ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಏ.08;
ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಪತ್ನಿ ಎಸ್.ರಾಜಲಕ್ಷ್ಮಿ (66) ಅನಾರೋಗ್ಯದಿಂದ ಇಂದು ನಿಧನರಾದರು.
ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ ಎಸ್.ರಾಜಲಕ್ಷ್ಮಿ, ಕಳೆದ 50 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಜೆ.ಪಿ.ನಗರದ 2ನೇ ಹಂತದ 11ನೇ ಬಿ ಕ್ರಾಸ್ 27ನೇ ನಂಬರಿನ ಸ್ವಗೃಹದಲ್ಲಿ ನಾಳೆ ಬೆಳಿಗ್ಗೆಯಿಂದ ಮಧ್ಯಾಹ್ನ 1 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬನಶಂಕರಿ ವಿದ್ಯುತ್ ಚಿತಗಾರದಲ್ಲಿ ನಾಳೆ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.
ನಟ ಡಾ. ರಾಜ್ ಕುಮಾರ್ ಅವರ ಪ್ರಭಾವದಿಂದ ರಾಜಲಕ್ಷ್ಮಿಯವರು ನೇತ್ರದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ಈಗ ಅವರ 2 ಕಣ್ಣುಗಳನ್ನು ದಾನ ಮಾಡಲಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದಲ್ಲಿ ಜನಿಸಿದ ರಾಜಲಕ್ಷ್ಮಿಯವರು ಬಿ.ಎ. ಪದವಿ ಮತ್ತು ಹಿಂದಿ ವಿದ್ವಾನ್ ಪದವಿಧರರಾಗಿದ್ದರು. ಕನ್ನಡ ಸಾಹಿತ್ಯ ಪ್ರೇಮಿಯಾದ ಅವರು ನಾಲ್ಕು ದಶಕಗಳ ಹಿಂದೆ ಸಾಹಿತಿ ಬರಗೂರು ಅವರೊಂದಿಗೆ ಅಂತರಜಾತಿಯ ವಿವಾಹವಾಗಿದ್ದರು. ಬದುಕಿನುದ್ದಕ್ಕೂ ಬರಗೂರರ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳ ಕ್ರಿಯಾಶೀಲತೆಗೆ ಬೆಂಬಲವಾಗಿ ನಿಂತಿದ್ದರು.