ಕೆ.ಎನ್.ಪಿ.ವಾರ್ತೆ,ಲೇಖನ;
ಮಹಿಳಾ ದಿನಾಚರಣೆಯ ಶುಭಾಶಯಗಳು
ಹೆಣ್ಣೆಂದರೆ ದೀಪವೋ ಬೆಂಕಿಯಲ್ಲ ಬೆಳಕು….ಅಂತರಾಷ್ಟ್ರೀಯ ಮಹಿಳಾ ದಿನವೆಂಬುದು ಮಹಿಳೆಯರ ಶಕ್ತಿ ಸಾಮರ್ಥ್ಯ, ತ್ಯಾಗ ಬಲಿದಾನಗಳ ಬಗ್ಗೆ ಹಾಡಿ ಹೊಗಳಲು ಮತ್ತೊಂದು ವಿಶೇಷ ದಿನ. ಈ ದಿನದಂದು ಸಾಧಾರಣವಾಗಿ ಪುರುಷರು ಮಹಿಳೆಯರಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಾರೆ.
ಹೆಣ್ಣು ಮನೆಯ ಕಣ್ಣು, ಹೆಣ್ಣಿಂದಲೆ ಮನೆಯ ಬೆಳಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಎಂಬ ಹೆಗ್ಗಳಿಕೆಗಳು ಮಹಿಳೆಯರಿಗೆ ಸೇರುತ್ತವೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಹೆಣ್ಣು ನಿರ್ವಹಿಸುವ ಪಾತ್ರಗಳು ಹಲವು. ಗಂಡು ಅವಳಿಗೆ ಸಮಾನನಲ್ಲ, ಹೆಣ್ಣೇ ಗಂಡಿಗಿಂತ ಬಲಶಾಲಿ ಎಂಬ ಮಾತು ಸುಳ್ಳಲ್ಲ. ಇದು ಸೃಷ್ಟಿ ಹೆಣ್ಣಿಗೆ ಕೊಟ್ಟ ಶಕ್ತಿ.
ನಮ್ಮ ಜನ್ಮದಾತೆ ತಾಯಿ, ನಮ್ಮ ತಪ್ಪುಗಳನ್ನು ತಿದ್ದುತ್ತಾ ಚೇಷ್ಟಿಸುತ್ತಾ ನಮ್ಮ ಜೊತೆ ಬೆಳೆಯುವ ಅಕ್ಕ, ತಂಗಿ, ನಮ್ಮನ್ನೂ ಕೊನೆಯವರೆಗೆ ಪೋಷಿಸುವ ಸಂಗಾತಿ ಹೀಗೆ ಹತ್ತು ಹಲವು ಮಾರ್ಗ ರೂಪಿಯಾಗಿರುವ ಹೆಣ್ಣಿನ ಕಾರ್ಯ ವರ್ಣಿಸಲೂ ಅಸಾಧ್ಯ.
ಹೆಣ್ಣೆಂದರೆ ಭೋಗದ ವಸ್ತುವಲ್ಲ, ಸಮಾಜ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಹೆಣ್ಣು ಸದ್ಯದ ದಿನಮಾನದಲ್ಲಿ ಪುರುಷರ ಸಮಾನ ನಿಂತಿದ್ದಾಳೆ. ಸಾಂಸ್ಕೃತಿಕ, ರಾಜಕೀಯ, ಸಂಗೀತ, ಕಲೆ, ಚಲನಚಿತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣಿನ ಸಾಧನೆ ಮುಂದುವರೆದಿದೆ.
ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ. ಹೆಣ್ಣು, ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಹೆಣ್ಣು, ಕಷ್ಟ ಎದುರಾದರೆ ಗೊಳೋ ಎಂದು ಅಳುವ ಅಳುಮುಂಜಿಯಾಗಿಲ್ಲ. ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ಆಗಿದ್ದಾಳೆ.
ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಆದರೆ ಹೆಣ್ಣಿನ ಬದುಕು ಅಂದರೆ ಅದು ಕೇವಲ ನೋವುಗಳ ಸಂಕಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ. ಬಹುತೇಕ ಪ್ರಮುಖ ಹುದ್ದೆಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ರಾರಾಜಿಸುತ್ತಿದ್ದಾಳೆ.
ಇವತ್ತು ಮಹಿಳೆ ಉತ್ತಮ ಶಿಕ್ಷಣ ಪಡೆಯುತ್ತಿದ್ದಾಳೆ. ಒಳಮನೆ ಮಾತ್ರವೇ ಅಲ್ಲ ಹೊರ ಜಗತ್ತಿನ ಅರಿವೂ ಆಕೆಗೆ ಆಗಿದೆ. ಯಾರನ್ನು ಹೇಗೆ ಎಲ್ಲಿ ನಿಭಾಯಿಸಬೇಕೆಂಬ ಕಲೆಯೂ ಕರಗತವಾಗಿದೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತಾಳ್ಮೆ ಮತ್ತು ಚಾಕಚಕ್ಯತೆ ಆಕೆಯ ರಕ್ತದಲ್ಲೇ ಇದೆ. ಅದಕ್ಕೀಗ ವೇದಿಕೆ ದೊರಕುತ್ತಿದೆಯಷ್ಟೆ.
ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು. ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ತತ್ರ ದೇವತಾಃ’ ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು, ಅದನ್ನು ಆಚರಣೆಗೆ ತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ. ಹೀಗಾದಲ್ಲಿ ಮಾತ್ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣ.
ನಮ್ಮ ಕೆ.ಎನ್.ಪಿ. ಪತ್ರಿಕೆಯ ಪರವಾಗಿ ಮಹಿಳೆಯರಿಗೆಲ್ಲರಿಗೂ “ಮಹಿಳಾ ದಿನಾಚರಣೆಯ ಶುಭಾಶಯಗಳು”