ಕೆ.ಎನ್.ಪಿ.ವಾರ್ತೆ,ಶ್ರೀನಗರ,ಅ.31;

ಇನ್ನು ಮುಂದೆ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಇಲ್ಲ. ನಿನ್ನೆ ಮಧ್ಯರಾತ್ರಿಗೆ ಅದು ಮುಕ್ತಾಯವಾಗಿದ್ದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಬದಲಾಗಿದೆ. ಈ ಮೂಲಕ ಭಾರತದ 29 ರಾಜ್ಯಗಳಲ್ಲಿ ಒಂದು ರಾಜ್ಯ ಕಳೆದು 28 ರಾಜ್ಯವಾಗಿದೆ. ಹಾಗೆಯೇ 7 ಕೇಂದ್ರಾಡಳಿತ ಪ್ರದೇಶ 9 ಆಗಿದೆ.

ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ತೆಗೆದುಹಾಕಿದ 86 ದಿನಗಳ ನಂತರ ರಾಜ್ಯದ ಸ್ಥಾನಮಾನ ಕಳೆದುಕೊಂಡಿದೆ.

ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳನ್ನು ಲೆಫ್ಟಿನೆಂಟ್ ಗವರ್ನರ್ ಗಳಾದ ಜಿಸಿ ಮುರ್ಮು ಮತ್ತು ಆರ್ ಕೆ ಮಾಥುರ್ ನೋಡಿಕೊಳ್ಳಲಿದ್ದಾರೆ. ಅವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 

 

ಇಂದು ಲೆಫ್ಟಿನೆಂಟ್ ಮಾಥೂರ್ ಅವರು ಲೇಹ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಲೆಫ್ಟಿನೆಂಟ್ ಗವರ್ನರ್ ಮುರ್ಮು ಶ್ರೀನಗರದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಇಂದಿನಿಂದ ಜಮ್ಮು-ಕಾಶ್ಮೀರದ ಸಂವಿಧಾನ ಮತ್ತು ರಂಬೀರ್ ದಂಡ ಸಂಹಿತೆ ರದ್ದಾಗಲಿದೆ.

ಆಗಸ್ಟ್ 5 ರಂದು ಘೋಷಣೆ

ಆಗಸ್ಟ್ 5 ರಂದು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡೂ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು.

ಪ್ರಯೋಜನವೇನು?

ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಧ್ವಜವನ್ನು ಹೊಂದುವಂತಿಲ್ಲ. ಜೊತೆಗೆ ದೇಶದ ಯಾವುದೇ ಭಾಗದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಯಾವುದೇ ಕಟ್ಟುಪಾಡುಗಳಿರುವುದಿಲ್ಲ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುವುದಕ್ಕೂ ಅಡ್ಡಿಯಿರುವುದಿಲ್ಲ. ಜೊತೆಗೆ ಮಿಕ್ಕೆಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತಿದ್ದ ಕೇಂದ್ರ ಸರ್ಕಾರದ ನಿರ್ಣಯಗಳು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಗಳಿಗೂ ಅನ್ವಯವಾಗಲಿದೆ.

ಪಟೇಲ್ ಜನ್ಮದಿನದಂದೇ ಜಾರಿ!

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವಾದ ಇಂದು ಏಕತಾ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ದಿನವನ್ನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ್ದ ಸರ್ಕಾರದ ಕ್ರಮವನ್ನು ಜಾರಿಗೆ ತರಲಾಗುತ್ತಿದೆ.

ಪಟೇಲ್ ಜನ್ಮದಿನದಂದೇ ಏಕೆ?

ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರು ಪ್ರತ್ಯೇಕವಾಗಿ ಹಂಚಿಹೋಗಿದ್ದ 560 ಪ್ರಾಂತ್ಯಗಳನ್ನು ಒಂದುಗೂಡಿಸಿ ‘ಏಕ ಭಾರತ’ದ ಪರಿಕಲ್ಪನೆಯನ್ನು ಪರಿಚಯಿಸಿದ್ದರು. ಆ ಕಾರಣದಿಂದಲೇ ಭಾರತದಲ್ಲೇ ಇದ್ದರೂ ಭಾರತದ ಭಾಗವಾಗಿರದಂತೆ ಇದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿ, ಅದನ್ನೂ ಮಿಕ್ಕೆಲ್ಲ ರಾಜ್ಯಗಳಂತೇ ನೋಡಲು ಸರ್ಕಾರ ಮುಂದಾಗಿದ್ದು, ಆ ದಿನಕ್ಕೆ ಅವರ ಜನ್ಮದಿನದಂದೇ ಮುಹೂರ್ತ ನಿಗದಿ ಮಾಡಲಾಗಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.