ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಏ.16;
ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಕಚೇರಿಗೆ ಗಾರ್ಗಿಜೈನ್ ಬೀಗ ಜಡಿದಿದ್ದಾರೆ.
ನಗರದ ಪಟೇಲ್‌ನಗರದಲ್ಲಿರುವ ಮಾಜಿ ಶಾಸಕ ಮತ್ತು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಕಚೇರಿ ಮೇಲೆ ನಿನ್ನೆ ಸಂಜೆ ಚುನಾವಣಾಧಿಕಾರಿ ಗಾರ್ಗಿ ಜೈನ್ ದಾಳಿ ನಡೆಸಿ, ಕೆಲ ಡೈರಿ, ಪುಸ್ತಕ, ನೋಟ್‍ಬುಕ್, ಪಕ್ಷದ ಬಾವುಟಗಳು, ಭಿತ್ತಿಪತ್ರಗಳು, ಸ್ಪೀಕರ್ ಗಳನ್ನು ವಶಪಡಿಸಿಕೊಂಡಿದ್ದು, ಕಚೇರಿಗೆ ಬೀಗ ಜಡಿದಿದ್ದಾರೆ.
ಚುನಾವಣೆ ಆಯೋಗ ಹೊರಡಿಸಿದ ಮಾದರಿ ನೀತಿ ಸಂಹಿತೆಯನ್ವಯ ಮತಗಟ್ಟೆಯ 200 ಮೀಟರ್ ಅಂತರದಲ್ಲಿ ಯಾವುದೇ ಪಕ್ಷದ ಕಚೇರಿ ಕಾರ್ಯ ನಿರ್ವಹಿಸುವಂತಿಲ್ಲ. ಆದರೆ ಆನಂದಸಿಂಗ್ ಕಚೇರಿ ಮತಗಟ್ಟೆ ಕೇಂದ್ರಕ್ಕೆ 116 ಮೀಟರ್ ವ್ಯಾಪ್ತಿಯಲ್ಲಿ ಇರುವ ಕಾರಣ ಗಾರ್ಗಿ ಜೈನ್, ದಾಳಿ ನಡೆಸಿ, ಕಚೇರಿಗೆ ಬೀಗ ಜಡಿದಿದ್ದಾರೆ.
ಆನಂದ್ ಸಿಂಗ್, ಕೆಲವು ದಿನಗಳ ಹಿಂದೆ ಪಕ್ಷದ ಚಟುವಟಿಕೆ ನಡೆಸುವುದಕ್ಕೆ ಅನುಮತಿ ಕೋರಿ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು. ಪತ್ರಕ್ಕೆ ಹಿಂಬರ ನೀಡಿದ್ದ ಚುನಾವಣಾಧಿಕಾರಿ ನಿಯಮವನ್ನು ಪರಿಶೀಲಿಸಿ, ಕಚೇರಿ ಕಾರ್ಯ ನಿರ್ವಹಿಸಲು ಅನುಮತಿ ಕೊಡಲು ಬರುವುದಿಲ್ಲ ಎಂದು ಏ.13 ರಂದು ತಿಳಿಸಿದ್ದರು.
ಆದರೂ ಅವರು ಕಾನೂನು ಮೀರಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಚುನಾವಣಾಧಿಕಾರಿ ಗಾರ್ಗಿ ಜೈನ್ ದಾಳಿ ನಡೆಸಿ, ಕಚೇರಿಗೆ ಬೀಗ ಜಡಿದಿದ್ದಾರೆ. ಈ ಕುರಿತು ನೀತಿ ಸಂಹಿತೆ ಉಲ್ಲಂಘನೆಯಡಿ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಮೇ.18 ರವರೆಗೆ ಕಚೇರಿಯ ವಿದ್ಯುತ್ ಕಡಿತಗೊಳಿಸಲು ಜೆಸ್ಕಾಂ ಇಲಾಖೆಗೆ, ನೀರು ಕಡಿತಗೊಳಿಸಲು ಮುನಿಸಿಪಾಲಿಟಿಗೆ ಗಾರ್ಗಿ ಜೈನ್ ಆದೇಶ ನೀಡಿದ್ದಾರೆ.
ಈ ವೇಳೆ ಸ್ಥಳದಲ್ಲಿಯೇ ಇದ್ದ ಆನಂದ್ ಸಿಂಗ್, ನಾವಿಲ್ಲಿ ಯಾವುದೇ ಪಕ್ಷದ ಚಿಹ್ನೆಯಡಿ ಸೇರಿಲ್ಲ. ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಬಂದಿದ್ದು, ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳು ಇಲ್ಲಿ ನಡೆದಿಲ್ಲ ಎಂದು ಗಾರ್ಗಿ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.