು ಅವೇ ಕಾರಣಗಳು
ಅಂದ್ಕೊಂಡು ಸುಮ್ಮನಾಗುವ ಹಳಸಲು ನೀತಿ
ಅದಕ್ಕೆ ಬೇಕಾದ ಕಠಿಣ ಬದ್ದತೆ
ರೂಡಿಸಿಕೊಳ್ಳಲು ಮಾಡುವ ವಿಫಲ ಪ್ರಯತ್ನ

ಮನಸ್ಸನ್ನು ತಹಬದಿಗೆ ತಂದು ಸಿದ್ದಗೊಳಿಸದೆ
ಹರಿಯ ಬಿಡುವುದು ಎಂದಿನಂತೆ ಎಲ್ಲೆಂದರಲ್ಲಿ
ಸ್ವಂತ ನಿರ್ಬಂಧಗಳನ್ನು ನಿರ್ಬಂಧಿಸುತ್ತಲೇ
ನಡೆಯುವುದು ಮನ ಬಂದಂತೆ

ಹೌದು ಅವನು ಮಾತ್ರವಲ್ಲ
ನಾನು ಸಹ ಹಾಗೆ
ಅವನು ಎನ್ನುವವನು ಕೇವಲ ನನ್ನ ರೂಪಕ

ಬಸವರಾಜ ಕಾಸೆ
7829141150
pradeepbasu40@gmail.com

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.