ಕೆ.ಎನ್.ಪಿ.ವಾರ್ತೆ,ನವದೆಹಲಿ,ಡಿ.18;

ನಿರ್ಭಯ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಗಲ್ಲುಶಿಕ್ಷೆ ಖಾಯಂಗೊಳಿಸಿ ಬುಧವಾರ ಮಹತ್ವದ ತೀರ್ಪು ನೀಡಿದೆ.

ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಕ್ಷಯ್ ಕುಮಾರ್ ಸಿಂಗ್ ಗಲ್ಲುಶಿಕ್ಷೆ ತೀರ್ಪನ್ನು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ. 

ನ್ಯಾಯಮೂರ್ತಿ ಆರ್ ಭಾನುಮತಿ ಅವರ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಅಕ್ಷಯ್ ಕುಮಾರ್ ಸಿಂಗ್ ಪರ ವಕೀಲ ಎ ಪಿ ಸಿಂಗ್ ಮತ್ತು ದೆಹಲಿ ಪೊಲೀಸರ ಪರವಾಗಿ ವಾದ ಮಂಡಿಸಿದ ತುಷಾರ್ ಮೆಹ್ತಾ ಅವರ ವಾದ-ವಿವಾದವನ್ನು ಸುಮಾರು 30 ನಿಮಿಷಗಳ ಕಾಲ ಆಲಿಸಿ ತೀರ್ಪು ಪ್ರಕಟಿಸಿದೆ.

2017ರಲ್ಲಿ ನೀಡಲಾಗಿದ್ದ ಗಲ್ಲು ಶಿಕ್ಷೆ ತೀರ್ಪಿನಲ್ಲಿ ಯಾವುದೇ ದೋಷ ಕಂಡುಬರದ ಹಿನ್ನಲೆಯಲ್ಲಿ ಇದನ್ನು ಪುನರ್ ಪರಿಶೀಲನೆ ಮಾಡುವ ಅಗತ್ಯವಿಲ್ಲ ಎಂದು ಹೇಳಿತು.

ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳಾದ ಮುಕೇಶ್, ವಿನಯ್ ಮತ್ತು ಪವನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಈಗ ಅಕ್ಷಯ್ ಠಾಕೂರ್ ಅರ್ಜಿಯೂ ವಜಾಗೊಂಡಿದೆ. ಎಲ್ಲಾ ಆರೋಪಿಗಳು ನವದೆಹಲಿಯ ತಿಹಾರ್ ಜೈಲಿನಲ್ಲಿದ್ದು ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದರಿಂದಾಗಿ ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದು ಖಚಿತವಾಗಿದೆ. ಜೈಲಿನಲ್ಲಿ ಈಗಾಗಲೇ ಗಲ್ಲು ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ 23 ವರ್ಷದ ಯುವತಿ ನಿರ್ಭಯಾಳ ಮೇಲೆ ಆರು ಮಂದಿ ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿ ನಂತರ ಭೀಕರವಾಗಿ ಹತ್ಯೆಗೈದಿದ್ದರು. ಇದಕ್ಕೆ ದೇಶಾದ್ಯಂತ ತೀವ್ರ ಪ್ರತಿಭಟನೆ, ಖಂಡನೆ ನಂತರದ ದಿನಗಳಲ್ಲಿ ವ್ಯಕ್ತವಾಗಿತ್ತು. ನಂತರ ನಿರ್ಭಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಅದೇ ತಿಂಗಳು ಡಿಸೆಂಬರ್ 28ರಂದು ಮೃತಪಟ್ಟಿದ್ದಳು.

ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆ ನಡೆಸಿದ ದೆಹಲಿಯ ವಿಶೇಷ ತ್ವರಿತ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ ಗಲ್ಲುಶಿಕ್ಷೆ ವಿಧಿಸಿತ್ತು.

2014ರಲ್ಲಿ ದೆಹಲಿ ಕೋರ್ಟ್ ಸಹ ಈ ತೀರ್ಪನ್ನು ಎತ್ತಿಹಿಡಿದಿತ್ತು. ಅತ್ಯಾಚಾರ ನಡೆದ ಸಮಯದಲ್ಲಿ ಒಬ್ಬ ಆರೋಪಿ ಬಾಲಾಪರಾಧಿಯಾಗಿದ್ದರಿಂದ ಆತನನ್ನು ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಯಿತು. ಮತ್ತೊಬ್ಬ ಆರೋಪಿ ರಾಮ್ ಸಿಂಗ್ 2013ರಲ್ಲಿ ತಿಹಾರ್ ಜೈಲಿನಲ್ಲಿ ಮೃತಪಟ್ಟಿದ್ದ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.