ಕೆ.ಎನ್.ಪಿ.ವಾರ್ತೆ,ಕಲಬುರಗಿ,ನ.25;

ಕಳೆದ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾಣ ಕರ್ನಾಟಕ ನಾಡಿನ ಬಂಡಾಯ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ (78) ಭಾನುವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಾಲೀಕಾರ ಅವರಿಗೆ ಎರಡು ವರ್ಷದ ಹಿಂದೆ ಲಿವರ್‌ ಕ್ಯಾನ್ಸರ್‌ ಆಗಿತ್ತು. ಅಂದಿನಿಂದ ಅವರು ನಿರಂತರ ಚಿಕಿತ್ಸೆಯಲ್ಲಿದ್ದರು. ಒಂದು ವರ್ಷದಿಂದ ಅವರ ಆರೋಗ್ಯ ಕ್ಷೀಣಿಸುತ್ತ ಸಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ.

1943ರ ಏಪ್ರಿಲ್‌ 6ರಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಶಂಕರವಾಡಿ ಗ್ರಾಮದಲ್ಲಿ ಜನಿಸಿದ ಚೆನ್ನಣ್ಣ ವಾಲೀಕಾರ, ಪ್ರೌಢಶಾಲೆ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ, ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಮುಂಬೈ, ಹೈದರಾಬಾದ್‌, ಹಂಪಿ, ಬೆಂಗಳೂರು, ಧಾರವಾಡ, ಮೈಸೂರು, ಶಿವಮೊಗ್ಗದಲ್ಲಿ ಇರುವ ವಿಶ್ವವಿದ್ಯಾಲಯಗಳಲ್ಲಿಯೂ ಗ್ರಂಥಾಲಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಹೀಗಾಗಿ ರಾಜ್ಯದ ಮೂಲೆಮೂಲೆಯಲ್ಲೂ ಅವರ ಶಿಷ್ಯಬಳಗ, ಓದುಗ ಅಭಿಮಾನಿಗಳು ಇದ್ದಾರೆ.

ಚೆನ್ನಣ್ಣ ವಾಲೀಕಾರ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಹತ್ತಾರು ಪ್ರಬಂಧಗಳು, ನಾಲ್ಕು ಮಹಾಕಾವ್ಯಗಳು, 11 ಕವನ ಸಂಕನಲಗಳು, 12 ನಾಟಕಗಳು, 4 ಜನಪದ ಸಂಪ್ರಬಂಧಗಳು, 5 ಕಾದಂಬರಿಗಳು, ಬೆಳ್ಯಾ ಎಂಬ ಅದ್ವಿತೀಯ ಕಾದಂಬರಿ ಮೂಲಕ ಕನ್ನಡ ಸಾಹಿತ್ಯಲೋಕವನ್ನು ಬೆಚ್ಚಿಬೀಳಿಸಿದ್ದ ಅವರು, ವ್ಯೋಮಾವ್ಯೋಮ ಮಹಾಕಾವ್ಯದ ಮೂಲಕ ಅವರು ಮನೆಮಾತಾಗಿದ್ದರು.

ಇಂದು ಬೆಳಿಗ್ಗೆ 10ಗಂಟೆಗೆ ಕಲಬುರ್ಗಿಯ ಹಿಂದಿ ಪ್ರಚಾರ ಸಭಾದಲ್ಲಿ ಅವರ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನ 3ಕ್ಕೆ ಚಿತ್ತಾಪುರ ತಾಲೂಕಿನ ಶಂಕರವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. 

ಚೆನ್ನಣ್ಣ ವಾಲೀಕಾರರ ಕೃತಿಗಳು

ಕವನ ಸಂಕಲನಗಳು

 • ಮರದ ಮೇಲಿನ ಗಾಳಿ
 • ಕರಿತೆಲಿ ಮಾನವನ ಜೀಪದ
 • ಹಾಡಕ್ಕಿ ಹಾಗು ಇತರ ಪದಗಳು
 • ಬಂಡೆದ್ದ ದಲಿತರ ಬೀದಿ ಹಾಡುಗಳು
 • ಧಿಕ್ಕಾರದ ಹಾಡುಗಳು
 • ಪ್ಯಾಂಥರ್ ಪದ್ಯಗಳು
 • ಕಥನ ಕವನಗಳು

ಮಹಾಕಾವ್ಯ

‘ವ್ಯೋಮಾವ್ಯೋಮ’- ಮಾನಸ ಮಹಾಸಾಗರದ ಪರಮಹಂಸಗಳ ಭೂವ್ಯೋಮದ ಬೃಹದ್‌ಗಾನ.

ಮಹಾಪ್ರಬಂಧ

‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’

ಕಥಾಸಂಕಲನ

 • ಕಪ್ಪು ಕಥೆಗಳು,
 • ಕುತ್ತದಲ್ಲಿ ಕುದ್ದವರ ಕಥೆಗಳು,
 • ಹೆಪ್ಪುಗಟ್ಟಿದ ಸಮುದ್ರ

ನಾಟಕಗಳು

 • ಟೊಂಕದ ಕೆಳಗಿನ ಜನ
 • ಅಗ್ನಿರಾಜ
 • ತಲೆ ಹಾಕುವವರು
 • ಕೂಸಿನ ಕಂಡಿರಾ
 • ಅವಿವೇಕಿ ರಾಜನ ಕಥೆ
 • ಜೋಗತಿ

ಕಾದಂಬರಿ

 • ಒಂದು ಹೆಣ್ಣಿನ ಒಳಜಗತ್ತು,
 • ಕೋಟೆಬಾಗಿಲು,
 • ಹುಲಿಗೆಮ್ಮ,
 • ಗ್ರಾಮಭಾರತ,
 • ಬೆಳ್ಯ

ಪ್ರಶಸ್ತಿಗಳು

 • ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ
 • ಮಂಗಳೂರು ಸಾಹಿತ್ಯ ಬಳಗ ಪ್ರಶಸ್ತಿ,
 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
 • ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.