ಕೆ.ಎನ್.ಪಿ.ವಾರ್ತೆ,ಬಾಸೆಲ್,ಆ.26;

ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಅನ್ನು ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ಬ್ಯಾಡ್ಮಿಂಟನ್‌ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ರಚಿಸಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್‌ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿಯೆನ್ನುವ ಚಾರಿತ್ರಿಕ ದಾಖಲೆಯನ್ನು ಬರೆದಿದ್ದಾರೆ. ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ತಮ್ಮ ಬದ್ದ ವೈರಿ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ 21-7, 21-7ರ ಅಂತರದ ಗೆಲುವು ದಾಖಲಿಸಿ ಇತಿಹಾಸ ಪುಟ ಸೇರಿದ್ದಾರೆ.

ಈ ಜೋಡಿ ತಮ್ಮ ಭರ್ಜರಿ ಆಟದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದು, 2017ರಲ್ಲಿ ಇದೇ ಟೂರ್ನಿಯ ಫೈನಲ್ ನಲ್ಲಿ ಸಿಂಧು ಅವರನ್ನು ಮಣಿಸಿ ಒಕುಹರಾ ಪ್ರಶಸ್ತಿ ಎತ್ತಿ ಸಂಭ್ರಮಿಸಿದ್ದರು.

ಕಳೆದ ವರ್ಷ ಸಿಂಧು ಅವರು ಸ್ಪೇನ್ ಸ್ಟಾರ್ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ ಸೋತು ನಿರಾಸೆಯನ್ನು ಅನುಭವಿಸಿದ್ದರು. ಈ ಬಾರಿ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಿದ್ದ ಸಿಂಧು, ಚೊಚ್ಚಲ ಬಂಗಾರದ ಕನಸು ನನಸು ಮಾಡಿಕೊಂಡಿದ್ದಾರೆ.

24ರ ಹರೆಯದ ಹೈದರಾಬಾದ್‌ ಆಟಗಾರ್ತಿ 2017 ಮತ್ತು 2018ರ ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿ, ಪ್ರಶಸ್ತಿ ಸೆಣಸಾಟದಲ್ಲಿ ಸೋತು ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ಅದರಲ್ಲೂ ವಿಶೇಷವಾಗಿ 2017ರ ಫೈನಲ್‌ನಲ್ಲಿ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ ಕೇವಲ ಎರಡು ಅಂಕಗಳ ಹಿನ್ನಡೆಯೊಂದಿಗೆ ಸೋತು ನಿರಾಸೆ ಅನುಭವಿಸಿದ್ದರು. ಜೀವಮಾನದಲ್ಲೇ ಅತ್ಯುನ್ನತ ಫಾರ್ಮ್‌ನಲ್ಲಿರುವ ಪಿವಿ ಸಿಂಧೂ, ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಪ್ರಹಾರ ಮಾಡ ತೊಡಗಿದರು. ಸಿಂಧೂ ಬಲವಾದ ಹೊಡೆತಕ್ಕೆ ಓಕುಹರಾ ಬಳಿ ಉತ್ತರವೇ ಇಲ್ಲ. ಇದರಿಂದಾಗಿ ಒಂದು ಹಂತದಲ್ಲಿ 16-2ರ ಅಂತರದ ಮುನ್ನಡೆ ದಾಖಲಿಸಿದರು. ಅಲ್ಲದೆ ಮೊದಲ ಸುತ್ತನ್ನು 21-7 ರ ಅಂತರದ ಸುಲಭವಾಗಿ ವಶಪಡಿಸಿಕೊಂಡರು.

ನಿರ್ಣಾಯಕ ದ್ವಿತೀಯ ಸುತ್ತಿನಲ್ಲೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಸಿಂಧೂ, ಎದುರಾಳಿಯ ಮೇಲೆ ನಿರಂತರ ಒತ್ತಡವನ್ನು ಹೇರುತ್ತಲೇ ಸಾಗಿದರು. ಹಿಂದಿನ ಪ್ರದರ್ಶನಕ್ಕೆ ಹೋಲಿಸಿದರೆ ಅನಗತ್ಯ ತಪ್ಪುಗಳಿಗೆ ಯಾವುದೇ ಆಸ್ಪದ ನೀಡದ ಸಿಂಧೂ, ತಮ್ಮ ಬಲವಾದ ಹೊಡೆತದಿಂದಲೇ ಎದುರಾಳಿ ಮೇಲೆ ಸವಾರಿ ಮಾಡಿದರು. ಹಾಗೆಯೇ ದ್ವಿತೀಯ ಸುತ್ತಿನಲ್ಲೂ ಒಂದು ಹಂತದಲ್ಲಿ 16-4ರ ಮುನ್ನಡೆ ಗಳಿಸಿ ಪ್ರಶಸ್ತಿಯತ್ತ ಮುನ್ನಡೆದರು. ಅಂತಿಮವಾಗಿ ದ್ವಿತೀಯ ಗೇಮ್ 21-7ರ ಅಂತರದಲ್ಲಿ ವಶಪಡಿಸಿ ಚಿನ್ನದ ಹಾರವನ್ನು ಕೊರಳಿಗೆ ಹಾಕಿಕೊಂಡರು.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಚೆನ್‌ ಯು ಫಿ ಅವರನ್ನು 21-7 ಮತ್ತು 21-14 ಗೇಮ್‌ಗಳಿಂದ ಮಣಿಸಿ ಅಂತಿಮ ಹಣಾಹಣಿಗೆ ವೇದಿಕೆ ನಿರ್ಮಿಸಿಕೊಂಡರು. ಇದರೊಂದಿಗೆ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ ವಿಶ್ವದ ಮೊದಲ ಆಟಗಾರ್ತಿಯೆನ್ನುವ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡರು.

2013ರ ಆವೃತ್ತಿಯಲ್ಲಿ ಸಿಂಧೂ ಕಂಚಿನ ಪದಕ ಜಯಿಸಿದ್ದರು. ಆಗ ಅವರಿಗೆ ಕೇವಲ 18 ವರ್ಷ. ಅದಾದ ಬಳಿಕ 2014ರ ಆವೃತ್ತಿಯಲ್ಲೂ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ, ರಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಸಿಂಧೂ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 5 ಪದಕ (ಹಾಲಿ ಆವೃತ್ತಿಯದೂ ಸೇರಿ) ಗೆದ್ದಂತಾಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.