ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.31;

ಬೆಳೆಯಲ್ಲಿ ಮೈಟ್ ನುಶಿಯ ಬಾಧೆ ಕೊಪ್ಪಳ ಜಿಲ್ಲೆಯ ಕೆಲ ಭಾಗಗಳಲ್ಲಿ ಕಂಡು ಬಂದಿದ್ದು, ರೈತರು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ತೋಟಗಾರಿಕೆ ಇಲಾಖೆಯು ಸಲಹೆಗಳನ್ನು ತಿಳಿಸಿದೆ.

ಇತ್ತೀಚೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ಡಾ. ಎಂ.ಬಿ. ಪಾಟೀಲ್ ಹಾಗೂ ಬದರಿಪ್ರಸಾದ್, ತೋಟಗಾರಿಕೆ ಇಲಾಖೆಯ ವಿಷಯತಜ್ಞ ವಾಮನಮೂರ್ತಿ, ಸಹಾಯಕ ತೋಟಗಾರಿಕೆ ಅಧಿಕಾರಿ ಓಬಣ್ಣ ನೇತೃತ್ವದ ತಂಡವು ಕೊಪ್ಪಳ ಜಿಲ್ಲೆಯ ಕಲ್‍ತಾವರಗೆರಾ ಮತ್ತು ಹಿರೇಸಿಂದೋಗಿ ಗ್ರಾಮದ ಸುತ್ತಮುತ್ತ ಹೊಸದಾಗಿ ನಾಟಿ ಮಾಡಿದ ಮಾವಿನ ಬೆಳೆ ತಾಕುಗಳಿಗೆ ಭೇಟಿ ನೀಡಿದ್ದು, ಮಾವಿನ ಬೆಳೆಗೆ ಕೆಂಪು ಮೈಟ್ ನುಶಿಯ (ಜೇಡ) ಭಾದೆ ಕಂಡು ಬಂದಿದೆ. ಮಾವು ಬೆಳೆಯಲ್ಲಿನ ಮೈಟ್ ನುಶಿಯ ಬಾಧೆ ಲಕ್ಷಣಗಳು ಹಾಗೂ ನಿರ್ವಹಣಾ ಕ್ರಮಗಳಿಗೆ ಸಲಹೆ ನೀಡಲಾಗಿದೆ.

ಬಾಧೆಯ ಲಕ್ಷಣ :

ನುಶಿಗಳು ಎಲೆಗಳಿಂದ ರಸ ಹೀರುತ್ತದೆ, ಅಂತಹ ಎಲೆಗಳ ಮೇಲೆ ಹಳದಿ ಚುಕ್ಕೆಗಳಾಗುತ್ತವೆ. ನಂತರ ಒಣಗುತ್ತವೆ ಹಾಗೂ ಎಲೆಗಳ ಮೇಲೆ ಜೇಡದ ಬಲೆಗಳಂತೆ ಬಲೆಗಳನ್ನು ಕಾಣಬಹುದು. ಬೆಳಕಿನಲ್ಲಿ ನೋಡಿದಾಗ ಸಣ್ಣ ನುಶಿಗಳ ಚಲನೆಯನ್ನು ಗಮನಿಸಬಹುದು.

ನಿರ್ವಹಣಾ ಕ್ರಮ :

ಮಾವು ಬೆಳೆಯಲ್ಲಿ ಮೈಟ್ ನುಶಿಯ ಭಾದೆ ನಿಯಂತ್ರಣಕ್ಕೆ ಇಲಾಖೆಯು ಶಿಫಾರಸು ಮಾಡಿದ ರಸ ಗೊಬ್ಬರಗಳನ್ನು ಬಳಸಬೇಕು. ಪ್ರತಿ ಗಿಡಕ್ಕೆ 250 ಗ್ರಾಂ. ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸಬೇಕು. ಹೊಲವನ್ನು ನಿಯಮಿತವಾಗಿ ನೀರುಣಿಸಿ ಕಸಮುಕ್ತವಾಗಿಡಬೇಕು. ಪರಭಕ್ಷಕ ಜೇಡಗಳ ಸಂಖ್ಯೆ ಅಧಿಕವಿದ್ದರೆ ಸಿಂಪರಣೆ ಬೇಡ. ಪ್ರತಿ ಲೀಟರ್ ನೀರಿಗೆ 0.65 ಮಿ.ಲಿ ಸ್ಪೈರೊಮೆಸಿಫೆನ್ 24 ಎಸ್.ಸಿ ಅಥವಾ 0.5 ಮಿ.ಲಿ ಫೆನ್ ಪ್ರೋಪಾಥ್ರಿನ್ 30 ಇ.ಸಿ ಅಥವಾ 2.0 ಮಿಲಿ ಫೆನಜಾಕ್ವಿನ್ 10 ಇ.ಸಿ ಅಥವಾ 2.5 ಮಿ.ಲಿ ಡೈಕೋಫಾಲ್ 18.5 ಇ.ಸಿ ಅಥವಾ ನೀರಿನಲ್ಲಿ ಕರಗುವ ಗಂಧಕವನ್ನು 3 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಚಿಬ್ಬು ರೋಗದ ಲಕ್ಷಣಗಳು ಕಂಡುಬಂದಲ್ಲಿ ಕಾರ್ಬೆನ್ ಡೈಜಿಂ 50 ಡಬ್ಲು.ಪಿ 1 ಗ್ರಾಂ. ಅಥವಾ ಥಯೋಫಿನೇಟ್ ಮೀಥೈಲ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಡಾ. ಎಂ.ಬಿ. ಪಾಟೀಲ್ (9480696319), ಬದರಿಪ್ರಸಾದ್ (9900145705), ಪ್ರದೀಪ ಬಿರಾದಾರ (9743064405) ಮತ್ತು ತೋಟಗಾರಿಕೆ ಇಲಾಖೆಯ ವಿಷಯತಜ್ಞ ವಾಮನಮೂರ್ತಿ (9482672039) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.