ಕೆ.ಎನ್.ಪಿ.ವಾರ್ತೆ,ಡನಾಂಗ್,ನ.08;
ವಿಯೆಟ್ನಾಂನ ದಕ್ಷಿಣ-ಮಧ್ಯ ಕರಾವಳಿಯಲ್ಲಿ ಭೀಕರ ಚಂಡಮಾರುತ ಮತ್ತು ಭಾರೀ ಮಳೆಯಿಂದಾಗಿ ಸತ್ತವರ ಸಂಖ್ಯೆ 70ಕ್ಕೇರಿದೆ.
ಇತ್ತೀಚೆಗೆ ವಿಯೆಟ್ನಾಂನ ಕೆಲವು ಪ್ರಾಂತ್ಯಗಳ ಮೇಲೆ ‘ಡ್ರಾಮೆ’ ಎಂಬ ವಿನಾಶಕಾರಿ ಚಂಡಮಾರುತ ಅಪ್ಪಳಿಸಿತ್ತು. ಅದರ ಪರಿಣಾಮವಾಗಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಿಂದಾಗಿ ಪ್ರವಾಹವುಂಟಾಗಿ ಸಾವು-ನೋವು ಸಂಭವಿಸಿತ್ತು. ಈವರೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣೆ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆ ಹಾವಳಿಯಿಂದ 100ಕ್ಕೂ ಅಧಿಕ ಮನೆಗಳು ಸಂಪೂರ್ಣ ನಾಶವಾಗಿದ್ದು, ನೂರಾರು ವಸತಿಗೃಹಗಳಿಗೆ ಹಾನಿಯಾಗಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ವಾರ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ಶೃಂಗಸಭೆಗೆ ವಿಯೆಟ್ನಾಂ ಅತಿಥ್ಯ ವಹಿಸಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಇತರ ವಿಶ್ವನಾಯಕರು ಭಾಗವಹಿಸಲಿದ್ದಾರೆ.