ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.28;

ಫಸಲ್ ಬಿಮಾ ಯೋಜನೆಗೆ ಡಿ.31 ಕೊನೆಯ ದಿನ ರೈತರ ಗ್ರಾ.ಪಂ. ನಲ್ಲಿಯೆ ವಿಮಾ ಮೊತ್ತ ಭರಿಸಿ: ಡಿಸಿ ರಾಮ್ ಪ್ರಸಾತ್.

ಕರ್ನಾಟಕ ರೈತ ಸುರಕ್ಷಾ/ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹಿಂಗಾರು ಬೆಳೆಗಳಿಗೆ ವಿಮಾ ಕಂತು ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ರೈತರಿಗೆ ಅನುಕೂಲವಾಗುವಂತೆ ಮತ್ತು ವಿಮಾ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯತಿಯಲ್ಲಿಯೇ ವಿಮಾ ಮೊತ್ತವನ್ನು ಭರಿಸಿಕೊಳ್ಳಲು ಮತ್ತು ಅರ್ಜಿಯನ್ನು ಭರ್ತಿ ಮಾಡಿಸಿಕೊಳ್ಳಲು ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

ಕರ್ನಾಟಕ ರೈತ ಸುರಕ್ಷಾ/ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹಿಂಗಾರು ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಡಿ.31 ಕೊನೆಯ ದಿನವಾಗಿದೆ. ವಿಮಾ ಕಂತು ಪಾವತಿಸಲು ಅಂತಿಮ ದಿನಾಂಕ ಸಮೀಪಿಸುತ್ತಿರುವುದರಿಂದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯ ರೈತರು ಸಂಬಂದಿಸಿದ ಗ್ರಾಮ ಪಂಚಾಯತಿಯಲ್ಲಿಯೇ ಅರ್ಜಿ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿರುವ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಅವರು, ರೈತರು ತಮ್ಮ ವಿಮಾ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್‍ಗಳ ನಕಲು ಪ್ರತಿ(ಜಿರಾಕ್ಸ್ ಪ್ರತಿ)ಗಳೊಂದಿಗೆ ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

ಆದ್ದರಿಂದ ರೈತ ಭಾಂದವರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ವಿಮಾ ಅರ್ಜಿಯನ್ನು ತುಂಬಿ ನೊಂದಣಿ ಮತ್ತು ವಿಮಾ ಕಂತು ಪಾವತಿಸಿ, ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಕರ್ನಾಟಕ ರೈತ ಸುರಕ್ಷಾ/ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ನೊಂದಣಿ ಮಾಡಿಕೊಳ್ಳುವ ರೈತರಿಗೆ ಸಹಕರಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾದಿಕಾರಿಗಳು ಎಚ್ಚರಿಸಿದ್ದಾರೆ.

ಕರ್ನಾಟಕ ರೈತ ಸುರಕ್ಷಾ/ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ನೊಂದಣಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಏನಾದ್ರೂ ಸಮಸ್ಯೆ ಮತ್ತು ದೂರುಗಳಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ ಮತ್ತು ತಾಲೂಕುಗಳಲ್ಲಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ಮನವಿ ಮಾಡಿದ್ದಾರೆ.

ಪಿಕೆಜಿಬಿ ಬ್ಯಾಂಕ್‍ಗೆ ಭೇಟಿ ಪರಿಶೀಲನೆ:

ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ನಗರದ ಗಾಂಧಿನಗರ ಬಡಾವಣೆಯಲ್ಲಿರುವ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಶಾಖೆಗೆ ಸೋಮವಾರ ಭೇಟಿ ನೀಡಿ ಕರ್ನಾಟಕ ರೈತ ಸುರಕ್ಷಾ/ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹಿಂಗಾರು ಬೆಳೆಗಳಿಗೆ ವಿಮಾ ಕಂತು ಪಾವತಿ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಅವರು, ರೈತರಿಗೆ ಅನಗತ್ಯ ತೊಂದರೆ ಮಾಡಬೇಡಿ ಎಂದು ಬ್ಯಾಂಕ್ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ವಾಜಂತ್ರಿ, ಗಂಗಾಧರಪ್ಪ ಹಾಗೂ ಇನ್ನೀತರ ಅಧಿಕಾರಿಗಳು ಇದ್ದರು.

ವರದಿ: ಟಿ.ಗಣೇಶ.