ಕೆ.ಎನ್.ಪಿ.ವಾರ್ತೆ,ನವದೆಹಲಿ,ನ.14;

ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿ ಪ್ರಕರಣವನ್ನು ಸಪ್ತ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಸಪ್ತ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಅರ್ಜಿ ವರ್ಗಾಯಿಸಿದೆ.

ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ಶಬರಿಮಲೆ ಮರು ಪರಿಶೀಲನಾ ಅರ್ಜಿಯನ್ನು ಸಪ್ತ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದರು.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಸೇರಿ ಮೂವರು ಇದಕ್ಕೆ ಒಪ್ಪಿಕೊಂಡರೆ ಉಳಿದ ಇಬ್ಬರು ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್ ಹಾಗೂ ಡಿ.ವೈ.ಚಂದ್ರಚೂಡ್ ಇದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ತೀರ್ಪು ನೀಡಿದರು.

ಇನ್ನು ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿಗಳು, ಮಹಿಳೆಯರ ಪ್ರವೇಶ ವಿಚಾರ ಕೇವಲ ಈ ದೇಗುಲಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಮಸೀದಿ ಹಾಗೂ ಪಾರ್ಸಿಗಳ ದೇಗುಲಕ್ಕೂ ಪ್ರವೇಶ ವಿಚಾರದ ಬಗ್ಗೆಯೂ ತೀರ್ಮಾನ ಮಾಡಬೇಕಿದೆ ಎಂದಿದ್ದಾರೆ.

ಶಬರಿಮಲೆಗೆ ಸಂಬಂಧಿಸಿದಂತೆ ಸೆಪ್ಚಂಬರ್ 2018ರಲ್ಲಿ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಅಥವಾ ಮಾರ್ಪಾಡು ಸೂಚಿಸಿಲ್ಲ. 
ಧಾರ್ಮಿಕ ಸ್ವಾತಂತ್ರ್ಯ ಮತ್ತು ವಯಕ್ತಿಕ ಸ್ವಾತಂತ್ರ್ಯದ ಸಂಘರ್ಷದ ವಿಚಾರ ಇರುವುದರಿಂದ ಇನ್ನಷ್ಟು ಚರ್ಚೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಪೀಠ 7 ನ್ಯಾಯಮೂರ್ತಿಗಳಿರುವ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ.

ವಿಸ್ತೃತ ನ್ಯಾಯಪೀಠದ ವಿಚಾರಣೆ ಮುಗಿದು, ತೀರ್ಪು ಹೊರ ಬೀರುವವರೆಗೂ ಹಿಂದಿನ ತೀರ್ಪು ಊರ್ಜಿತದಲ್ಲಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

2018 ರ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಅನುಮತಿ ನೀಡಿತ್ತು.

ಆದರೆ ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಒಟ್ಟು 56 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವೆಲ್ಲವುಗಳ ವಿಚಾರಣೆಯನ್ನು ಕೋರ್ಟು ಮುಗಿಸಿದ್ದು, ಇಂದು ತೀರ್ಪು ನೀಡಬೇಕಿತ್ತು.

ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ.

ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು.

ಆದರೆ 2018 ರ ಸೆಪ್ಟೆಂಬರ್ ನಲ್ಲಿ ಈ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂದಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.