ಕೆ.ಎನ್.ಪಿ.ಮಹಿಳಾಲೋಕ;

“ಸ್ತ್ರೀಣಾಂ ಬುದ್ದಿಸ್ತಾಸಾಂ ಚತುರ್ಗುಣ”

ಸ್ತ್ರೀ ಬುದ್ದಿಶಕ್ತಿ ಪುರುಷರಿಗಿಂತ  ನಾಲ್ಕುಪಟ್ಟು  ಹೆಚ್ಚು ಎಂಬ ಮಾತಿದೆ. ಅದೆ ರೀತಿಯಲ್ಲಿ ಸಾಧನೆ ಮಾಡುವ ಛಲವು ಬಲಿಷ್ಟವಾಗಿಯೇ ಇದೆ. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೆ ಮುನ್ನುಡಿಯಾಗಲೆಂದು ಕೆ.ಎನ್.ಪಿ  “ಮಹಿಳಾ ಸಾಧಕರನ್ನು ಪರಿಚಯಿಸುವ ನೂತನ ಪ್ರಯತ್ನವನ್ನು ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕಿಯರ ಕುರಿತಾದ ಮಾಹಿತಿಯನ್ನು “ಮಹಿಳಾ ಸಾಧಕರು” ಎಂಬ ವಿಭಾಗದಲ್ಲಿ ನೀಡಲಾಗುತ್ತದೆ. ಯಶಸ್ಸನ್ನು ಗಳಿಸಲಿಚ್ಚಿಸುವ  ವ್ಯಕ್ತಿಗಳಿಗೆ ಸಾಧಕಿಯರ ಬದುಕು ಆದರ್ಶವಾಗಿರಲಿ ಮತ್ತು ಮಾರ್ಗದರ್ಶನವಾಗಲಿ.

ಸಾಧನೆ ಎಂಬುದು ಸುಲಭವಾಗಿ ದೊರಕುವಂತದಲ್ಲ ಮತ್ತು ಒಮ್ಮೆ ಮಾಡಿ ಬಿಡುವಂತಹದು ಅಲ್ಲ. ಜೀವನದಲ್ಲಿ ಸಾವಿರ ಸೋಲುಗಳನ್ನು ಎದುರಿಸಿದಾಗಲೇ ಒಂದು ಯಶಸ್ಸನ್ನು ಸಾಧಿಸಲು ಸಾಧ್ಯ. ಇಂದಿನ ಈ ಮಹಿಳಾ ಸಾಧಕಿಯೂ ಯಶಸ್ಸನ್ನು ಸಾಧಿಸಿರುವುದು ಹಲವು ಕಷ್ಟಗಳನ್ನು ಎದುರಿಸಿಯೆ. ಹೌದು ನಿಮಗೆಲ್ಲಾ ತಿಳಿದ ಸಾಲುಮರದ ತಿಮ್ಮಕ್ಕ  ವೃಕ್ಷಮಾತೆ ಎಂದು ಖ್ಯಾತಿ ಹೊಂದಿದ ಭಾರತೀಯ ಪರಿಸರವಾದಿ. ಇವರ ಜೀವನದ ಮಜಲುಗಳು ಮತ್ತು ಸಾಧಕಿಯಾದ  ಪಯಣವನ್ನೇ ಇಂದು ನಾವು ತಿಳಿಯೋಣ.

ರಾಷ್ಟ್ರ ಪೌರ ಪ್ರಶಸ್ತಿ ಪುರಸ್ಕೃತೆ  ಸಾಲುಮರದ ತಿಮ್ಮಕ್ಕ ಹುಟ್ಟಿದ್ದು  ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ  ಹುಲಿಕಲ್ ಗ್ರಾಮದಲ್ಲಿ. ಕಡು ಬಡತನವನ್ನು ಎದುರಿಸಲು  ದಿನಗೂಲಿ ನೌಕರಳಾಗಿ ಶ್ರಮಿಸಿದಾಕೆ. ಬಿಕ್ಕಲ ಚಿಕ್ಕಯ್ಯ ಎಂಬ ದನಕಾಯುವವನನ್ನು ಮದುವೆಯಾಗಿ 25ವರ್ಷಗಳಾದರೂ ಸಂತಾನ ಭಾಗ್ಯ ಪಡೆಯದಾಗ ಪರಿಸರವನ್ನೇ ತನ್ನ ಕೂಸಾಗಿ ಬೆಳಸಿದಾಕೆ. ಮದುವೆಯಾಗಿ ಕಡುಬಡತನದಲ್ಲಿದ್ದರೂ ತಿಮ್ಮಕ್ಕ ದಂಪತಿ  ಎದೆಗುಂದದೆ ,ಯಾವದೇ ಫಲಾಪೇಕ್ಷೆಯಿಲ್ಲದ ಪರಿಸರ ಸ್ನೇಹಿಗಳಾದವರು. ಈ ಕಾಲದಲ್ಲಿ  ಬೂಟಾಟಿಕೆಗಾಗಿ ಪರಿಸರ ದಿನದಂದು ಮಾತ್ರ ಗಿಡನೆಟ್ಟು  ಸುದ್ದಿ ಮಾಡಿಕೊಳ್ಳುವ ಜನರ ಗುಂಪಿಗೆ ಸೇರದ ವಿಶಿಷ್ಟ ವ್ಯಕ್ತಿಗಳಿವರು.

ಈ ಇಳಿ ವಯಸ್ಸಿನಲ್ಲೂ  ಪರಿಸರ ಸಂರಕ್ಷಣೆಗೆ ಪಣ ತೊಟ್ಟು ನಿಲ್ಲುವ ತಿಮ್ಮಕ್ಕ ; ಮಾಡಿರುವ ಕಾರ್ಯ ಶ್ಲಾಘನೀಯವಾದುದು. ಆ ಕಾಲದಿಂದಲೇ ಪರಿಸರ ಪ್ರಜ್ಞೆ ಹೊಂದಿದ್ದ ಈ ಹಿರಿ ಜೀವ, ಕೂದೂರು ಮತ್ತು ಹುಲಿಕಲ್ ರಾಜ್ಯಹೆದ್ದಾರಿ 94ರಲ್ಲಿ ಸುಮಾರು 384ಕ್ಕೂ ಅಧಿಕ  ಆಲದಮರವನ್ನು ಬೆಳೆಸಿದ್ದಾರೆ. ಆಲದ ಸಸಿಗಳಿಗೆ ನೀರುಣಿಸಲೆಂದು  ತಿಮ್ಮಕ್ಕ ಮತ್ತು ಅವರ ಪತಿ 4ಕಿ.ಮೀ. ದೂರದಿಂದ  ಬಿಂದಿಗೆಯಲ್ಲಿ ತರುತ್ತಿದ್ದರಂತೆ. ಪ್ರಾಣಿಗಳು  ಸಸಿಗಳನ್ನು ನಾಶಮಾಡದಿರಲು  ಮುಳ್ಳುಪೊದೆಗಳನ್ನು ನಿರ್ಮಿಸುತಿದ್ದರಂತೆ. ಆಲದ ಗಿಡಗಳ ಪಾಲನೆ ಪೋಷಣೆ ಮಾಡಿ  ನೆಮ್ಮದಿ ಕಂಡುಕೊಳ್ಳುತ್ತಿದ್ದರಂತೆ.  ಪರಿಸರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ  ತನ್ನ  ಮಕ್ಕಳಂತೆ  ಸಲಹುತ್ತಿರುವ ತಿಮ್ಮಕ್ಕ ತಾನು ಬಡವಳಾಗಿದ್ದರೂ ನಿಸರ್ಗವನ್ನು ಸಿರಿತನದಿಂದ ತುಂಬಿದ ಮಹಾತಾಯಿ.

ಸುಮಾರು ಏಳು ದಶಕಗಳಿಗೂ ಅಧಿಕ ಕಾಲದಿಂದಲೂ ಪರಿಸರ ಸೇವೆಯನ್ನೇ ಮಾಡುತ್ತ ಬಂದಿರುವ ತಿಮ್ಮಕ್ಕ ಎಂದಿಗೂ ಪ್ರಚಾರ- ಪ್ರಶಸ್ತಿಗಳನ್ನು ಬಯಸಿದವರಲ್ಲ. ಒಮ್ಮೆ ಮಂತ್ರಿಯಾದ ಶಾಮನೂರು ಶಿವಶಂಕರಪ್ಪ  ಮಾಗಡಿಯಿಂದ ಕನಕಪುರ ಹೋಗುವಾಗ  ತಿಮ್ಮಕ್ಕ ನೆಟ್ಟು ಬೆಳೆಸಿದ್ದ ಆಲದ  ಮರಗಳ  ನೆರಳಡಿ ವಿಶ್ರಾಂತಿ ಪಡೆದಿದ್ದರು. ಅಲ್ಲಿನ ವಾತಾವರಣವನ್ನು ಕಂಡು ಬೆರಗಾಗಿದ್ದ ಶಂಕರಪ್ಪ ಗ್ರಾಮಸ್ಥನನ್ನು ಕರೆದು  ಯಾವ ಮಂಡಲಪಂಚಾಯತ್  ಈ ಕಾರ್ಯವನ್ನು ಮಾಡಿದ್ದು ಎಂದು ವಿಚಾರಿಸಿದಾಗ ; ತಿಮ್ಮಕ್ಕನ  ನಿಸ್ವಾರ್ಥ ಸೇವೆಯನ್ನು  ತಿಳಿದು ಆಶ್ಚರ್ಯ ಚಕಿತರಾಗಿದ್ದರು.

ಒಂದು ಸಮಾರಂಭದಲ್ಲಿ  ತಿಮ್ಮಕ್ಕನ ಕುರಿತು ಪ್ರಸ್ತಾಪಿಸಿದಾಗ ; ಆಗಿನ ಪ್ರಧಾನಿಯಾಗಿದ್ದ ಹೆಚ್.ಡಿ. ದೇವೆಗೌಡರು ತಿಮ್ಮಕ್ಕನಿಗೆ  ರಾಷ್ಟ್ರೀಯ ಪ್ರಶಸ್ತಿ  ನೀಡಿ ಗೌರವಿಸಿದರು. ಈ ಘಟನೆ ಸಾಲುಮರದ ತಿಮ್ಮಕ್ಕ  ವಿಶ್ವವ್ಯಾಪಿ  ಪ್ರಸಿದ್ದಿಯಾಗಲು ಕಾರಣವಾಯಿತು. ನಂತರದಲ್ಲಿ ರಾಷ್ಟ್ರ ಮತ್ತು ರಾಜ್ಯ  ಪಠ್ಯಕ್ರಮಗಳಲ್ಲಿ ತಿಮ್ಮಕ್ಕ ಅವರ ಜೀವನ ಮತ್ತು ಸೇವೆಯನ್ನು ಪಠ್ಯವನ್ನಾಗಿ ಸೇರಿಸಲಾಯಿತು. 2014ರ ಬಜೆಟ್ ನಲ್ಲಿ ರಾಜ್ಯಸರ್ಕಾರ “ಸಾಲುಮರದ ತಿಮ್ಮಕ್ಕ ನೆರಳು ಯೋಜನೆಯನ್ನು” ಪ್ರಕಟಿಸಿತು. ಅಲ್ಲಿಂದಲೇ ಸರ್ಕಾರವು ಪರಿಸರವನ್ನು  ಉಳಿಸಿ ಬೆಳೆಸುವ  ವಿದ್ಯುಕ್ತ ಕಾಯಕವನ್ನು ಶುರುಮಾಡಿತು.

ಸಾಲುಮರದ ತಿಮ್ಮಕ್ಕ ಅವರಿಗೆ 2016ರಲ್ಲಿ ಮೊದಲ 100ಬಿಬಿಸಿ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ನೀಡಿ ಗೌರವಿಸಲಾಯಿತು.  ಇಷ್ಟೆಲ್ಲಾ ಪ್ರಶಸ್ತಿಗಳು ತನ್ನ  ಮಡಿಲು ಸೇರಿದ್ದರೂ ; ತಿಮ್ಮಕ್ಕ  ಇಂದಿಗೂ ಸರ್ಕಾರ ಕೊಡುವ 500ರೂ.ಗಳ ವೃದ್ದಾಪ್ಯ ವೇತನದಲ್ಲೇ  ಜೀವನ ಸಾಗಿಸುತ್ತಿದ್ದಾರೆ. 105ವರ್ಷಗಳಾದರೂ ಪರಿಸರ ಕಾಯಕದ ಜೊತೆ  ಸಮಾಜಸೇವೆಯಲ್ಲಿ ತೊಡಗಿರುವ ತಿಮ್ಮಕ್ಕ ನೀರು ಸಂಗ್ರಹಣೆ,  ತನ್ನ ಊರಿಗೆ ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಡುವ  ಗುರಿಯನ್ನಿಟ್ಟುಕೊಂಡಿದ್ದಾರೆ.

ಇಂದು ಸಾಲುಮರದ ತಿಮ್ಮಕ್ಕ ಬೆಳೆಸಿದ ಮರಗಳು ಸಹಸ್ರ ಕೋಟಿ  ಬೆಲೆಬಾಳುತ್ತವೆ. ಆದರೂ  ಸರಳ ಜೀವನವನ್ನು ಅಳವಡಿಸಿಕೊಂಡಿರುವ ವಿಶೇಷ ವ್ಯಕ್ತಿತ್ವ ಅವರದು. ಈ ಮಾತೆಗೆ ಕವನಗಳ ಮೂಲಕ ಗೊಲ್ಲಹಳ್ಳಿ ಶಿವಪ್ರಸಾದ್,  ಹೆಚ್.ಎಲ್ ಪುಷ್ಪ  ಅನೇಕರು  ನಮಿಸಿದ್ದಾರೆ.

ತಿಮ್ಮಕ್ಕ ಅವರಿಗೆ ಸಂದ ಪ್ರಶಸ್ತಿಗಳು :-

1995ರಲ್ಲಿ  ರಾಷ್ಟ್ರೀಯ ಪ್ರಶಸ್ತಿ.

1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಮತ್ತು ವೀರ ಚಕ್ರ ಪ್ರಶಸ್ತಿ.

ಮಹಿಳಾ  ಮತ್ತು ಶಿಶುಕಲ್ಯಾಣ ಇಲಾಖೆಯ ಮಾನ್ಯತಾ ಪತ್ರ.

ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರು ಶ್ಲಾಘನೆ ಪತ್ರ.

2000ದಲ್ಲಿ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ.

2006ಗಾಡ್ ಫ್ರೀ ಫಿಲಿಪ್ಸ್ ಪ್ರಶಸ್ತಿ.

ಪಂಪಾಪತಿ ಪ್ರಶಸ್ತಿ, ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ,  ಶ್ರೀಮಾತಾ ಪ್ರಶಸ್ತಿ, ಹೆಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ,  ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ವಿಶಾಲಾಕ್ಷಿ ಪ್ರಶಸ್ತಿ,  2010ರಲ್ಲಿ ನಾಡೋಜ ಪ್ರಶಸ್ತಿ,  2015ರಲ್ಲಿ ಹೂವಿನಹೊಳೆ ಪ್ರತಿಷ್ಠಾನದ ವಿಶ್ವಾತ್ಮ ಪುರಸ್ಕಾರ ಇಷ್ಟೆಲ್ಲಾ ಪ್ರಶಸ್ತಿ ಪುರಸ್ಕಾರಗಳು ತಿಮ್ಮಕ್ಕ ನವರಿಗೆ ಲಭಿಸಿವೆ.

ಇಂತಹ ಮಹಾನ್ ಸೇವೆಗೈದ ಸಾಲು ಮರದ ತಿಮ್ಮಕ್ಕ ನವರಿಗೆ ನಾವು ಮನೆಗೊಂದು ಸಸಿ ನೆಡುವ ಮೂಲಕ ಅವರ ಪರಿಸರ ಕಾಯಕಕ್ಕೆ ವಂದನೆ ಸಲ್ಲಿಸೋಣ. ಬಡತನದ ಮಧ್ಯೆಯೂ ಅರಳಿದ “ವನಸುಮ”ಕ್ಕೆ ಚಿರಋಣಿಯಾಗಿರೋಣ.

ಪರಿಸರವ ಸಲಹಿದಾಕೆಗೆ  ನನ್ನದೊಂದು ಸಲಾಂ…