ಕೆ.ಎನ್.ಪಿ.ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಡಾ.ರೇಣುಕಾತಾಯಿ.ಎಂ.ಸಂತಬಾ (ರೇಮಾಸಂ) ಅವರ “ಬಿಚ್ಚಿದ ಜಟೆಗಳ ಕಟ್ಟಿಕೋ” ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಬಿಚ್ಚಿದ ಜಟೆಗಳ ಕಟ್ಟಿಕೋ

ಕಟ್ಟಿಕೋ ಜಟಾಧಾರಿ ಬಿಚ್ಚಿದ ಜಟೆಗಳನು,
ಅಡಗಿಸಿಕೋ ಗಂಗೆಯನು ಗುಪ್ತಗಾಮಿನಿಯಾಗಿ,
ಅಂತರ್ಮುಖಿ ಅಂತರಗಂಗೆಯಾಗಿ,
ನಿರ್ಮಿಸಿಕೋ ಚಂದಿರನ ಸೇತುವೆಯ ಕಡಿವಾಣವನು,
ರೋಧಿಸುತಿಹಳು ಇಳೆ,ಜಾರಿಸದಿರು ತಡೆ,ಅವಳನು,//

ಸಾಕಾಗಿದೆಯಂತೆ ಭಗೀರಥನಿಗೂ ಪ್ರವಾಹ ಪ್ರಲಾಪ !
ಅನುತಿಹನು ಕರೆದೇ ಯಾಕಾಗಿ?
ಗಂಗಾಂಬು ಗಂಗಾಗತಿಯಾಗಿಹಳು,
ಅಧಮ್ಯ ಉತ್ಸಾಹವೋ ಅವಳ
ಪ್ರತಾಪವೋ ಅರಿಯದಾಗಿದೆ!!

ಹಾಹಾಕಾರದ ಬಿಭತ್ಸ ರಸಧಾರೆಯಾಗುತಿದೆ,
ಪಶುಗಳ ಮೂಕಾಕ್ರಂದನದ ರೋದನವಾಗಿದೆ,
ಖಗಗಳೂ ಗೂಡು ಗುರುತಿಸದಾಗಿವೆ,
ಸೃಷ್ಟಿಯೂ ಪಲ್ಲವಿಸದೆ ಪಲ್ಲಟವಾಗುತಿದೆ,
ಅತಿವೃಷ್ಟಿಯ ಅಗಾಧ ಅನಾಹುತವಾಗುತಿದೆ !

ಪರಿವೆಯಿಲ್ಲದೇ ಪರಿಸರ ಪರದಾಡುತಿದೆ,
ಗಗನಚುಂಬಿ ಸೌಧಗಳು ಧರಾಶಾಹಿಗಳಾಗಿವೆ,
ನೆಲೆಯಿಲ್ಲದ ನಿಸರ್ಗ ಅನಾಥವಾಗಿದೆ,
ಕಣ್ತೆದೆರೆ ಕಾಪಾಡು ಕರುಣಾಮಯನೇ,
ತಡೆಗೋಡೆಯಾಗು ಅಂದಿನಂತೆಯೇ,

ಕಣ್ಣೀರ ಕೋಡಿಯ ಪ್ರವಾಹ
ಕೊಚ್ಚಿ ಕೊಚ್ಚಿ ಸುಳಿಗಳಾಗಿ ತಿರುಗುತಿವೆ,
ದೇವಮಂದಿರಗಳೇ ಕಾಣದಾಗಿವೆ,
ನಿಲ್ಲಿಸು ಅವಳ ಆರ್ಭಟವ,
ಬಾ, ನೀ ತಡೆಯಲು ಧರೆಗೆ,

ಧರಣಿಯ ಅಳಲು ನಿನಗೆ ಕೇಳದೇ!!
ಕಾನನಗಳು ಕಂಗಾಲಾಗಿ ಕಂಗೆಟ್ಟಿವೆ,
ತ್ರಾಹಿ ತ್ರಾಹಿ ಎನುತಿಹ ಭೂಮಿಸುತರು,
ನಿನ್ನ ಜಟೆಗಳ ತಡೆಗಾಗಿ ಪ್ರಾರ್ಥಿಸುತಿಹರು…
ಬಾರೋ ಮಹಾರಾಯಾ !
ಮಹಾದೇವಾ ತಡೆಯಲು ಧರೆಗೆ ನೀ ,,,,

                                                             ರೇಮಾಸಂ
                                                             ಡಾ.ರೇಣುಕಾತಾಯಿ.ಎಂ.ಸಂತಬಾ.
                                                             rensan2004@yahoo.com

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.