ಕೆ.ಎನ್.ಪಿ.ಕತೆ; 

ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ಅವರ “ಹೀಗೊಂದು ಜ್ಯೋತಿಷ್ಯ ಪುರಾಣ..!!
(ಇದು ಕಟ್ಟು ಕಥೆಯಲ್ಲ…)” ಎಂಬ ಕತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. 

ಹೀಗೊಂದು ಜ್ಯೋತಿಷ್ಯ ಪುರಾಣ..!!
(ಇದು ಕಟ್ಟು ಕಥೆಯಲ್ಲ…)

ಅದೊಂದು ಊರು ಊರಿನಲ್ಲೊಂದು ಮನೆ, ಮನೆಯ ಯಜಮಾನ ಒಂದು ಕಾರ್ಖಾನೆ ಉದ್ಯೋಗಿ. ತನ್ನೊಬ್ಬನ ಸಂಪಾದನೆಯಿಂದ ತೃಪ್ತಿಗೊಳ್ಳದ ಅವನು ತನ್ನ ಬಿಡುವಿನ ವೇಳೆಯಲ್ಲಿ ಪಂಚಾಂಗ ಹಾಗೂ ಜ್ಯೋತಿಷ್ಯ ಹೇಳುವ ಕಾಯಕ ಶುರುವಿಟ್ಟುಕೊಂಡ. ಮಡದಿ ಹಾಗೂ ಮಗನನ್ನು ತನ್ನ ಸಹಾಯಕ್ಕೆ ಹೇಗೆ ಬಳಸಿಕೊಳ್ಳಬೇಕೆಂದು ಯೋಚಿಸಿದ. ಹೇಳಿ ಕೇಳಿ ಇದು ವೈಜ್ಞಾನಿಕ ಯುಗ ಆದರೂ ಶಿಕ್ಷಣದ ಕೊರತೆಯೋ, ವೈಚಾರಿಕತೆಯ ತಿಳುವಳಿಕೆಯ ಕೊರತೆಯೋ ಬಡವರು ಖಾಯಿಲೆ ಕಸಾಲೆಗಳು ಬಂದಾಗ ವೈದ್ಯರನ್ನು ನಂಬುತ್ತಾರೋ ಇಲ್ಲವೋ ಜ್ಯೋತಿಷಿಗಳು ಹಾಕುವ ಮಂತ್ರಗಳನ್ನು ಅವರು ಕಟ್ಟುವ ತಾಯತಗಳನ್ನು ಹೆಚ್ಚು ನಂಬುತ್ತಾರೆ, ಅದನ್ನೇ ಬಂಡವಾಳ ಮಾಡಿಕೊಂಡ ಅವನು ತನ್ನ ಬಳಿ ಬರುವ ಬಡವರು, ಅನಕ್ಷರಸ್ಥರು, ಹಳ್ಳಿ ತಾಯಂದಿರಲ್ಲಿ ಜ್ಯೋತಿಷ್ಯದ ಕುರಿತಾದ ಮೂಢನಂಬಿಕೆಗಳನ್ನು ಬಿತ್ತಿ ಅವರಲ್ಲಿ ಮತ್ತಷ್ಟು ಭಯವನ್ನು ಹುಟ್ಟುಹಾಕಿ ಇಲ್ಲ ಸಲ್ಲದ ಪೂಜೆ ಪುನಸ್ಕಾರಗಳನ್ನು ಮಾಡಲು ಪ್ರೇರೇಪಿಸಿ ತನ್ನ ಜೀವನ ಸಾಗಿಸುವ ದಾರಿಯನ್ನು ಸುಲಭಗೊಳಿಸಿಕೊಂಡನು. ಇದಕ್ಕೆ ಅವನ ಹೆಂಡತಿ ಮಗನ ಸಹಕಾರವೂ ಸಿಕ್ಕಿತು. ಇದ್ದಕ್ಕಿದ್ದಂತೆ ಅವನ ಮನೆ ಜ್ಯೋತಿಷ್ಯಾಲಯವಾಗಿ ಪರಿವರ್ತನೆಯಾಯಿತು. ಅವನ ವೇಷಭೂಷಣ, ಥೇಟ್ ಮಂತ್ರವಾದಿಯ ಹಾಗೆ ಬದಲಾಯಿತು. ನೋಡಿದವರಿಗೆ ಇವನು ಮಹಾನ್ ಪಂಡಿತನಂತೆ ಕಾಣುತ್ತಿದ್ದ.

ಇಂತಹ ಜ್ಯೋತಿಷ್ಯ ಹೇಳುವ ಆಸಾಮಿ ಹೇಗೆ ಜನರನ್ನು ಮರಳು ಮಾಡಿ ದುಡ್ಡು ಪೀಕುತ್ತಿದ್ದನೆಂಬುದಕ್ಕೆ ನಾನೆ ಪ್ರತ್ಯಕ್ಷ ಸಾಕ್ಷಿ. ಒಂದು ದಿನ ಸಂಜೆ ನನ್ನ ನಾದಿನಿ ಊರಿನಿಂದ ತನ್ನ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಮನೆಗೆ ಬಂದಳು. ಮಗುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು. ಯಾರೋ ಊರಿನಲ್ಲಿ ಕೊಟ್ಟ ಸಲಹೆಯಂತೆ ಮಗುವನ್ನು ಆ ಜ್ಯೋತಿಷಿಯ ಬಳಿ ತೋರಿಸಿ ತಾಯತ ಕಟ್ಟಿಸಿದರೆ ವಾಸಿಯಾಗುತ್ತದೆ ಎಂದು ಅದನ್ನೇ ನಂಬಿಕೊಂಡು ಬಂದಿದ್ದ ನಾದಿನಿಗೆ ನಾನು ಬುದ್ಧಿವಾದ ಹೇಳಲು ಪ್ರಯತ್ನಿಸಿದೆ ಒಳ್ಳೆಯ ಮಕ್ಕಳ ವೈದ್ಯರಿಗೆ ತೋರಿಸೋಣ ಎಂದು, ಆದರೆ ಅವಳು ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೋಗಲಿ ಹೋಗಿ ಬರೋಣವೆಂದು ನನ್ನ ಮಡದಿಯ ಮಾತಿಗೆ ಬೆಲೆಕೊಟ್ಟು ಕರೆದುಕೊಂಡು ಹೋದೆ.

ಅದೇ ಮೊದಲ ಬಾರಿಗೆ ನಾನು ಜ್ಯೋತಿಷಿಗಳ ಮನೆ ನೋಡಿದ್ದು. ಹೋದ ಕೂಡಲೆ ಅಲ್ಲೊಬ್ಬ ಬೀಡಿ ಸೇದುತ್ತಾ ಕೂತಿದ್ದ. ನಮ್ಮನ್ನು ಕಂಡವನೆ ಸ್ವಾಮಿಗಳು ಬರೋದು ಇನ್ನೂ ಹದಿನೈದು ನಿಮಿಷ ಆಗ್ತದೆ ಕೂತ್ಕಳಿ ಎಂದು ಆಜ್ಞೆ ಮಾಡಿದ. ಸರಿಯೆಂದು ನಾವು ಮಗುವನ್ನು ಸಮಾಧಾನ ಪಡಿಸುತ್ತಾ ಕುಳಿತೆವು. ಹದಿನೈದು ನಿಮಿಷದ ನಂತರ ಮೋಟು ಬೀಡಿ ಆಸಾಮಿ ಬಂದು ಮಹಡಿಯ ಮೇಲೆ ಇರುವ ಕೊಠಡಿಗೆ ಬನ್ನಿ ಎಂದು ಕರೆದೊಯ್ದ. ಈಗಾಗಲೇ ಐದಾರು ಮಂದಿ ಸ್ವಾಮಿಗಳನ್ನ ಕಾಣಲು ಬಂದು ಕುಳಿತಿದ್ದರು. ನಮ್ಮದು 6 ನೆಯ ಸರದಿ. ಸುಮಾರು ಅರ್ಧಗಂಟೆಯ ನಂತರ ನಮ್ಮನ್ನು ಜ್ಯೋತಿಷಿಯ ಕೊಠಡಿಗೆ ಕರೆದರು.

ಅವನನ್ನು ನೋಡಿದ ನನಗೆ ಸ್ವಲ್ಪ ಭಯವಾವಿತು ಅಜಾನುಭಾಹುವಿನಂತಿದ್ದ ಆಸಾಮಿ ಬರಿಮೈಯಲ್ಲಿ ಕಾವಿ ವಸ್ತ್ರವೊಂದನ್ನು ಸೊಂಟಕ್ಕೆ ಕಟ್ಟಿ, ಮೈಮೇಲೆಲ್ಲಾ ವಿಭೂತಿಯನ್ನು ಬಳಿದುಕೊಂಡು, ಹಣೆಯ ಮೇಲೆ ವಿಭೂತಿ ಅದರ ಮೇಲೊಂದು ಕುಂಕುಮದ ತಿಲಕ ಥೇಟ್ ನೋಡಲು ಮಂತ್ರವಾದಿಯಂತೆಯೇ ವ್ಹೀಲ್ ಚೇರ್ ಮೇಲೆ ವಿರಾಜಮಾನನಾಗಿದ್ದ. ನಮ್ಮನ್ನು ಕಂಡ ಕೂಡಲೆ ಏನು ಮಗುವಿಗೆ ತೊಂದರೆ ಎಂದು ಕೇಳಿದ. ಒಂದು ವಾರದಿಂದ ಮಗು ಸರಿಯಾಗಿ ನಿದ್ದೆ ಮಾಡುತ್ತಿಲ್ಲ ತಿಂದಿದ್ದೆಲ್ಲ ವಾಂತಿ ಮಾಡುತ್ತಿದೆ ಅಂತ ಹೇಳುವುದನ್ನೂ ಪೂರ್ತಿ ಆಲಿಸದ ಅವನು ನನ್ನ ಕಡೆ ನೋಡಿ ಪಕ್ಕದ ರೂಮಿನಲ್ಲಿ ಪೂಜೆ ಸಾಮಾನು ತೆಗೆದುಕೊಂಡು ಬನ್ನಿ ಎಂದು ಆದೇಶಿಸಿದ.

ನಾನು ಪಕ್ಕದ ರೂಮಿನ ಕಿಟಕಿಯ ಬಳಿ ಬಂದ ಕೂಡಲೇ ನೂರು ರುಪಾಯಿ ಕೊಡಿ ಎಂದು ಹೇಳಿದ ಅವನ ಪತ್ನಿ ಒಂದು ಕವರನ್ನು ನನ್ನ ಕೈಗಿತ್ತಳು. ನಾನು ನೂರು ರುಪಾಯಿ ಕೊಟ್ಟು ಕವರನ್ನು ತೆಗೆದುಕೊಂಡು ಏನಿರಬಹುದೆಂದು ಕುತೂಹಲದಿಂದ ಕವರನ್ನು ತೆರೆದು ನೋಡಿದೆ ಅದರಲ್ಲಿ ಆರು ನಿಂಬೆಹಣ್ಣು, ಅರಿಷಿಣ, ಕುಂಕುಮ, ಊದುಬತ್ತಿ, ಎಲೆ ಅಡಿಕೆ, ಒಂದು ತಾಯತ ಇಷ್ಟು ಮಾತ್ರ ಇತ್ತು. ಇಷ್ಟಕ್ಕೆ ನೂರು ರೂಪಾಯಿ ಕೊಡಬೇಕೆ ಎಂದು ಮನಸಿನಲ್ಲಿ ಬೈದುಕೊಂಡು ತಂದು ಅವನ ಕೈಗೆ ಕೊಟ್ಟೆ.

ತಕ್ಷಣ ಅವನು ಕೆಳಗಡೆ ಹೋಗಿ ಕಂಪ್ಯೂಟರ್ನಲ್ಲಿ ಒಂದು ಜಾತಕ ಕೊಡ್ತಾನೆ ತಗೊಂಡ್ ಬನ್ನಿ ಅಂದ. ನಾನು ಮತ್ತೇ ಅವನಿಗೆ ಶಾಪ ಹಾಕುತ್ತಾ ಕೆಳಗಡೆ ಬಂದರೆ ಅಲ್ಲಿ ಅವನ ಹತ್ತು ವರ್ಷದ ಮಗ ಅವನಿಗೆ ಮಗುವಿನ ಹೆಸರನ್ನು ಕೂಡ ಟೈಪ್ ಮಾಡಲು ಬರುವುದಿಲ್ಲ. ನಾನು ಹೊಯ್ಸಳ್ ಎಂದು ಹೇಳಿದ ಕೂಡಲೆ ಸ್ಪೆಲ್ಲಿಂಗ್ ಹೇಳಿ ಅಂಕಲ್ ಅಂದ ನನಗೆ ಸಿಟ್ಟು ನೆತ್ತಿಗೇರಿತು ಆದರೂ ತಾಳ್ಮೆತಂದುಕೊಂಡು ಸ್ಪೆಲ್ಲಿಂಗ್ ಹೇಳಿದ ಕೂಡಲೆ ಅವನೊಂದು ಪ್ರಿಂಟ್ ಕೊಟ್ಟ ನಾನು ತೆಗೆದುಕೊಂಡು ವಾಪಸ್ ಬರಬೇಕಾದರೆ ಅಂಕಲ್ ನೂರು ರುಪಾಯಿ ಕೊಡಿ ಅಂದ, ಆಗಲೆ ಕೊಟ್ಟೆ ಕಣಪ್ಪ ಅಂದರೆ ಅದು ಅಮ್ಮನ ಲೆಕ್ಕ ಇದು ನನ್ನ ಲೆಕ್ಕ ಕೊಡಿ ಎಂದ. ಮನಸಿಲ್ಲಿಯೇ ಬೈದುಕೊಳ್ಳುತ್ತಾ ನೂರು ರುಪಾಯಿ ನೋಟೊಂದನ್ನು ಕೊಟ್ಟು, ಕಾಗದವನ್ನು ತಂದು ಜ್ಯೋತಿಷಿಯ ಕೈಗಿತ್ತ ಕೂಡಲೇ ನೋಡಿ ಮಗುವಿಗೆ ನಾಗದೋಷವಿದೆ. ಇದಕ್ಕೆ ಒಂದು ಪೂಜೆ ಮಾಡಿಸಬೇಕು, ಈಗ ಸದ್ಯಕ್ಕೆ ಈ ತಾಯತ ಕಟ್ಟುತ್ತೇನೆ ಮೂರು ದಿನ ಬಿಟ್ಟು ಬಂದರೆ ನಾಗದೋಷದ ಪೂಜೆ ಮಾಡಿಕೊಡುತ್ತೇನೆ ಎಂದ.

ನಾನು ಎಷ್ಟಾಗಬಹುದು ಸ್ವಾಮಿ ಪೂಜೆಗೆ ಎಂದೆ ಜಾಸ್ತಿ ಏನಿಲ್ಲ ಕೇವಲ ಮೂರು ಸಾವಿರ ಅಷ್ಟೇ ಎಂದ ನನಗೆ ಕೋಪ ಕೊತಕೊತನೆ ಕುದಿಯತೊಡಗಿತು. ಅವನ ಬಳಿ ಬಂದದ್ದು ಮೊದಲ ತಪ್ಪೆಂದು ತಾಳ್ಮೆ ತಂದುಕೊಂಡು ಆಯಿತು ಮಹಾಸ್ವಾಮಿ ಮೂರುದಿನ ಬಿಟ್ಟು ಬರುತ್ತೇವೆ ಈಗ ಸದ್ಯಕ್ಕೆ ತಾಯತ ಕಟ್ಟಿ ಅಂದೆ. ನೂರು ರುಪಾಯಿ ಕೊಟ್ಟು ತಂದ ಪೂಜಾ ಸಾಮಗ್ರಿಯ ಕವರಿನಲ್ಲಿದ್ದ ಒಂದು ನಿಂಬೆಹಣ್ಣು ಹಾಗೂ ತಾಯತವನ್ನು ಮಾತ್ರ ಕೈಗೆತ್ತಿಕೊಂಡು ತಾಯತಕ್ಕೆ ಅರಿಷಿಣ ದಾರ ಕಟ್ಟಿ ಓಂ ಭೂಂ ಛೂ ಮಂತ್ರಕಾಳಿ ಅಂತ ಮೂರು ಸಲ ಉಗಿದು ಮಗುವಿನ ಕೊರಳಿಗೆ ಕಟ್ಟಿ, ಉಳಿದ ವಸ್ತುಗಳಿದ್ದ ಕವರನ್ನು ಮೋಟು ಬೀಡಿ ಆಸಾಮಿಯ ಕೈಗಿತ್ತ. ಮೋಟುಬೀಡಿ ಆಸಾಮಿ ಅದನ್ನು ಭಕ್ತಿಯಿಂದ ತಂದು ಮತ್ತೆ ಅಮ್ಮನವರ ಕೈಗಿತ್ತ. ನನಗೆ ಸಿಟ್ಟು ತಡೆಯಲಾಗಲಿಲ್ಲ ಎಂಥ ದಗಲ್ಬಾಜಿ ಕೆಲಸ ಮಾಡುತ್ತಿರುವಿರಿ ಎಂದು ಕೇಳಿದ್ದಕ್ಕೆ ನೀವು ಮತ್ತೆ ಬಂದಾಗ ಅದೇ ಪೂಜೆ ಸಾಮಾನು ಕೊಡುತ್ತೇವೆ ಎಂದು ಸಮಜಾಯಿಷಿಯನ್ನೂ ನೀಡಿದ.

ಅದೇ ಕವರನ್ನು ಮತ್ತೊಬ್ಬ ಗಿರಾಕಿಗೆ ಕೊಡುವ ಹುನ್ನಾರ ಅವರದು. ಥೂ ಇವರ ಜನ್ಮಕ್ಕಿಷ್ಟು ಬೆಂಕಿ ಹಾಕ ಎಂದು ಬೈದುಕೊಂಡು, ಸರಿ ನಾವಿನ್ನು ಹೊರಡಬಹುದೆ ಎಂದು ಎದ್ದರೆ ಮುನ್ನೂರು ರುಪಾಯಿ ಕೊಡಿ ತಾಯತದ್ದು ಎನ್ನಬೇಕೆ. ಮತ್ತೆ ಪಿತ್ತ ನೆತ್ತಿಗೇರಿತು ಜಗಳ ಮಾಡಬೇಕೆನಿಸಿತು ಆದರೆ ಜೊತೆಯಲ್ಲಿ ಮಡದಿ, ನಾದಿನಿ ಇದ್ದುದರಿಂದ ಬಾಯಿ ಮುಚ್ಚಿಕೊಂಡು ಮುನ್ನೂರು ರುಪಾಯಿ ಅವನ ಮುಖದ ಮೇಲೆ ಬಿಸಾಕಿ ಮನೆಗೆ ಬಂದು, ಒಂದು ತಾಯತ ಕಟ್ಟುವ ಸಲುವಾಗಿ ಐನೂರು ರುಪಾಯಿ ಕ್ಷೌರ ಮಾಡಿಕೊಳ್ಳಬೇಕೆ ಎಂದು ಇಬ್ಬರಿಗೂ ಚಳಿಜ್ವರ ಬಿಡಿಸಿದೆ. ಮೊದಲು ಹೋಗಿ ಯಾರಾದರೂ ಒಳ್ಳೆಯ ಮಕ್ಕಳ ವೈದ್ಯರಿಗೆ ತೋರಿಸು ಎಂದು ಗದರಿ ಕಳಿಸಿದೆ. ಹೀಗೆ ಪ್ರತಿನಿತ್ಯ ಅದೆಷ್ಟು ಅಮಾಯಕರಿಗೆ ಟೋಪಿ ಹಾಕುತ್ತಿದ್ದಾನೋ ಜ್ಯೋತಿಷಿ.

ಕೆಲವು ವರ್ಷಗಳ ನಂತರ ಒಂದು ದಿನ ಪತ್ರಿಕೆ ಮತ್ತು ಮಾದ್ಯಮಗಳಲ್ಲಿ ಆ ಊರಿನ ಜ್ಯೋತಿಷಿ ಮತ್ತು ಅವನ ಛೇಲಾಗಳು ಕೇರಳಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿ ಅವನ ಸಹಚರರು ಮೃತಪಟ್ಟಿದ್ದಾರೆ ಜ್ಯೋತಿಷಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂಬ ಸುದ್ದಿ ಬಿತ್ತರವಾಗುತ್ತಿತ್ತು. ಅದನ್ನು ನೋಡಿದ ನಾನು ಮನಸಿನಲ್ಲಿಯೇ ಎಷ್ಟು ಜನ ಅಮಾಯಕರ ಶಾಪ ತಟ್ಟಿದೆಯೋ ಏನೋ ಅದಕ್ಕೆ ಹೀಗಾಗಿರಬೇಕು ಎಂದುಕೊಂಡು, ಹೌದು ಎಲ್ಲರ ಭವಿಷ್ಯವನ್ನು ಹೇಳುವ ಇವನಿಗೆ ಅಪಘಾತವಾಗುವ ಮುನ್ಸೂಚನೆ ಸಿಗಲಿಲ್ಲವೇಕೆ ? ತನ್ನ ಸಹಚರರ ಪ್ರಾಣ ಬಲಿಕೊಟ್ಟನೇಕೆ ? ಇಂಥ ಡೋಂಗಿ ಜ್ಯೊತಿಷಿಗಳನ್ನು ಇನ್ನೂ ಜನ ನಂಬುವರೆಲ್ಲ ಎಂಬ ಜಿಜ್ಞಾಸೆ ನನ್ನ ಕಾಡುತ್ತಿತ್ತು. ಇಂತಿಪ್ಪ ಜ್ಯೋತಿಷಿಯು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದನಂತೆ ನಾನು ಸದಾ ಬಡವರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ, ನಾಡು ನುಡಿ ಭಾಷೆಯ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ, “ಪರೋಪಕಾರಂ ಇದಂ ಶರೀರಂ” ಎಂಬಂತೆ ಬದುಕುತ್ತಿದ್ದೇನೆ ಎಂದು ಇದನ್ನು ಕೇಳಿದ ನನಗೆ ಎಲ್ಲೆಲ್ಲೋ ನಗು ಬಂತು.. “ಮಾಡುವುದು ಅನಾಚಾರ ಮನೆಮುಂದೆ ಬೃದಾವನ” ಎಂಬ ಗಾದೆಮಾತು ನೆನಪಾಯಿತು..!!

ದೇವರಾಜ್ ನಿಸರ್ಗತನಯ
ಬಂಗಾರಪೇಟೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.