ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.20;

ಬೆಂಗಳೂರಿನಲ್ಲಿ ಹಿಂದಿ ಭಾಷೆಯಲ್ಲಿ ಹಾಕಲಾಗಿದ್ದ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಕನ್ನಡಪರ ಹೋರಾಟಗಾರರ ಬಂಧನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್‌ ವಿವಾದದ ಬಗ್ಗೆ ಚರ್ಚೆ ಜೋರಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ. ವಿ. ಸದಾನಂದ ಗೌಡ ಮುಂತಾದವರು ಪ್ರಕರಣದ ಬಗ್ಗೆ ಟ್ವೀಟ್, ಫೇಸ್‌ ಬುಕ್ ಪೋಸ್ಟ್‌ಗಳನ್ನು ಹಾಕಿದ್ದಾರೆ. ಕನ್ನಡಪರ ಹೋರಾಟಗಾರರ ಬಂಧನಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯ ಪ್ರಾರ್ಥನಾ ಮಂದಿರದ ಹೊರಗೆ ಜೈನ ಸಮುದಾಯದ ಕೆಲವು ಸದಸ್ಯರು ಹಾಕಿದ ಹಿಂದಿ ಬ್ಯಾನರ್ ನ್ನು ಕೆಲ ಕನ್ನಡ ಪರ ಕಾರ್ಯಕರ್ತರು ತೆಗೆದುಹಾಕಿದ ಘಟನೆಯೊಂದು ರಾಜ್ಯದಲ್ಲಿ ಮತ್ತೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಇನ್ನು ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೋಲೀಸರು ಆರು ಮಂದಿ ಕನ್ನಡ ಹೋರಾಟಗಾರರನ್ನು ಬಂಧಿಸಿದ್ದಾರೆ. “ಆಗಸ್ಟ್ 16 ರಂದು ಈ ಘಟನೆ ಸಂಭವಿಸಿದೆ. 

ಬಂಧಿತರಾದವರು :

ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ. ಹರೀಶ್ ಕುಮಾರ್, ಪದಾಧಿಕಾರಿಗಳಾದ ಮಂಜು, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಅಂಜನಪ್ಪ, ರಕ್ಷಣಾ ಸೇನೆಯ ರಮೇಶ್ ಗೌಡ ಹಾಗೂ ಕರುನಾಡ ಸೇವಕರು ವೇದಿಕೆಯ ಮಾದೇಶ್ ಗೌಡ.

ಘಟನೆ ವಿವರ :

ಗಣೇಶ್ ಬಾಗ್ ಪ್ರಾರ್ಥನಾ ಮಂದಿರದಲ್ಲಿ ಚಾರ್ತುಮಾಸದ ಆಚರಣೆ ನಡೆಯುತ್ತಿತ್ತು. ಇದರ ಕುರಿತು ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಲಾಗಿತ್ತು. ಸಾರ್ವಜನಿಕ ಪ್ರದೇಶದಲ್ಲಿ ಹಿಂದಿ ಬ್ಯಾನರ್ ಕಟ್ಟಿದ್ದಕ್ಕೆ ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾರ್ಥನಾ ಮಂದಿರದ ಭದ್ರತಾ ಸಿಬ್ಬಂದಿಗೆ ಕನ್ನಡ ಭಾಷೆಯ ಮಹತ್ವ ಹೇಳಲಾಗಿತ್ತು. ಇದನ್ನು ವಿಡಿಯೋ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಯಿತು. ವಿಷಯ ತಿಳಿದ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಬ್ಯಾನರ್ ಹರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜೈನ ಸಮುದಾಯದ ಯುವಕರು ಸಹ ಬ್ಯಾನರ್ ಹರಿದಿರುವುದನ್ನು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಬಂದ್ ನಡೆಸಬೇಕು ಎಂದು ಒತ್ತಾಯಿಸಿದ್ದರು. ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕೋಮು ಸೌಹರ್ದತೆಗೆ ಧಕ್ಕೆ ತಂದ ಪ್ರಕರಣ ದಾಖಲು ಮಾಡಿ 6 ಜನರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳಿಸಿದ್ದಾರೆ.

ಘಟನೆ ಬಗ್ಗೆ ಸ್ಪಷ್ಟನೆ :

ಹಿಂದೆಯೂ ನಾವು ಹಿಂದಿಯಲ್ಲಿ ಬ್ಯಾನರ್ ಹಾಕಿದ್ದೇವೆ. ಎಂದೂ ಇಂತಹ ಘಟನೆ ನಡೆದಿಲ್ಲ. ಚಾರ್ತುಮಾಸದ ಆಚರಣೆಗೆ ಕನ್ನಡಿಗರು ಬರುವುದಿಲ್ಲ. ಆದ್ದರಿಂದ, ಹಿಂದಿ ಬ್ಯಾನರ್ ಇದೆ ಎಂದೂ ಘಟನೆ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

ಸಂಸದರ ವಿರುದ್ಧ ಆಕ್ರೋಶ :

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಘಟನೆ ಬಗ್ಗೆ ಮಾಡಿರುವ ಟ್ವೀಟ್‌ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಸದರ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವ್ಯಾಪಕ ಖಂಡನೆ :

ಕನ್ನಡ ಪರ ಕಾರ್ಯಕರ್ತರ ವಿರುದ್ಧ ಕೈಗೊಂಡ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಖಂಡಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ ಈ ಘಟನೆಗೆ ಧಾರ್ಮಿಕ ಮತ್ತು ರಾಜಕೀಯ ಬಣ್ಣವನ್ನು ನೀಡುವ ಮೂಲಕ ಕನ್ನಡ ಕಾರ್ಯಕರ್ತರ ಸ್ವಾತಂತ್ರ್ಯವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಈ ಘಟನೆಯನ್ನು ಖಂಡಿಸಿದ ಅವರು, ಈ ಕಾರ್ಯಕರ್ತರನ್ನು ಸರ್ಕಾರ ಬಿಡುಗಡೆ ಮಾಡಬೇಕು ಮತ್ತು ಕನ್ನಡ ಮತ್ತು ಸಂಸ್ಕೃತಿಗೆ ಕೆಲಸ ಮಾಡುವ ಜನರ ಮನೋಭಾವವನ್ನು ಗೌರವಿಸಬೇಕು ಎಂದು ಹೇಳಿದರು.

ಆರು ಮಂದಿಯ ವಿರುದ್ಧ ಐಪಿಸಿ 153 ಎ ಮತ್ತು ಐಪಿಸಿ ಸೆಕ್ಷನ್ 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತು ಅವರಾರಿಗೂ ಜಾಮೀನು ಸಿಕ್ಕಿಲ್ಲ.

ಜೆಡಿಎಸ್ ಪಕ್ಷ ಸಹ ಕಾರ್ಯಕರ್ತರ ಬಂಧನ ವಿರುದ್ಧ ಕಳವಳ ವ್ಯಕ್ತಪಡಿಸಿದೆ. ಪಕ್ಷದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ “ಕಾರ್ಯಕರ್ತರು ಕನ್ನಡ ಪೋಸ್ಟರ್ ಗಳನ್ನು ಹಾಕಿರೆಂದು ಹೇಳಿದ್ದಾರೆ. ಆದರೆ ಈ ಘಟನೆಗೆ ಬಿಜೆಪಿ ಧಾರ್ಮಿಕ ಸ್ಪರ್ಶ ನೀಡುತ್ತಿರುವುದು ದುರದೃಷ್ಟಕರ,” ಎಂದು ಹೇಳಿದೆ.

ಈ ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ, “ನಮ್ಮ ಕನ್ನಡಿಗರ ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕಾನೂನಿನ ಪ್ರಕಾರ ಹಲ್ಲೆ ನಡೆಸಿದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕೆ ಕನ್ನಡ ಕಾರ್ಯಕರ್ತರಿಗೆ ಯಾವುದೇ ಸಂಬಂಧವಿಲ್ಲ. ನಾನು ಕನ್ನಡಿಗ ಪರವಾಗಿರುವಷ್ಟೇ ರೈತಪರವೂ ಆಗಿದ್ದೇನೆ” ಎಂದಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.