ಕೆ.ಎನ್.ಪಿ.ವಾರ್ತೆ,ಹಾವೇರಿ,ನ.30;

ಜಿಲ್ಲಾ ಪಂಚಾಯಿತಿ, ಸಹಾಯಕ ಕೃಷಿ ನಿರ್ದೇಶಕ ಇಲಾಖೆ ಹಾವೇರಿ ಹಾಗೂ ನೀಡ್ಸ ಸ್ವಯಂ ಸೇವಾ ಸಂಸ್ಥೆ ರಾಣೇಬೆನ್ನೂರ ವತಿಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಅಡಿಯಲ್ಲಿ ಒರಟು ಧಾನ್ಯ ಬೆಳೆಗಳಾದ ಹತ್ತಿ, ಗೋವಿನಜೋಳ ಮತ್ತು ತೊಗರಿ ಬೆಳೆಯ ಪ್ರಾತ್ಯಕ್ಷಿಕ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ತಾಲೂಕಿನ ಹನುಮನಹಳ್ಳಿ ಗ್ರಾಮದ ಯುವ ರೈತ ಕನಕಪ್ಪ ರಿತ್ತಿ ಅವರ ಜಮೀನಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರಾದ ಅಶೋಕ ಬಣಕಾರ ಮಾತನಾಡಿ, ತೊಗರಿ ಬೀಜ ಬಿತ್ತನೆಗೆ ಮೊದಲು ಮಣ್ಣು ಪರೀಕ್ಷೆ ನಡೆಸಿ ಕೊರತೆ ಇರುವ ಪೋಷಕಾಂಶಗಳನ್ನು ಮಣ್ಣಿನಲ್ಲಿ ಸೇರಿಸಬೇಕು.

ಸಾವಯವ ಗೊಬ್ಬರ ಬಳಸಿ ಬೀಜೋಪಚಾರ ಮಾಡಿದ ಬೀಜಗಳನ್ನು ಬಿತ್ತನೆ ಮಾಡಿ, ಅಗತ್ಯ ಲಘು ಪೋಷಕಾಂಶಗಳನ್ನು ನೀಡಬೇಕು.

ಹೊಲದಲ್ಲಿ ಕಳೆ ಬೆಳೆಯದಂತೆ ಹೆಚ್ಚು ನಿಗಾವಹಿಸುವುದು ಪ್ರಮುಖವಾದದ್ದು. ಹೂ ಬಿಡುವ ಹಂತದಲ್ಲಿ ಕ್ರಿಮಿನಾಶಕಗಳನ್ನು ಸಿಂಪಡಿಸಬೇಕು.

ವಾತಾವರಣದಲ್ಲಿ ಏರುಪೇರು ಕಂಡುಬಂದಾಗ ಬೆಳೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಸರಿಯಾಗಿ ನಿರ್ವಹಣೆ ಮಾಡಿದರೆ ತೊಗರಿ ಲಾಭದಾಯಕ ಬೆಳೆಯಾಗಿ ಹೊರಹೊಮ್ಮುತ್ತದೆ.

ಅದೇ ರೀತಿ ಹೊಂಗೆ ಮರ, ಹೂಲುಗಲ ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಇಂಧನವನ್ನು ಉತ್ಪಾದಿಸಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ ಅವರು ಮಾತನಾಡಿ, ಈ ವರ್ಷ ಅತಿವೃಷ್ಠಿಯಿಂದ ಎಲ್ಲಾ ಬೆಳೆಗಳು ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಹಾಗಾಗಿ ಮುಂಬರುವ ದಿನಗಳಲ್ಲಿ ಗ್ರಾಮದ ರೈತರಿಗೆ ಗುಂಟೂರು ಮೆಣಸಿನಕಾಯಿ, ಟೊಮೆಟೊ, ಹೀರೆಕಾಯಿ, ಸೌತೆಕಾಯಿ, ಹಾಗಲಕಾಯಿ ಮುಂತಾದ ತೋಟಗಾರಿಕಾ ಬೆಳೆಗಳ ಕೃಷಿ ಚಟುವಟಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಇದೇ ವೇಳೆ ಗ್ರಾಮದ ರೈತರಾದ ಕನಕಪ್ಪ ರಿತ್ತಿ ಅವರ ಕುಟುಂಬವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಮಣ್ಣ ಬಂಕಾಪುರ ಅಧ್ಯಕ್ಷತೆ ವಹಿಸಿದ್ದರು.

ಕೃಷಿ ಅಧಿಕಾರಿ ಬಿ.ಪಿ ದೊಡ್ಡಮನಿ, ಹನುಮವ್ವ ರಿತ್ತಿ, ಶುಭದೇವಯ್ಯಾ ಹೊಸಮಠ, ಶಿವಲಿಂಗಪ್ಪ ದಾಸಣ್ಣನವರ, ಹಾಲಪ್ಪ ಜಿಡ್ಡಿಬಾಗಿಲ, ವೆಂಕಪ್ಪ ಕೋಳೂರ, ರುದ್ರಗೌಡ ಪಾಟೀಲ, ಕಲ್ಯಾಣಪ್ಪ ಬಂಕಾಪುರ, ಶರಣಪ್ಪ ಬಂಕಾಪುರ, ವೀರನಗೌಡ ಲೆಕ್ಕನಗೌಡ್ರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ತಿಪ್ಪೇಶ ಕನ್ನಮ್ಮನವರ ನಿರೂಪಿಸಿದರು, ಕನಕಪ್ಪ ದಾಸಣ್ಣನವರ ಸ್ವಾಗತಿಸಿದರು, ಚಂದ್ರು ನೆಲೋಗಲ್ಲ ವಂದಿಸಿದರು.

ವರದಿ : ಮಂಜುನಾಥ ಆರ್ ಡಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.