ಕೆ.ಎನ್.ಪಿ.ವಾರ್ತೆ,ಬೆಳಗಾವಿ,ನ.23;

ಕೃಷಿ ಇಲಾಖೆಯಲ್ಲಿ ಖಾಲಿ ಇರುವ 607 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯ ಕೆ.ಪ್ರತಾಪ ಚಂದ್ರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ಇಲಾಖೆಯಲ್ಲಿ 607 ಹುದ್ದೆಗಳ ನೇಮಕಾತಿಗೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು. ಪದವಿ ಪೂರ್ಣಗೊಳಿಸಿರುವವರು ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯನ್ನು ನಡೆಸಲಿದೆ ಎಂದರು. ಇದು ನೇರ ಪರೀಕ್ಷೆ ಆಗಿದ್ದು ಮೆರಿಟ್ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಂಪೂರ್ಣವಾಗಿ ಪಾರದರ್ಶಕತೆಯಿಂದ ನೇಮಕಾತಿ ನಡೆಸಲಾಗುವುದು ಎಂದು ಹೇಳಿದರು.

ನೇಮಕಾತಿ ಪ್ರಕ್ರಿಯೆ ಮುಗಿದ ಮೇಲೆ ಯಾವ್ಯಾವ ಜಿಲ್ಲೆಯಲ್ಲಿ ಹುದ್ದೆಗಳು ಖಾಲಿ ಇವೆ ಎಂಬುದರ ಆಧಾರದಲ್ಲಿ ಆದ್ಯತೆ ನೀಡಲಾಗುವುದು. ಉಡುಪಿ ಜಿಲ್ಲೆ 140, ದಕ್ಷಿಣ ಕನ್ನಡ ಜಿಲ್ಲೆ 219 ಹುದ್ದೆಗಳು ಮಂಜೂರಾಗಿವೆ. ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆತ್ಮಾ ಯೋಜನೆಯಡಿ ರೈತರಿಗೆ ಕೃಷಿ ಉಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ ನೀಡಿ ನಾಟಿ, ಕಟಾವು ಕೆಲಸಗಳಿಗೆ ಅನುಕೂಲ ಕಲ್ಪಿಸಲಾಗಿದೆ. ರೈತರಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತದೆ ಎಂದರು. ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವುದರಿಂದ ಬೆಳೆ ಸಂರಕ್ಷಣೆಗೆ ಬಂದೂಕು ಪರವಾನಗಿ ನೀಡಬೇಕೆಂದ ಸದಸ್ಯರ ಮನವಿಗೆ ಉತ್ತರಿಸಿದ ಕೃಷ್ಣಬೈರೇಗೌಡ, ಗೃಹ ಮತ್ತು ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

(ಕೃಪೆ:ಈ ಸಂಜೆ)