ಕೆ.ಎನ್.ಪಿ.ವಾರ್ತೆ,ಕಲಬುರಗಿ,ಮಾ.08;

ಲೋಕಾಯುಕ್ತ ಕಛೇರಿಗೆ ಪಾರ್ಲಿಮೆಂಟ್ ಮಾದರಿಯಲ್ಲಿ ಭದ್ರತೆ ಒದಗಿಸುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಲೋಕಾಯುಕ್ತ ಕಚೇರಿಗೆ ಪಾರ್ಲಿಮೆಂಟ್ ರೀತಿಯ ಭದ್ರತೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದ್ದು, ಕೂಡಲೇ ಯೋಜನೆಯನ್ನು ಜಾರಿಗೊಳಿಸಲಾಗುವುದು. ಲೋಕಾಯುಕ್ತರಿಗೆ ಚೂರಿ ಇರಿದಿರುವ ಆರೋಪಿ ತೇಜರಾಜ್ ಶರ್ಮಾ ಈ ಮೊದಲೂ ಲೋಕಾಯುಕ್ತರೊಂದಿಗೆ ಜಗಳ ಮಾಡಿದ್ದ. ಲೋಕಾಯುಕ್ತರ ಒಳ್ಳೆಯತನವನ್ನೇ ದುರುಪಯೋಗ ಮಾಡಿಕೊಂಡಿದ್ದಾನೆ. ಲೋಕಾಯುಕ್ತರು ಮೊದಲೇ ಹೆಚ್ಚಿನ ಭದ್ರತೆ ಕೇಳಿದ್ದರೆ ಕಲ್ಪಿಸಬಹುದಿತ್ತು ಎಂದರು.

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆ ಹಾಡುಹಗಲೇ ನಡೆದ ಕೊಲೆ ಯತ್ನ ಘಟನೆಯ ತೀವ್ರ ಜವಾಬ್ದಾರಿ ಹೊತ್ತು ಗೃಹಸಚಿವರು ರಾಜೀನಾಮೆ ನೀಡಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯವನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಳ್ಳಿಹಾಕಿದ್ದು, ಮೆಟಲ್ ಡಿಟೆಕ್ಟರ್ ದೋಷದಿಂದ ಚೂರಿ ಪತ್ತೆಯಾಗಲಿಲ್ಲ. ಆರೋಪಿಯನ್ನು ಕೂಡಲೇ ಬಂಧಿಸಲಾಗಿದೆ, ಭದ್ರತಾ ಲೋಪದ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.