ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಧರಣಿಕಾಂತ್ ರವರ “ಹಸಿವಿನ ಕಿಚ್ಚು ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಹಸಿವಿನ ಕಿಚ್ಚು

ಚಿತ್ರ ಹೇಳುವುದೇನು?
ಹಸಿವೆಂದರೇನೆಂದು
ಪದ್ಯ ತಿಳಿಸುವುದೇನು ?
ಹಸಿವ ನೋವೇನೆಂದು
ಗಂಟಲಂಚಿನವರೆಗೆ
ತಿಂದು ತೇಗಿದ ನಿಮಗೆ
ಪಚನವಾಗದ ಅನ್ನ
ನಮಗದುವೇ ಮೃಷ್ಠಾನ್ನ

ಅಮ್ಮನೆದೆಯನು ತಬ್ಬಿ
ಬಿಕ್ಕುತಲಿ ಉಮ್ಮಳಿಸಿ
ಕಣ್ಣೀರನು ಸುರಿಸಿ
ಅನ್ನಕ್ಕೆ ಕೈ ಚಾಚಿ
ನಾಯಂತೆ‌ ಕಾಯುತಿರೆ
ಎಸೆದ ಅನ್ನದ ತುತ್ತು
ಹೊನ್ನಂತೆ‌ ಕಾಣುತಿರೆ
ಕರುಳ ಹಿಂಡುವ ಹಸಿವು
ಸಾವಾಗಿ ಕಾಡುತಿರೆ
ಗಹಗಹಿಸಿ ತಹತಹಿಸಿ
ನಿಮ್ಮೆದೆಯ ನಾಳಗಳು
ಬಿಗಿದು ಬಿರಿಯುವ ಹಾಗೆ
ನಗುವ ದಾತೆರೆ ನಿಮಗೆ
ಕಾಯುತಿರುವೆವು ನಾವು
ಹಿಡಿ ಅನ್ನವ ಅರಸಿ

ಬದುಕೆಂಬ ಅನ್ನವನು
ಕದ್ದುಂಡ ತಪ್ಪಿಗೆ
ಬಂದೂಕ ನಮ್ಮೆದೆಗೆ
ಇಟ್ಟು ಸುಟ್ಟಿರಿ ನೀವು
ಉಂಡ ಅನ್ನದ ಅಗುಳು
ನೆತ್ತರಾಗುವ ಮೊದಲೆ
ರಕ್ತ ಕಾರುತ ನೆಲಕೆ
ಬಿದ್ದು ಸತ್ತೆವು ನಾವು

ಅನ್ನ ಕದ್ದವರೆದೆಯ
ದಾವಾಗ್ನಿ ಕಾವಲ್ಲಿ
ಮಾಘ ಚಳಿಯಲು
ಮೈ ಕಾವ ಕಾಯಿಸುತ
ಮೈಮರೆತ ನಿಮಗೆಲ್ಲ
ಈಗ ನೆನಪಿನೊಳಿಲ್ಲ
ಅನ್ನ ಬೇಡುವ ನಮ್ಮ
ಬಡಿದು ದೂಡಿದ ನೀವು
ಸೊಕ್ಕಿನರಸರ ಪಾದ
ನೆಕ್ಕುವುದ ಬಿಟ್ಟಿಲ್ಲ

ನಮ್ಮ ಬದುಕಿನ ಮೇಲೆ
ನಿಮ್ಮೆಲ್ಲ ಮೆರವಣಿಗೆ
ಮುಗಿವ ಕಾಲವು ಈಗ
ಸನ್ನಿಹಿತವಾಗುತಿದೆ
ಬಡವನೊಡಲಿನ ಕಿಚ್ಚು
ಜಗವ ಸುಡುವುದು ಎಂಬ
ನಾಣ್ನುಡಿಯು ಈಗೀಗ
ಜನಜನಿತವಾಗುತಿದೆ

-ಧರಣಿಕಾಂತ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.