ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಹಿರಿಯ ಕವಿ ಎ.ಎಸ್.ಮಕಾನದಾರ ಅವರ ಸಮಗ್ರ ಕವಿತೆಗಳ ಹೊತ್ತಿಗೆ ಅಕ್ಕಡಿಸಾಲು ಕೃತಿಯಲ್ಲಿನ “ನೀಗದ ಬರ” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ನೀಗದ ಬರ

ನನ್ನ ಅಮ್ಮೀಜಾನ್
ತನ್ನ ರಟ್ಟೆಯ ಬಲದಿಂದ ತಟ್ಟಿದ
ತವೆಯ ರೊಟ್ಟಿಯಷ್ಟಿದ್ದು
ಒಲೆಯೊಳಗಿನ ಬೆಂಕಿಯಂತೆ
ಉರಿಯುತ್ತಿರುವ
ಆ ಸೂರ್ಯನಿಗೊಂದು ಸವಾಲ್

ಚೋಟುದ್ದ ಹೊಟ್ಟೆಯೊಳಗಿನ
ಹಸಿವೆಯೆಂಬ ಬೆಂಕಿಯಲ್ಲಿ
ಉರಿಯುತ್ತಿರುವಾಗ
ಡೊಳ್ಳು ಹೊಟ್ಟೆ ನೋಡಿ
ಅತ್ತವರೆಷ್ಟೋ
ಬೆನ್ನಿಗಂಟಿದ ಹೊಟ್ಟೆಯ ನೋಡಿ
ನಕ್ಕವರೆಷ್ಟೋ ?
ಎಣಿಕೆ ಮಾಡಲು ಶಕ್ತಿಯಿಲ್ಲ !
ಕಣ್ಣಿಗೆ ಶಕ್ತಿಯಿದ್ದರೂ
ಶತ-ಶತಮಾನಗಳ
ಗುಲಾಮಗಿರಿಯಿಂದ
ತಲೆ ಬಾಗಿತೋ ?
ಆದರೆ….
ಆಕಾಶದಲ್ಲಿ ಉರಿಯುವ
ಸೂರ್ಯನಿಗೆ
ನೋಡುತ್ತಿರುವಂತೆ
ಹರಿದು ತಿನ್ನುವ
ಹಸಿವೆಯೆಂಬ ಹದ್ದು ಹಾರಿತು
ಸೂರ್ಯ ಕಾಣಲಿಲ್ಲ
ಹೊಟ್ಟೆಯೊಳಗಿನ ಬೆಂಕಿಯೂ
ಶಮನವಾಗಲಿಲ್ಲ
ನನ್ನ ಕಣ್ಣ ಗುಡ್ಡೆ
ಸೂರ್ಯ ನುಂಗಿದನೊ
ಅಥವಾ ಸೂರ್ಯನ
ಕಣ್ಣುಗುಡ್ಡೆಯನ್ನೆ
ಹದ್ದು ಹರಿದು ತಿಂದಿತೋ
ತಿಳಿಯಲಿಲ್ಲ ?
ಹಸಿದ ಹೊಟ್ಟೆಯ
ಬೆಂಕಿ ನಂದಿಸುವ
ಅಗ್ನಿ ಶಾಮಕದಳ
ಇನ್ನೂ ಬರಲಿಲ್ಲ.
ಹೊಟ್ಟೆಯ ಬರ
ನೀಗಲಿಲ್ಲ.

-ಎ.ಎಸ್.ಮಕಾನದಾರ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.