ಕೆ.ಎನ್.ಪಿ.ವಾರ್ತೆ,ನವದೆಹಲಿ,ಮಾ.27;

2018 ಮೇ.12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ.

ನವದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್, ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸಿದ್ದು, ಮೇ.12 ರಂದು ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ರಾಜ್ಯದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಮತದಾನಕ್ಕಾಗಿ ಇವಿಎಂ ಗಳ ಜೊತೆ ವಿವಿಪ್ಯಾಟ್ (ಮತ ಖಾತರಿ ಯಂತ್ರ) ಬಳಸಿಕೊಳ್ಳಲಾಗುತ್ತಿದೆ. ಮೇ.15 ರಂದು ಮತ ಎಣಿಕೆ ನಡೆಯಲಿದೆ.

ರಾಜ್ಯದಲ್ಲಿ ಒಟ್ಟು 4 ಕೋಟಿ 96 ಲಕ್ಷ ಮತದಾರರಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 56,000 ಮತಗಟ್ಟೆಗಳಿರಲಿವೆ. ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ವಿಶೇಷ ಸೌಲಭ್ಯವಿರಲಿದೆ.

ಪಕ್ಷಗಳ ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿಯಿರುವುದಿಲ್ಲ. ಆದರೆ ಅಭ್ಯರ್ಥಿಯೊಬ್ಬರ ಚುನಾವಣಾ ವೆಚ್ಚ ₹28 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ.

ಈಗಿರುವ 224 ಸದಸ್ಯರ ಕರ್ನಾಟಕ ವಿಧಾನಸಭೆಯ ಕಾಲಾವಧಿ ಮೇ 28ರಂದು ಅಂತ್ಯಗೊಳ್ಳಲಿದೆ. ಮೇ ತಿಂಗಳು ಮುಗಿಯುವುದರೊಳಗೆ ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆಗಳು ಪೂರ್ತಿಗೊಳ್ಳಬೇಕಿದೆ.

2018ರ ಎ.17 ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುಲಿದ್ದು, ಏ.24 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಏ.25 ರಂದು ನಡೆಯಲಿದ್ದು, ಏ.27 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.