ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.06;
ನಟ ಉಪೇಂದ್ರ ಕೆಪಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದು, ಹೊಸ ಪಕ್ಷ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.
ಕೆಪಿಜೆಪಿ ಸ್ಥಾಪಕ ಮಹೇಶ್ ಗೌಡ ಅವರ ಜೊತೆ ಭಿನ್ನಮತ ಉಂಟಾದ ಹಿನ್ನಲೆಯಲ್ಲಿ ನಟ ಉಪೇಂದ್ರ ಕೆಪಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದು, ಹೊಸ ಪಕ್ಷ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.
ನಗರದ ರುಪ್ಪೀಸ್ ರೆಸಾರ್ಟ್‍ನಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ನಟ ಉಪೇಂದ್ರ, ನಮಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಕೆಪಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದೇವೆ. ಈಗಾಗಲೇ ತಜ್ಞರ ಅಭಿಪ್ರಾಯ ಪಡೆಯಲಾಗಿದ್ದು, 45 ದಿನದಲ್ಲಿ ಹೊಸ ಪಕ್ಷ ರಚಿಸಬಹುದಾಗಿದೆ. ನಮ್ಮ ಬೆಂಬಲಿಗರೆಲ್ಲರೂ ಹೊಸ ಪಕ್ಷದ ಸದಸ್ಯತ್ವ ಪಡೆಯಲಿದ್ದು, ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ಹೇಳಿದರು.