ಕೆ.ಎನ್.ಪಿ.ವಾರ್ತೆ,ದಾವಣಗೆರೆ, ಫೆ.01;

ಹರಪನಹಳ್ಳಿ ತಾಲೂಕ್ ಉಚ್ಚಂಗಿದುರ್ಗದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಕಟ್ಟೆಚ್ಚರದಲ್ಲಿ ಭರತ ಹುಣ್ಣಿಮೆಯು ಸುರಕ್ಷಿತವಾಗಿ ನಡೆಯಿತು.

ಭಕ್ತರು ನಿನ್ನೆ ಗುಡ್ಡ ಹತ್ತುವಾಗ ಗಾಳಿ, ಬಿಸಿಲು, ಚಳಿ ಲೆಕ್ಕಿಸದೇ, ಹುಚ್ಚoಗೆಮ್ಮ ನೀನಾಲ್ಕು ಉಧೋ ಉಧೋ ಎಂಬ ಘೋಷಣೆಯನ್ನು ಕೂಗುತ್ತಾ ಗುಡ್ಡ ಹತ್ತಿದರು. ಒಂದು ದಿನ ಹುಚ್ಚoಗೆಮ್ಮನ ಸನ್ನಿಧಿಯಲ್ಲಿ ಉಳಿದುಕೊಂಡರೆ ಒಳ್ಳೆಯದು ಎಂಬ ನಂಬಿಕೆಯಿಂದ ಕೊರೆಯುವ ಚಳಿಯಲ್ಲೂ ಭಕ್ತರು ಸನ್ನಿಧಿಯಲ್ಲಿ ಉಳಿದುಕೊಂಡಿದ್ದರು.

ವಿಶೇಷ ಪೂಜೆ :

ಭರತ ಹುಣ್ಣಿಮೆಯ ಪ್ರಯುಕ್ತ  ದೇವಿಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಪೂಜೆಗಳು ನಡೆದವು.

ಚಂದ್ರ ಗ್ರಹಣ : 

ಚಂದ್ರಗ್ರಹಣವು ನಿನ್ನೆ 5:18 ರಿಂದ 8:42 ರ ವರೆಗೆ  ಇದ್ದಿದರಿಂದ ದೇವಸ್ಥಾನದ ಬಾಗಿಲನ್ನು ಗ್ರಹಣದ ವೇಳೆ ಮುಚ್ಚಲಾಗಿತ್ತು. ಗ್ರಹಣ ಮುಗಿದ ನಂತರ ದೇವಿಯ ಪೂಜೆ, ಮತ್ತು ಅಭಿಷೇಕವನ್ನು ಮಾಡಿ ಪುನಃ ದೇವಸ್ಥಾನದ ಬಾಗಿಲನ್ನು ತೆರೆಯಲಾಯಿತು. ಪ್ರತಿ ವರ್ಷ ಭರತ ಹುಣ್ಣಿಮೆಯ ದಿನ ದೇವಿಯ ಉತ್ಸವ ಮೂರ್ತಿಯು ರಾತ್ರಿ 8 ಘಂಟೆಗೆ ಹೋಗುತ್ತಿತ್ತು. ಆದರೆ ನಿನ್ನೆ ಚಂದ್ರ ಗ್ರಹಣ ಹಿಡಿದಿದ್ದ ಕಾರಣ ದೇವಿಯ ಉತ್ಸವವು 3:30ಕ್ಕೆ ಹೋಗಿ ಗ್ರಹಣದ ಪೂರ್ವದಲ್ಲಿಯೇ ದೇವಸ್ಥಾನ ಸೇರಿತು.

ಊರಿನ ವಿಶೇಷ :

ಒಂದು ವಾರಗಳ ಕಾಲ, ದೇವಿಯು ಅನೇಹೊಂಡಕ್ಕೆ ಹೋಗಿ ಬರುವಾಗ, ಹೆಣ್ಣುಮಕ್ಕಳು ವಿವಿಧ ದಾನ್ಯಗಳಿಂದ ಬೆಳೆದ ಬೆಳೆಗಳ ಆರತಿಯನ್ನು ದೇವಿಗೆ ಬೆಳಗುತ್ತಾರೆ.

ಕಟ್ಟೆಚ್ಚರ :

ಹುಣ್ಣಿಮೆಯ ಪ್ರಯುಕ್ತ ದೇವಿಯ ದರ್ಶನಕ್ಕೆಂದು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತಾಧಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದ್ದು, ಎಲ್ಲ ಕಡೆ, ಪೊಲೀಸ್ ಇಲಾಖೆ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ದೇವದಾಸಿ ಪುನರ್ವಸತಿ ಹಾಗೂ ಸ್ವಯo ಸೇವಕರು, ಅಂಗನವಾಡಿ ಕಾರ್ಯಕರ್ತರು ಬೀಡು ಬಿಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊoಡರು. ಅಲ್ಲದೆ 10 ಸಿಸಿ ಕ್ಯಾಮರಾ,  2 ಲೆಡ್ ಸ್ಕ್ರೀನ್ ಹಾಗೂ ಡ್ರೋನ್ ಬಳಸಿ ಎಲ್ಲ ಚಟುವಟಿಕೆಗಳ ಮೇಲೆ ಗಮನ ಇಟ್ಟಿದ್ದರು.

ಜಾಗೃತಿ ಮೂಡಿಸುವುದು :

ತಹಶಿಲ್ದಾರ್ ಹಾಗೂ ದೇವದಾಸಿ ಪುನರ್ವಸತಿ ಕೇಂದ್ರದ ವತಿಯಿಂದ ಜಡೆ ಕತ್ತರಿಸುವ ಮೂಲಕ ಜಾಗೃತಿ ಮೂಡಿಸುವಂತ ಕೆಲಸವನ್ನು ಮಾಡಲಾಯಿತು. ಈ ನಿಟ್ಟಿನಲ್ಲಿ  ನಾಲ್ಕು ವರ್ಷದ ಸುಮ ಹಾಗೂ ಸಿಂಧೂ ರವರಿಗೆ ಜಡೆಯನ್ನು ಕತ್ತರಿಸಲಾಯಿತು.

ಅಲ್ಲದೇ ಜಿಲ್ಲಾಡಳಿತ, ತಾಲೂಕಾಡಳಿತ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ದೇವದಾಸಿ ಪುನರ್ವಸತಿ, ಪ್ರವಾಸೋದ್ಯಮ ಇಲಾಖೆ, ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲರೂ ಒಂದಾಗಿ ನಿಂತು, ಮುತ್ತು ಕಟ್ಟುವುದು ಹಾಗೂ ದೇವದಾಸಿ ಪದ್ದತಿಗಳಂತ ಅನಿಸ್ಟ ಪದ್ದತಿಗಳು ನಡೆಯದಂತೆ ನೋಡಿಕೊಂಡರು.

ಸುರಕ್ಷತೆ ಹಾಗೂ ಮೂಲ ಸೌಕರ್ಯ : 

ಸುರಕ್ಷತೆಗಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಲ್ಲಿಯ ಹೊಂಡದಲ್ಲಿ ಯಾರೂ ಇಳಿಯದಂತೆ, ಭಕ್ತರಿಗೆ ತಾತ್ಕಾಲಿಕ ಸ್ನಾನ ಗೃಹಗಳನ್ನು ನಿರ್ಮಿಸಿ, ನೀರಿನ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿತ್ತು. ಯಾವುದೇ ಮೂಲ ಸೌಕರ್ಯಗಳ ಕೊರತೆ ಯಾಗದoತೆ ನೋಡಿಕೊಳ್ಳಲಾಯಿತು.

ರಾಮಘಟ್ಟದ ಸ್ವಾಮೀಜಿಯಿಂದ ಜಾಗೃತಿ ಸಭೆ : 

ರಾಮಘಟ್ಟದ ಪುರವರ್ಗ ಮಠದ ಸ್ಥಿರ, ಚರ ಸ್ವಾಮೀಜಿ ರೇವಣಸಿದ್ದ ಸ್ವಾಮಿಜಿ ಯವರು ಮಠದಲ್ಲಿ ಮೌಢ್ಯಾಚರಣೆಯ ಕುರಿತು ಜಾಗೃತಿ ಸಭೆಯನ್ನು ನಡೆಸಿಕೊಟ್ಟರು.

ಸನ್ಮಾನ :

ಅಧಿಕಾರಿಗಳ ಮಾತಿಗೆ ಒಪ್ಪಿ ಜಡೆ ತೆಗೆಸಿಕೊಂಡ ಮಹಿಳೆಯರಿಗೆ, ತಹಶಿಲ್ದಾರ್, ಮುತ್ತೈದೆಯರ ಸಂಕೇತವಾದ ಸೀರೆ ಹಾಗೂ ಬ್ಲೌಸ್ ಪೀಸ್ ನೀಡಿ ಸನ್ಮಾನ ಮಾಡಿದರು.

ಅಧಿಕಾರಿಗಳ ತಂಡ :

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ನಜ್ಮ್, ತಹಶಿಲ್ದಾರ್ ಗುರು ಬಸವರಾಜ, ಉಪ ತಹಶಿಲ್ದಾರ್ ಪಾತಿಮ, ಸಿಡಿಪಿಓ ಮಹಂತಸ್ವಾಮಿ, ದೇವದಾಸಿ ವಿಮೋಚನಾ ಸಂಘದ ರೇಣುಕಮ್ಮ, ದೇವದಾಸಿ ಪುನರ್ವಸತಿ ಕೇಂದ್ರದ ಪ್ರಜ್ಞಾ ಪಾಟೀಲ್, ಡಿ ವೈ ಎಸ್ ಪಿ ನಾಗೇಶ್ ಐತಾಳ್, ಸಿಪಿಐ ದುರುಗಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಕೆಂಚಪ್ಪ ಉಪಸ್ಥಿತರಿದ್ದರು.

ವರದಿ : ಬಸವರಾಜ್ ಪೂಜಾರ್