ಕೆ.ಎನ್.ಪಿ.ವಾರ್ತೆ,ಮೈಸೂರು,ನ.19;

ಮಾರಣಾಂತಿಕ ಹಲ್ಲೆಗೊಳಗಾಗಿರುವ ನರಸಿಂಹರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಕರಣ ಸಂಬಂಧ ಆರೋಪಿ ಸೇರಿ ನಾಲ್ವರನ್ನು ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.

ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಶಾಸಕ ತನ್ವೀರ್ ಸೇಠ್ ಮೇಲೆ ಯುವಕನೊಬ್ಬ ಏಕಾಏಕಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ.

ಕತ್ತಿನ ಭಾಗದಲ್ಲಿ ತೀವ್ರ ಗಾಯಗೊಂಡಿರುವ ತನ್ವೀರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿ ತುರ್ತು ನಿಗಾ ಘಟಕದಲ್ಲಿ 48 ಗಂಟೆಗಳ ಕಾಲ ನಿಗಾವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಮಾಡಿದ್ದಾರೆ.

ಈ ನಡುವೆ ಘಟನಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿ ಫರ್ಹಾನ್’ನ್ನು ಪೊಲೀಸರು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು 12 ದಿನಗಳ ಕಾಲ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದೆ. 

ದಾಳಿಗೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ಸದಸ್ಯನೂ ಆಗಿದ್ದು, ಘಟನೆಯ ಹಿಂದೆ ಯಾವುದಾದರೂ ಸಂಘಟನೆಯ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಶಾಸಕ ತನ್ವೀರ್ ಸೇಠ್ ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ತರಲಾಗಿದೆ. ಕತ್ತಿನ ಭಾಗದಲ್ಲಿ ಗಾಯವಾಗಿರುವುದರಿಂದ ಅವರ ಸ್ಥಿತಿ ಗಂಭೀರವಾಗಿದ್ದು, ಇನ್ನೂ 48 ಗಂಟೆಗಳ ಕಾಲ ಐಸಿಯುನಲ್ಲಿ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪ್ರಾಥಮಿಕ ತನಿಖೆ ಪ್ರಕಾರ, ಉದ್ಯೋಗ ದೊರಕಿಸಿಕೊಡುವಂತೆ ತನ್ವೀರ್ ಬಳಿ ಆರೋಪಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾನೆ. ಆದರೂ ಉದ್ಯೋಗ ದೊರಕಿಸಿಕೊಡದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾನೆಂದು ಹೇಳಲಾಗುತ್ತಿದೆ.

ಮೈಸೂರು ನಗರದ ಬನ್ನಿ ಮಂಟಪದ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದ ತನ್ವೀರ್ ಸೇಠ್ ಅವರು, ಅಲ್ಲಿ ಏರ್ಪಡಿಸಿದ್ದ ಗಾಯನ ಕಾರ್ಯಕ್ರಮವನ್ನು ಮೊದಲ ಸಾಲಿನಲ್ಲಿ ಕುಳಿತು ಕೇಳುತ್ತಿದ್ದರು.

ಹಾಡುಗಾರ ಸುಶ್ರಾವ್ಯವಾಗಿ ‘ಏ ಮೆರಿ ಜೊಹೊರ ಜಬೀನ್ ತುಝೆ ಮಾಲೂಮ ನಹಿ…’ ಎಂಬ ಹಾಡನ್ನು ಹಾಡುತ್ತಿದ್ದಾಗ, ಹಾಡಿನಲ್ಲಿ ತಲ್ಲೀನರಾಗಿದ್ದ ಸಮಯದಲ್ಲಿ ಅಲ್ಲಿಗೆ ಏಕಾಏಕಿ ಬಂದ ಗೌಸಿಯಾನಗರದ ಫರ್ಹಾನ್ (24) ಎಂಬಾತ ಮಚ್ಚಿನಿಂದ ತನ್ವೀರ್ ಅವರ ಕುತ್ತಿಗೆ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಸೂಟ್ ಧರಿಸಿದ್ದ ತನ್ವೀರ್ ಸೇಠ್ ಅವರ ಎಡ ಕುತ್ತಿಗೆಯ ಮೇಲ್ಭಾಗದಲ್ಲಿ ಬಲವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.

ಕೂಡಲೆ ಅವರನ್ನು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆ ನರಸಿಂಹರಾಜ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.