ಕೆ.ಎನ್.ಪಿ.ವಾರ್ತೆ,ಕಲಬುರಗಿ,ನ.05;

ಚಲಿಸುತ್ತಿದ್ದ ಕಾರಿಗೆ ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆದು ಬಳಿಕ‌ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಅಫ್ಜಲ್‌ಪುರ ರಸ್ತೆಯ ಹಾರತಿ ಹಡಗಿಲ್ ಬಳಿ ಸೋಮವಾರ ತಡರಾತ್ರಿ ನಡೆದಿದ್ದು, ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.

ಜೇವರ್ಗಿ ತಾಲ್ಲೂಕಿನ ಮಯೂರ ಗ್ರಾಮದ ಶಿವಲಿಂಗ ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ‌ ಮಾಡಲಾಗಿದ್ದು, ಕೊಲೆಯ ಹಿಂದೆ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯ ಶಾಂತಪ್ಪ ಕೂಡಲಗಿ ಸೇರಿದಂತೆ ಹಲವರ ಕೈವಾಡವಿದೆ ಎಂದು ಮೃತ ಶಿವಲಿಂಗ ಸಂಬಂಧಿಕರು ಆರೋಪಿಸಿದ್ದಾರೆ.

ಶಿವಲಿಂಗ ಈ ಹಿಂದೆ ಬಸ್ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ನಂತರ ಸೇವೆಯಿಂದ ಅಮಾನತುಗೊಂಡು ಸ್ಥಳೀಯವಾಗಿ ಪ್ರಬಲ ನಾಯಕನಾಗಿ ಬೆಳೆದಿದ್ದನಲ್ಲದೆ ಮರಳು ವ್ಯಾಪಾರದಲ್ಲಿ ಸಕ್ರಿಯನಾಗಿದ್ದ.

ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯನ ಅಳಿಯಂದಿರು ಮಯೂರ ಗ್ರಾಮದಲ್ಲಿ ನಡೆಸುತ್ತಿದ್ದ ಪುಂಡಾಟಿಕೆಯನ್ನು ಶಿವಲಿಂಗ ಖಂಡಿಸುತ್ತಿದ್ದ. ಮೇಲಾಗಿ ಒಂದೆರಡು ಬಾರಿ ಯುವಕರಿಗೆ ಥಳಿಸಿ ಬುದ್ಧಿವಾದ ಹೇಳಿದ್ದ ಎನ್ನಲಾಗಿದೆ. ಈ ಘಟನೆಗಳಿಂದ ಪರಸ್ಪರ ವೈಯಕ್ತಿಕ ದ್ವೇಷ ಹೆಪ್ಪುಗಟ್ಟಿತ್ತು.

ಸೋಮವಾರ ರಾತ್ರಿ ಅಫ್ಜಲ್‌ಪುರ ಕಡೆಯಿಂದ ಹೊರಟಿದ್ದ ಶಿವಲಿಂಗನ ಕಾರಿಗೆ ಎದುರಿನಿಂದ ಬಂದ ಬೊಲೆರೋ ಅಡ್ಡಗಟ್ಟಿದೆ. ಬಳಿಕ ಹಿಂದಿನಿಂದ ಬಂದ ಮತ್ತೊಂದು ಕಾರು ಶಿವಲಿಂಗ ಹೊರಟಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಶಿವಲಿಂಗನ ಕಾರು ಹೊಲದೊಳಗೆ ಚಿಮ್ಮಿ ಬಿದ್ದಿದೆ. ಇದರಿಂದ ಗಾಬರಿಗೊಂಡ ಆತ ತನ್ನ ಕಾರಿನಿಂದ ಇಳಿಯುತ್ತಿದ್ದಂತೆಯೇ ಮಾರಕಾಸ್ತ್ರಗಳಿಂದ ಶಿವಲಿಂಗ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

10-12 ಮಂದಿ ಇದ್ದ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಘಟನೆಯ ನಂತರ ಹಂತಕರು ತಮ್ಮ ಮೊಬೈಲ್ ಹಾಗೂ ಆಧಾರ್ ಕಾರ್ಡ್‌ಗಳನ್ನು ಉದ್ದೇಶಪೂರ್ವಕವಾಗಿಯೇ ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ಈ ಪುರಾವೆಗಳ ಆಧಾರದ ಮೇಲೆ ಫರಹತಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ಸದಸ್ಯನ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಎಫ್ಐಆರ್‌ನಲ್ಲಿ ಆತನ ಹೆಸರು ನಮೂದಿಸಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಶಿವಲಿಂಗ ಸಂಬಂಧಿಕರು ಹಾಗೂ ಸ್ನೇಹಿತರು ಜಿಲ್ಲಾ ಪಂಚಾಯಿತಿ ಸದಸ್ಯನ ಹೆಸರನ್ನು ಎಫ್ಐಆರ್‌ನಲ್ಲಿ ನಮೂದಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು ಇಂದು ಮಧ್ಯಾಹ್ನದ ವೇಳೆಗೆ ಜಿಪಂ ಸದಸ್ಯನ ಹೆಸರು ಎಫ್‌ಐಆರ್‌ ಸೇರುವ ಸಾಧ್ಯತೆಗಳಿವೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.