ಕೆ.ಎನ್.ಪಿ.ಲೇಖನ;

ಕೆ.ಎನ್.ಪಿ.ಲೇಖನ ವಿಭಾಗದಲ್ಲಿ ಪ್ರಗತಿಪರ ಚಿಂತಕರು ಮತ್ತು ಬರಹಗಾರರಾದ ಸಂಗಮೇಶ ಎನ್ ಜವಾದಿ ರವರ “ಷಟಸ್ಥಲ ಚಕ್ರವರ್ತಿ, ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಸ್ಮರಣೆ” ಎಂಬ ಲೇಖನವನ್ನು ಪ್ರಕಟಿಸಲಾಗಿದೆ. ಸಹೃದಯರು ಲೇಖನ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ..

12ನೇ ಶತಮಾನದಲ್ಲಿ ಕಲ್ಯಾಣ ನಾಡಿನಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಕ್ರಾಂತಿ, ಪ್ರಸಕ್ತ ಯುಗದ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ.

ಅಂದು ವರ್ಣಾಶ್ರಮವ್ಯವಸ್ಥೆ, ಜಾತಿ ಪದ್ಧತಿ, ಲಿಂಗಭೇದಗಳನ್ನು ವಿರೋಧಿಸಿ ಸರ್ವರಿಗೂ ಸಮಪಾಲನ್ನು ಒದಗಿಸಿದ ಮಹಾನ್ ಕ್ರಾಂತಿ. ಕನ್ನಡ ಸಾಹಿತ್ಯ ಸಾರತ್ವ ಲೋಕಕ್ಕೆ ಕಲ್ಯಾಣದ ಶರಣರ ವೈಚಾರಿಕ – ವೈಜ್ಞಾನಿಕ ವಿಚಾರಗಳ ಅನುಭಾವದ ಬುತ್ತಿ ವಚನಗಳು ಈ ಜಗತ್ತಿಗೆ ನೀಡಿದ್ದಾರೆ.

ಅನುಭಾವದ ವಚನ ಸಾಹಿತ್ಯವು ಆಶ್ರಯ ನೀಡಿದ ರಾಜರನ್ನು ಓಲೈಸಲು ಅಥವಾ ವೈಭವೀಕರಿಸಿ ಬರೆದ ಸಾಹಿತ್ಯವಲ್ಲ. ಬದಲಾಗಿ ಜನ ಬದುಕಲಿ-ಜಗ ಬದುಕಲಿ, ಎಂದು ಬರೆದ ವಿಶಿಷ್ಟ ಮೌಲ್ಯಗಳ ಜನಪರ ಸಾಹಿತ್ಯವಾಗಿದೆ ಇಂತಹ ಅಮೂಲ್ಯ ಸಾಹಿತ್ಯ ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಕೆಲ ಜಾತಿ – ಮನುವಾದಿಗಳು ವಚನ ಸಾಹಿತ್ಯವನ್ನು ನಾಶ ಮಾಡಲು ಮುಂದಾದಾಗ 24ರ ಹರೆಯದ ಚನ್ನಬಸವಣ್ಣ ಸೇರಿ ಮುಂತಾದ ಶರಣರ ಸಮೂಹ ವಚನ ಸಾಹಿತ್ಯವನ್ನು ಹೊತ್ತು ಕಲ್ಯಾಣ ನಾಡನ್ನು ತ್ಯಜಿಸಿ ವಚನ ಸಾಹಿತ್ಯ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು ಎಂಬುದು ಇತಿಹಾಸದ ಪುಟಗಳಲ್ಲಿ ಅಜರಾಮವಾಗಿ ದಾಖಲಾಗಿದೆ.

ಈ ರಕ್ಷಣೆಯ ಕಾರ್ಯದಲ್ಲಿ ಪ್ರಮುಖ ದಂಡನಾಯಕರಾಗಿ ಕಾರ್ಯ ನಿರ್ವಹಣೆ ಮಾಡಿರುವುದು ಚನ್ನಬಸವಣ್ಣನವರು ಆದ್ದರಿಂದ ಇವರ ಶ್ರಮ ಬಹಳ ದೊಡ್ಡದು ಅನ್ನುವುದು ಬಹಳಷ್ಟು ಜನರಿಗೆ ಗೂತ್ತಿಲ್ಲ ಎನ್ನುವುದೇ ಅತ್ಯಂತ ನೋವಿನ – ದುಃಖಕರ ವಿಚಾರದ ಸಂಗತಿಯಾಗಿದೆ ಬಂಧುಗಳೆ, ಹೀಗಾಗಿ
ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯ ಮೇಧಾವಿ ಶಿವಶರಣರಾಗಿ ಬೆಳಗಿದ ಚೆನ್ನಬಸವಣ್ಣನವರು, ಭಕ್ತಿ, ಜ್ಞಾನ, ವೈರಾಗ್ಯ ಮೂರ್ತಿಯಾಗಿ ಜಗಕ್ಕೆಲ್ಲಾ ಜ್ಯೋತಿಯಾಗಿ ಕಂಗೊಳಿಸಿದ್ದಾರೆ.

ಜ್ಞಾನಿಯಾಗಿ, ಶರಣ ಭಕ್ತರಾಗಿ, ಷಟಸ್ಥಲ ಕಿಂಕರರಾಗಿ, ಸಕಲ ಜೀವಾತ್ಮರಿಗೂ ಲೇಸನು ಬಯಸುವ ಕಾಯಕದ ಮಹಿಮೆಯ ಗುಣಗಳನ್ನು ಹೊಂದುವ ಮೂಲಕ ಶಿವಶರಣರಲ್ಲಿ ಅಗ್ರಗಣ್ಯ ದಂಡನಾಯಕರಲ್ಲಿಯೇ, ಅತಿ ಶ್ರೇಷ್ಠ ಪ್ರಮುಖ ಮುಂದಾಳತ್ವ ನಾಯಕರಾಗಿ ಚೆನ್ನಬಸವಣ್ಣನವರು ಪ್ರಸಿದ್ಧನಾಗಿದ್ದಾರೆಂದು ಹೇಳಲು ಹೆಮ್ಮೆ ಎನಿಸುತ್ತದೆ.

ಚನ್ನಬಸವಣ್ಣನವರ ಜೀವನ:

ಬಸವಣ್ಣನವರ ಪ್ರೀತಿಯ ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರ ದಂಪತಿಗಳ ಮಗನಾಗಿ ಕ್ರಿ. ಶ. 1144 ರಲ್ಲಿ ಜನ್ಮತಾಳಿದರು. ಚೆನ್ನಬಸವಣ್ಣನವರು ಚಿಕ್ಕವರಿದ್ದಾಗಲೇ ಆದ್ಯಾತ್ಮೀಕ ಹಸಿವು ಅವರಲ್ಲಿ ಕಾಣುತ್ತಿತ್ತು ಹಾಗೆ ಅತ್ಯಂತ ಚುರುಕಾದ ಬುದ್ಧಿ ಅವರಲ್ಲಿ ಯಾವಾಗಲೂ ಎದ್ದು ಕಾಣುತ್ತಿದಿದ್ದು ವಿಶೇಷ, ಹಾಗಾಗಿ ಅತಿಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಕಾರ್ಯಗಳನ್ನು ಮಾಡಿದ ಮೇರು ವ್ಯಕ್ತಿತ್ವದ ಮಹಾಪುರುಷರಾಗಿದ್ದಾರೆ. ಇದಲ್ಲದೇ ಚೆನ್ನಬಸವಣ್ಣನವರು ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನರಾಗುವ ಮೂಲಕ ಕಲ್ಯಾಣದ ಕಡೆ ಹೆಜ್ಜೆ ಹಾಕಿ ಬಂದರು, ತದನಂತರ ಬಸವಣ್ಣನವರ ಮಹಾಮನೆಯ ಕೆಲಸ ಮತ್ತು ಧರ್ಮೊದ್ಧಾರ ಕಾಯಕದಲ್ಲಿ ದುಡಿದರು. ಜೊತೆಯಲ್ಲಿ ಅನುಭವ ಮಂಟಪದ ಎಲ್ಲಾ ಕಾರ್ಯಗಳು ಸಹ ಚೆನ್ನಬಸವಣ್ಣನವರ ನೇತೃತ್ವದಲ್ಲಿ ನಡೆಯುತ್ತಿದ್ದವು.

ಅಲ್ಲಮ ಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮರಿಗೆ ಲಿಂಗಧಾರಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಮತ್ತು ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿಯ ಆದ್ಯಾತ್ಮೀಕ ಜೀವನದ ಕುರಿತು ಪರಿ ಪರಿಯಾಗಿ ಪರೀಕ್ಷೆಗೆ ಗುರಿಪಡಿಸಿರುವ ಶ್ರೇಯಸ್ಸು ಇವರದಾಗಿತ್ತು. ಅಲ್ಲದೆ ಚನ್ನಬಸವಣ್ಣನವರ ವ್ಯಕ್ತಿತ್ವದ ಬಗೆಗೆ ಹಾಗೂ ಷಟಸ್ಥಲ ಸಿದ್ಧಾಂತದ ಆಚರಣೆಯಗಳಲ್ಲಿ ಇವರು ತೆಗೆದುಕೊಂಡ ನಿಲುವುಗಳನ್ನು ಎಲ್ಲಾ ಶಿವಶರಣರು ಸೇರಿ ಒಗ್ಗಟ್ಟಿನಿಂದ ಒಪ್ಪಿಗೆ – ಮಚ್ಚುಗೆ ವ್ಯಕ್ತಪಡಿಸಿದ್ದು ಅಮೋಘ.

ಆದ್ದರಿಂದ ಇವರಿಗೆ ವಹಿಸಿದ ಮಹತ್ವಪೂರ್ಣ ಪಾತ್ರವನ್ನು ತಿಳಿಯಲು ಮತ್ತು ಅವರು ತೆಗೆದುಕೊಂಡ ಅಭಿವೃದ್ಧಿ ಕಾರ್ಯಗಳ ಬಗೆ ಹೆಚ್ಚಾಗಿ ಅರಿಯಲು ಇವರು ಸಾಕಷ್ಟು ಬರೆದ ವಚನಗಳಲ್ಲಿ ನಾವು ಕಾಣಬಹುದಾಗಿದೆ. ಇನ್ನು ಅವರ ಜೀವನದ ಬಗ್ಗೆ ಹೆಚ್ಚಿನ ರೀತಿಯಲ್ಲಿ ಮಾಹಿತಿ ತಿಳಿದುಕೊಳ್ಳಲು ವಿರೂಪಾಕ್ಷ ಪಂಡಿತರ ಚೆನ್ನಬಸವ ಪುರಾಣ ಮತ್ತು ಬೇರೆ ಕೆಲವು ಕೃತಿಗಳಲ್ಲಿ ನೋಡಬಹುದಾಗಿದೆ. ಕೆಲವು ವಿವರಗಳು ಸಹ ದೊರೆಯುತ್ತಿವೆ ಯಾದರೂ ಒಂದೆರಡು ವಿಷಯಗಳ ಬಗೆಗೆ ಎಲ್ಲವುಗಳಲ್ಲಿಯೂ ಒಮ್ಮತವಿಲ್ಲ, ಹಾಗಾಗಿ ಉಪಲಬ್ದ ಹಾಗೂ ಇನ್ನಿತರ ದಾಖಲಾತಿ ಆಧರಿಸಿಯೇ ಚನ್ನಬಸವಣ್ಣನವರ ಜೀನವದ ಕುರಿತು ತಿಳಿದುಕೊಳ್ಳವುದು ಸೂಕ್ತ ಮತ್ತು ಸಮಂಜಸವಾಗಿದೆ. ಆದ್ದರಿಂದ ಅವರು ರಚಿಸಿದ ವಚನಗಳ ಮೌಲ್ಯಗಳ ಮೇಲೆ ಅವರ ಜೀವನದ ಕುರಿತು ತಿಳಿದುಕೊಳ್ಳವುದು ಉತ್ತಮ.

ಚನ್ನಬಸವಣ್ಣನವರ ಆಧ್ಯಾತ್ಮಿಕ ಸಾಧನೆ:

ಸರ್ವೋದಯ ತತ್ವ ಪ್ರತಿಪಾದಿಸಿದ ಶರಣ ಸಂಕುಲ ಅನುಭವ ಮಂಟಪದ ಮೂಲಕ ಸಮತಾವಾದವನ್ನೇ ಜೀವಾಳವಾಗಿರಿಸಿಕೊಂಡು ಲಿಂಗಾಯತ ಧರ್ಮದ ಉಗಮಕ್ಕೆ ಕಾರಣವಾಯಿತು. ಈ ಉಗಮದ ಕಾರ್ಯಕ್ಕೆ ಚನ್ನಬಸವಣ್ಣನವರು ಪಾತ್ರ ಬಹಳ ದೊಡ್ಡದು ಹಾಗೆ ಕಾಯಕಪಥದಲ್ಲಿ ಕಾರ್ಯಪ್ರವೃತ್ತ ರಾದಂತೆ, ರಾಜನೀತಿಶಾಸ್ತ್ರಜ್ಞರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಅರಿವನ್ನು ಪ್ರತಿ ಅಂದಿನ ಶರಣರಿಗೆ ಪರಿಚಯಿಸುವ ಮತ್ತು ತಿಳಿ ಹೇಳುವ ಕಾರ್ಯ ಮಾಡುವ ಮೂಲಕ ಸುಮಾರು 1250 ಕ್ಕೂ ಈ ಹೆಚ್ಚು ವಚನಗಳನ್ನು ಕೂಡಲಚೆನ್ನಸಂಗಮದೇವ ಎಂಬ ಅಂಕಿತನಾಮದೊಂದಿಗೆ ರಚಿಸಿದ್ದಾರೆ.

ಇದಲ್ಲದೇ ಅಲ್ಲಮ ಪ್ರಭುದೇವರ ಅನಂತರ ಚನ್ನಬಸವಣ್ಣನವರು ಶೂನ್ಯಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ. ಕಲ್ಯಾಣದಲ್ಲಿ ನಡೆದ ಕ್ರಾಂತಿಯಿಂದಾಗಿ ಶರಣ ಶರಣೆಯರೆಲ್ಲರೂ ಬೇರೆ ಬೇರೆ ಕಡೆ ಚದುರಿಹೋಗಿದ್ದಾರೆಂಬ ಪ್ರತೀತಿ ಇದೆ. ಆದರೆ ಚನ್ನಬಸವಣ್ಣನವರು ಕಲ್ಯಾಣದ ಕ್ರಾಂತಿಯ ಅನಂತರ ಕೆಲವುದಿನ ಕಲ್ಯಾಣದಲ್ಲಿಯೇ ಉಳಿದು ಅಲ್ಲಿದ್ದ ಶರಣರ ಯೋಗಕ್ಷೇಮವನ್ನು ನೋಡಿಕೊಂಡಿರುವ ಸಾಧ್ಯತೆ ಕಾಣುತ್ತದೆ. 【ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಶೋಧನೆ ಆದಾಗ ಮಾತ್ರ ವಾಸ್ತವ ನಿಜ ರೂಪ ಜನಸಾಮಾನ್ಯರಿಗೆ ಗೊತ್ತಾಗಬಹುದೆಂಬ ನಿರೀಕ್ಷೆ ನಮ್ಮದು. ಆದ್ದರಿಂದ ಆ ದಿಸೆಯಲ್ಲಿ ಸಂಬಂಧ ಪಟ್ಟ ಸರ್ಕಾರ ಸಂಶೋಧನೆ ಮಾಡುವ ಮೂಲಕ ಜನರಿಗೆ ಸತ್ಯ ತಿಳಿಸಲು ಮುಂದಾಗಲಿ ಎಂಬುವುದೇ ಬಸವಾಭಿಮಾನಿಗಳ ಆಸೆ】 ಆಮೇಲೆ ಪರಿಸ್ಥಿತಿ ಇನ್ನಷ್ಟು ಹೆಚ್ಚಾಗಿ ಉಲ್ಬಣಗೊಂಡಾಗ ಉಳಿದ ಶರಣರ ಜೊತೆಯಲ್ಲಿ ಅವರು ಉಳವಿಯತ್ತ ಪ್ರಯಾಣ ಬೆಳೆಸಿದ್ದಾರೆಂದು ಕೆಲವು ಕೃತಿಗಳಿಂದ ನಮ್ಮಗೆ ತಿಳಿದುಬರುತ್ತದೆ. ಹಾಗಾಗಿ ಚನ್ನಬಸವಣ್ಣನವರು ವಚನ ಸಾಹಿತ್ಯ ಸಂಪತ್ತನ್ನು ರಕ್ಷಿಸುವ ಹೊಣೆ ಹೊತ್ತಿಕೂಂಡು ಕೊನೆಯವರೆಗೂ ಹೋರಾಡಿದರು, ಹೋರಾಟ ಮಾಡುತ್ತಾ ಅವರು ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂಬ ಪ್ರಬಲವಾದ ನಂಬಿಕೆ ಈಗಲೂ ಅನೇಕ ಜನರಲ್ಲಿ ಕಾಣುತ್ತೇವೆ.

ಚನ್ನಬಸವಣ್ಣನವರ ಸ್ಮರಣೆ:

ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಜನಪರ ಸಾಧನೆ ಮಾಡಿ, ಇಡೀ ಶರಣ ಸಂಕುಲದ ವಿಶ್ವಾಸ ಗಳಿಸಿ, ಶೂನ್ಯಪೀಠಾಧ್ಯಕ್ಷರಾಗುವ ಮೂಲಕ ಸಾವಿರಾರು ವಚನಗಳನ್ನು ರಚಿಸಿ, ಲಿಂಗಾಯತ ಧರ್ಮ ಸ್ಥಾಪನೆಯಲ್ಲಿ ಮುಂಚೂಣಿಯಾಗಿ ನಿಂತು, ದಣಿದವರ – ನೊಂದವರ ಬಾಳಿಗೆ ಬೆಳಕ್ಕಾಗಿ, ಕಲ್ಯಾಣ ರಾಜ್ಯದ ಸಮಾನತೆ ನೀತಿಯ ತತ್ತ್ವ ಮೌಲ್ಯಗಳನ್ನು ವಿಶ್ವಕ್ಕೆ ಸಾರುವ ದ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿದ ಶ್ರೇಷ್ಠ ಯುವ ರತ್ನರಾಗಿ, ಇಂದಿನ ಸಮಾಜದ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ, ನಮ್ಮಲ್ಲರ ಅಚ್ಚುಮೆಚ್ಚಿನ ಶಿವಶರಣರಾಗಿ, ಕತ್ತಲೆಯಿಂದ – ಬೆಳಕಿನೆಡೆಗೆ ನಮ್ಮನ್ನು ಸಾಗಿಸಿದ ನಮ್ಮ ಓ ಆದ್ಯಾತ್ಮ ವೀರ ಶಿವಶರಣ ಚನ್ನಬಸವಣ್ಣನರಿಗೆ ನನ್ನ ಅಂತರಂಗ ಅತಃಕರಣದ ಶ್ರದ್ದಾ ಭಕ್ತಿಯಿಂದ ನಿಮ್ಮನ್ನು ನೆನೆಯುತ್ತಾ – ಸ್ಮರಣೆ ಮಾಡುತ್ತಾ, ನಿಮ್ಮ ಚರಣ ಕಮಲ ಪಾದಗಳಿಗೆ ಕೋಟಿ – ಕೋಟಿ ಶರಣು ಶರಣಾರ್ಥಿ ಸಲ್ಲಿಸುವೆ.

-ಸಂಗಮೇಶ ಎನ್ ಜವಾದಿ, ಬೀದರ.

ಕೆ.ಎನ್.ಪಿ.ಯ ಸಮಸ್ತ ಓದುಗ ಬಳಗಕ್ಕೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು…

ಬೆಳಕಿನ ಹಬ್ಬ ನಿಮಗೆ ಸುಖ, ಸಂಪತ್ತು, ನೆಮ್ಮದಿ ಕರುಣಿಸಲಿ. ನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿ….. ದೀಪದಂತೆ ನಿಮ್ಮ ಬದುಕೂ ಪ್ರಕಾಶಮಾನವಾಗಿರಲಿ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವನ ಉಜ್ವಲವಾಗಲಿ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.